ಕೆ.ಆರ್.ಸಾಗರ : ಸೌದಿ ಅರೇಬಿಯಾದ ಧಮ್ಮಮ್ ನಲ್ಲಿ ನಡೆದ 18 ವರ್ಷದೊಳಗಿನ ‘ಏಷ್ಯನ್ ಯು- 18 ಚಾಂಪಿಯನ್ಸ್’ ಕೂಟದ ರಿಲೇ ಪಂದ್ಯದಲ್ಲಿ ಭಾರತಕ್ಕೆ ಬೆಳ್ಳಿ ಪದಕ ಗಳಿಸಿಕೊಟ್ಟ ಪಿ. ಚಿರಂತ್‌ಗೆ ಭಾನುವಾರ ತವರೂರು ಬೆಳಗೊಳ ಗ್ರಾಮದಲ್ಲಿ ಗ್ರಾಮಸ್ಥರರು ಅದ್ದೂರಿ ಸ್ವಾಗತ ಮತ್ತು ಸನ್ಮಾನ ನೆರವೇರಿಸಿದರು.
ಗ್ರಾಮ ಪಂಚಾಯಿತಿ ಅಧ್ಯಕ್ಷ ಪುಟ್ಟರಾಜು ನೇತೃತ್ವದಲ್ಲಿ ಗ್ರಾಮಸ್ಥರು ಸಮಾವೇಶಗೊಂಡು ಬೆಂಗಳೂರಿನಿಂದ ನೇರವಾಗಿ ಗ್ರಾಮಕ್ಕೆ ಆಗಮಿಸಿದ ಚಿರಂತ್‌ಗೆ ಭವ್ಯ ಸ್ವಾಗತ ನೀಡಿದರು. ಕ್ರೀಡಾ ತಾರೆಯನ್ನು ಕಾರಿನ ಮೇಲೆ ಕೂರಿಸಿ, ಗ್ರಾಮಸ್ಥರು ಬೈಕುಗಳ ಮೂಲಕ ಮೆರವಣಿಗೆಯಲ್ಲಿ ಸಾಗಿ ಗ್ರಾಮದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ಸಂಭ್ರಮಿಸಿದರು. ಬೆಳಗೊಳ ಗ್ರಾಪಂ ಅಧ್ಯಕ್ಷ ಪುಟ್ಟರಾಜು ಮಾತನಾಡಿ, ಗ್ರಾಮದ ಕವಿತಾ ಮತ್ತು ಪ್ರಸನ್ನ ಅವರ ಪುತ್ರ ಚಿರಂತ್ ಮೈಸೂರಿನ ಕಾಲೇಜೊಂದರಲ್ಲಿ ಈ ಬಾರಿ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದಾರೆ. ಓಟ ಮತ್ತು ರಿಲೇ ಪಂದ್ಯದಲ್ಲಿ ರಾಜ್ಯ, ಹೊರ ರಾಜ್ಯಗಳಕ್ರೀಡಾಕೂಟದಲ್ಲಿ ಈಗಾಗಲೇ ಹಲವು ಬಹುಮಾನ, ಪದಕ ಗಳಿಸಿದ ಕೀರ್ತಿಗೆ ಭಾಜನರಾಗಿದ್ದಾರೆ. ಇದೀಗ ದೇಶವನ್ನೇ ಪ್ರತಿನಿಧಿಸಿ ರಿಲೇ ಪಂದ್ಯದಲ್ಲಿ ಬೆಳ್ಳಿ ಪದಕ ಗಳಿಸಿರುವುದು ದೇಶಕ್ಕೆ ಕೀರ್ತಿ. ಜನಿಸಿದ ಊರಿಗೆ ಹೆಮ್ಮೆ ಎಂದರು. ಗ್ರಾಪಂ ಮಾಜಿ ಅಧ್ಯಕ್ಷ ಬಿ.ವಿ.ಸುರೇಶ್, ಉಪಾಧ್ಯಕ್ಷ ಮಂಜುನಾಥ್, ಗ್ರಾಪಂ ಸದಸ್ಯರಾದ ರವಿ, ಪ್ರಕಾಶ್, ಸೊಸೈಟಿ ಮಾಜಿ ಅಧ್ಯಕ್ಷ ಬಿ.ವಿ. ವೆಂಕಟೇಶ್, ಚಾಮುಂಡಿ ರವಿ, ಹರೀಶ್ ಸೇರಿದಂತೆ ಗ್ರಾಮದ ಯುವ ಮುಖಂಡರು, ಹಿರಿಯ ನಾಗರಿಕರು ಹಾಜರಿದ್ದು, ಕ್ರೀಡಾಪಟುವಿಗೆ ಅಭಿನಂದಿಸಿದರು.