ವಿಜಯಪುರ: ಅಕ್ರಮ ಮರಳು ದಂಧೆ ರಾಜಾರೋಷವಾಗಿ ನಡೆಯುತ್ತಿದ್ದರೂ ಅದನ್ನು ತಡೆಯಬೇಕಾದ ಪೊಲೀಸ್ ಅಧಿಕಾರಿಗಳೇ ಈ ದಂಧೆಯಲ್ಲಿ ಶಾಮೀಲಾಗಿರುವ ಆರೋಪ ಕೇಳಿ ಬರುತ್ತಿದೆ. ಹೀಗಾಗಿ ಕೂಡಲೇ ಅಕ್ರಮ ದಂಧೆಗೆ ಕಡಿವಾಣ ಹಾಕಿ ಪಾಲುದಾರಿಕೆ ಹೊಂದಿರುವ ಪೊಲೀಸರನ್ನು ಪತ್ತೆ ಹಚ್ಚಿ ಕಠಿಣ ಕ್ರಮ ಕೈಗೊಳ್ಳುವಂತೆ ಕೆಆರ್‌ಎಸ್ ಪಕ್ಷ ಆಗ್ರಹಿಸಿದೆ.
ಬುಧವಾರ ಜಿಲ್ಲಾ ಪೊಲೀಸ್ ಅಧೀಕ್ಷಕರ ಕಚೇರಿ ಎದುರು ಪಕ್ಷದ ರಾಜ್ಯ ಸಂಘಟನಾ ಕಾರ್ಯದರ್ಶಿ ಶಿವಾನಂದ ಯಡಹಳ್ಳಿ ನೇತೃತ್ವದಲ್ಲಿ ಕೆಲ ಕಾಲ ಪ್ರತಿಭಟನೆ ನಡೆಸಿದ ಪಕ್ಷದ ಪದಾಧಿಕಾರಿಗಳು ಆ ಬಳಿಕ ಜಿಲ್ಲಾ ಪೊಲೀಸ್ ಅಧೀಕ್ಷಕ ರಿಷಿಕೇಶ ಸೋನವಾನೆ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು.
ಕಳೆದ ಎರಡು ವರ್ಷಗಳಿಂದ ಜಿಲ್ಲೆಯಲ್ಲಿ ಅಕ್ರಮ ಮರಳುಗಾಣಿಗೆ ತಡೆಯುವ ನಿಟ್ಟಿನಲ್ಲಿ ಕೆಆರ್‌ಎಸ್ ಪಕ್ಷ ಹೋರಾಟ ಮಾಡಿಕೊಂಡು ಬಂದಿದೆ. ಜಿಲ್ಲೆಯಲ್ಲಿ ಮರಳು ಗಣಿಗಾರಿಕೆ ನಡೆಸಲು ಏಕೈಕ ಗುತ್ತಿಗೆ ನೀಡಲಾಗಿದೆ. ಆದರೂ ಬೇರೆ ಬೇರೆ ಮೂಲಗಳಿಂದ ಮರಳು ಸಾಗಾಟವಾಗುತ್ತಿದೆ. ಇದರಲ್ಲಿ ಪೊಲೀಸ್ ಇಲಾಖೆಯೂ ಶಾಮೀಲಿದೆ ಎಂಬ ಮಾತಿದೆ. ಇಲ್ಲದೇ ಹೋದರೆ ಇಷ್ಟೆಲ್ಲಾ ರಾಜಾರೋಷವಾಗಿ ಮರಳು ಸಾಗಾಟ ನಡೆಯುವುದಾದರೂ ಹೇಗೆ? ಎಂದು ಪ್ರಶ್ನಿಸಿದರು.
ಪ್ರತಿ ಠಾಣೆಯಲ್ಲಿ ಶೇ. 25 ಪೊಲೀಸ್ ಸಿಬ್ಬಂದಿ ತಮ್ಮ ಸಂಬಂಧಿಗಳ ಹೆಸರಿನಲ್ಲಿ ಟಿಪ್ಪರ್ ಖರೀದಿಸಿದ್ದಾರೆ. ಮರಳು ದಂಧೆಗೆ ಇದೇ ಟಿಪ್ಪರ್‌ಗಳನ್ನು ಬಳಸಿಕೊಳ್ಳಲಾಗುತ್ತಿದೆ ಎಂಬ ಮಾತು ಕೇಳಿ ಬರುತ್ತಿದೆ. ಕಳೆದ ಐದು ದಿನಗಳ ಹಿಂದೆ ಜಲನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಾಲ್ಕು ಮರಳು ಟಿಪ್ಪರ್‌ಗಳನ್ನು ವಶಕ್ಕೆ ಪಡೆಯಲಾಗಿದೆ. ಅದರಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಯಲ್ಲಿಯೇ ಕೆಲಸ ಮಾಡುವ ಪೊಲೀಸ್ ಸಿಬ್ಬಂದಿಯ ಗಾಡಿ ಸಹ ಇದೆ ಎಂದು ಸಾರ್ವಜನಿಕರು ತಿಳಿಸಿದ್ದಾರೆ. ಈ ಬಗ್ಗೆ ತನಿಖೆಯಾಗಬೇಕೆಂದರಲ್ಲದೇ, ವಶಕ್ಕೆ ಪಡೆದ ಮರಳು ತುಂಬಿದ ವಾಹನಗಳ ಮೇಲೆ ಎಫ್‌ಐಆರ್ ದಾಖಲಿಸಲು ವಿಳಂಬ ನೀತಿ ಅನುಸರಿಸುತ್ತಿರುವವರ ಮೇಲೂ ಕ್ರಮ ಕೈಗೊಳ್ಳಬೇಕೆಂದರು.
ಮುಖಂಡರಾದ ಹಮೀದ ಇನಾಮದಾರ, ರಾಕೇಶ್ ಇಂಗಳಗಿ, ಪ್ರವೀಣ್ ಕನಸೆ, ಮೈಬೂಬ್ ತಾಂಬೋಳಿ, ರಾಘವೇಂದ್ರ ಚಲವಾದಿ, ಮಾಂತೇಶ್ ಮರ್ನೂರ್ ಮತ್ತಿತರರಿದ್ದರು.