ಮಂಡ್ಯ: ತೀವ್ರ ವಿರೋಧದ ನಡುವೆಯೂ ತಮಿಳುನಾಡಿಗೆ ನೀರು ಹರಿಸುತ್ತಿರುವ ಹಿನ್ನೆಲೆಯಲ್ಲಿ ಕೆಆರ್‌ಎಸ್ ಅಣೆಕಟ್ಟೆಯ ನೀರಿನ ಮಟ್ಟ 98 ಅಡಿಗೆ ಕುಸಿದಿದೆ. ಇನ್ನೊಂದೆಡೆ ಸುಪ್ರೀಂ ಕೋರ್ಟ್‌ನಲ್ಲಿ ನಡೆಯಬೇಕಿದ್ದ ಕಾವೇರಿ ನದಿ ನೀರು ಹಂಚಿಕೆ ಅರ್ಜಿ ವಿಚಾರಣೆಯನ್ನು ಮುಂದೂಡಿರುವುದು ಆತಂಕ ಹೆಚ್ಚಿಸಿದೆ. ಮತ್ತೊಂದೆಡೆ ಜಿಲ್ಲೆಯಲ್ಲಿ ಸಂಘಟನೆಗಳ ಪ್ರತಿಭಟನೆ ಮುಂದುವರೆದಿದೆ.
ಎಂಟು ದಿನದಿಂದ ಸತತವಾಗಿ ನೀರು ಹರಿಸುತ್ತಿರುವುದರಿಂದ ಸುಮಾರು ಮೂರು ಟಿಎಂಸಿಯಷ್ಟು ನೀರು ಖಾಲಿಯಾಗಿದೆ. ಅಂತೆಯೇ ನೀರಿನ ಮಟ್ಟ ಕುಸಿತವಾಗುತ್ತಿದ್ದು, ಮುಂದಿನ ಏಳು ದಿನವೂ ಹರಿಸಿದರೆ ಮತ್ತೆ ಮೂರು ಟಿಎಂಸಿ ಹರಿದುಹೋಗಲಿದೆ. ಸಧ್ಯಕ್ಕೆ ಡ್ಯಾಂನಲ್ಲಿ 21 ಟಿಎಂಸಿ ನೀರು ಉಳಿದಿದೆ. ಈ ಪೈಕಿ ಐದು ಟಿಎಂಸಿ ಡೆಡ್ ಸ್ಟೋರೆಜ್ ಆಗಿರುವುದರಿಂದ 16 ಟಿಎಂಸಿ ಮಾತ್ರ ಬಳಕೆಗೆ ಲಭ್ಯವಾಗಲಿದೆ. ಇತ್ತ ವಿಚಾರಣೆ ಕೂಡ ಮುಂದೂಡಿರುವುದರಿಂದ ಒಂದೆಡೆ ಬೆಳೆಗೆ ನೀರು ಸಿಗುವ ಅನುಮಾನ ದಟ್ಟವಾದರೆ, ಮತ್ತೊಂದಡೆ ಕುಡಿಯುವ ನೀರಿಗೂ ತತ್ವಾರ ಎದುರಾಗುವ ಸಾಧ್ಯತೆ ಹೆಚ್ಚಾಗುತ್ತಿದೆ.
ಸುಪ್ರೀಂ ಕೋರ್ಟ್ ಕಾವೇರಿ ನದಿ ನೀರು ಹಂಚಿಕೆ ಅರ್ಜಿ ವಿಚಾರಣೆಯನ್ನು ಮುಂದೂಡಿದ ಹಿನ್ನೆಲೆಯಲ್ಲಿ ಮಂಡ್ಯ ನಗರದಲ್ಲಿ ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ಹಾಗೂ ವಿವಿಧ ಸಂಘಟನೆಗಳ ಪ್ರತಿಭಟನಾಕಾರರು ಹೆದ್ದಾರಿ ಸಂಚಾರ ತಡೆದು ಆಕ್ರೋಶ ವ್ಯಕ್ತಪಡಿಸಿದರು. ಕಾರ್ಯಕರ್ತರು ದಿಢೀರ್ ಬೆಂ-ಮೈ ಹಳೇ ಹೆದ್ದಾರಿಯಲ್ಲಿ ಕುಳಿತು ಧರಣಿ ನಡೆಸಿದರು. ಇದರಿಂದಾಗಿ ಕೆಲವೊತ್ತು ವಾಹನಗಳ ಸಂಚಾರ ಅಸ್ತವ್ಯಸ್ತಗೊಂಡಿತು. ಬಳಿಕ ಧರಣಿ ಹಿಂಪಡೆದು ಮುಂದಿನ ಹೋರಾಟದ ಬಗ್ಗೆ ರೂಪುರೇಷೆ ಸಿದ್ಧಪಡಿಸಲು ತೀರ್ಮಾನಿಸಲಾಯಿತು.
ಇನ್ನು ತ.ನಾಡಿಗೆ ಹರಿಸುತ್ತಿರುವ ನೀರು ಸ್ಥಗಿತಗೊಳಿಸಬೇಕು ಹಾಗೂ ಸುಪ್ರೀಂ ಕೋರ್ಟ್‌ನಲ್ಲಿ ತೀರ್ಪು ರಾಜ್ಯದ ಪರವಾಗಿ ಬರಲೆಂದು ಪ್ರಾರ್ಥಿಸಿ ನಗರದಲ್ಲಿ ಕಸ್ತೂರಿ ಕರ್ನಾಟಕ ಜನಪರ ವೇದಿಕೆ ಕಾರ್ಯಕರ್ತರು ಉರುಳು ಸೇವೆ ಮಾಡಿದರು. ಅಂತೆಯೇ ಕೃಷ್ಣರಾಜಸಾಗರ ಜಲಾಶಯದಿಂದ ತ.ನಾಡಿಗೆ ನೀರು ಹರಿಸುತ್ತಿರುವ ರಾಜ್ಯ ಸರ್ಕಾರದ ಧೋರಣೆ ಖಂಡಿಸಿ ನಗರದಲ್ಲಿ ಕನ್ನಡ ಸೇನೆ ಕಾರ್ಯಕರ್ತರು ಚಡ್ಡಿ ಮೆರವಣಿಗೆ ನಡೆಸಿದರು. ಜಯಚಾಮರಾಜೇಂದ್ರ ಒಡೆಯರ್ ವೃತ್ತದಲ್ಲಿ ಜಮಾವಣೆಗೊಂಡ ಕಾರ್ಯಕರ್ತರು, ಪಟಾಪಟಿ ಚಡ್ಡಿ ಧರಿಸಿ ಹಾಗೂ ಖಾಲಿ ಬಿಂದಿಗೆ ಪ್ರದರ್ಶಿಸಿದರು. ರಾಜ್ಯಸರ್ಕಾರದ ವಿರುದ್ಧ ಭೂಮಿ ತಾಯಿ ಹೋರಾಟ ಸಮಿತಿಯಿಂದ ಶ್ರೀರಂಗಪಟ್ಟಣದಲ್ಲಿ ಪ್ರತಿಭಟನೆ ಬುಧವಾರವೂ ನಡೆಯಿತು. ರೈತ ನಾಯಕ ಕೆ.ಎಸ್.ನಂಜುಂಡೇಗೌಡ ನೇತೃತ್ವದಲ್ಲಿ ಚಡ್ಡಿ ಧರಿಸಿ ಪ್ರತಿಭಟನಾ ಮೆರವಣಿಗೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು. ಅಂತೆಯೇ ಕೆಆರ್‌ಎಸ್ ಡ್ಯಾಂ ಎದುರು ಶಾಸಕ ದರ್ಶನ್ ಪುಟ್ಟಣಯ್ಯ ನೇತೃತ್ವದಲ್ಲಿ ನಡೆಯುತ್ತಿರುವ ಅಹೋರಾತ್ರಿ ಧರಣಿ ಏಳನೇ ದಿನ ಪೂರೈಸಿದೆ.