ಜಿಲ್ಲೆ

ಕೆಆರ್‌ಎಸ್ ಅಣೆಕಟ್ಟು ಕಟ್ಟಿದ್ದು ಮಹಾರಾಜರು. ಆದರೆ, ಅದೇ ಜಾಗದಲ್ಲಿ ಮೊದಲು ಬ್ಯಾರೇಜ್ ಕಟ್ಟಿದ್ದು ಟಿಪ್ಪು ಸುಲ್ತಾನ್ : ಎಂ. ಲಕ್ಷ್ಮಣ್ ಹೇಳಿಕೆ

ಸದೇಶ್ ಕಾರ್ಮಾಡ್

ಮೈಸೂರು: ಕೆಆರ್‌ಎಸ್ ಜಲಾಶಯ ನಿರ್ಮಾಣಕ್ಕೆ ಟಿಪ್ಪು ಸುಲ್ತಾನ್ ಅಡಿಗಲ್ಲು ಹಾಕಿದ್ದರು ಎಂಬ ಸಚಿವ ಡಾ.ಎಚ್.ಸಿ.ಮಹದೇವಪ್ಪ ಹೇಳಿಕೆಯಲ್ಲಿ ಯಾವುದೇ ತಪ್ಪು ಇಲ್ಲ ಎಂದು ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್ ಸಮರ್ಥಿಸಿಕೊಂಡರು.

ಮಹದೇವಪ್ಪ ಹೇಳಿದ್ದು ನೂರಕ್ಕೆ ನೂರು ಸತ್ಯ. ಅಣೆಕಟ್ಟು ಕಟ್ಟಿದ್ದು ಮಹಾರಾಜರು. ಆದರೆ, ಅದಕ್ಕೆ ಮೊದಲು ಅದೇ ಜಾಗದಲ್ಲಿ ಬ್ಯಾರೇಜ್ ಕಟ್ಟಿದ್ದು ಟಿಪ್ಪು. ಮೋವಿ ಡ್ಯಾಂ ಅಂತ ಅದಕ್ಕೆ ಹೆಸರಿಟ್ಟು 6 ಟಿಎಂಸಿ ನೀರು ಸಂಗ್ರಹಣ ಸಾಮರ್ಥ್ಯದ ಬ್ಯಾರೇಜ್ ನಿರ್ಮಿಸಿದ್ದರು. ಆ ಬ್ಯಾರೇಜ್ ಮೂಲಕ ಶ್ರೀರಂಗಪಟ್ಟಣ, ಕೆ.ಆರ್. ನಗರ ಭಾಗಕ್ಕೆ ನೀರು ಹರಿಸುತ್ತಿದ್ದರು. ನಂತರ ಅದೇ ಜಾಗದಲ್ಲೆ ಕೆಆರ್‌ಎಸ್ ಅಣೆಕಟ್ಟು ನಿರ್ಮಾಣ ಮಾಡಲಾಯಿತು. ಇದಕ್ಕೆ ಶಾಸನದ ಸಾಕ್ಷಿ ಇದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಮೈಸೂರು ಲೋಕಸಭಾ ಚುನಾವಣೆಯಲ್ಲಿ ಬಹಳ ಲೋಪವಾಗಿದೆ. ಬಿಜೆಪಿ ನಾಯಕರು ಮತಗಳ್ಳತನ ಮಾಡಿದ್ದಾರೆ.ಒಟ್ಟು 2202 ಬೂತ್‌ನಲ್ಲಿ 292 ಬೂತ್‌ಗಳಲ್ಲಿ ಮತಗಳ್ಳತನ ಆಗಿದೆ. 292 ಇವಿಎಂ ಯಂತ್ರದಲ್ಲಿ ರಿಗ್ಗಿಂಗ್ ಆಗಿದೆ. 292 ಬೂತ್‌ಗಳಲ್ಲಿ 1 ಲಕ್ಷ 45 ಸಾವಿರ ಮತಗಳಿವೆ. ಅದರಲ್ಲಿ 22 ಸಾವಿರ ಮತ ಮಾತ್ರ ಕಾಂಗ್ರೆಸ್‌ಗೆ ಬಂದಿವೆ. ಕಳೆದ ನಾಲ್ಕು ಚುನಾವಣೆಯಲ್ಲಿ ಇದೇ ಬೂತ್‌ಗಳಲ್ಲಿ ಕಾಂಗ್ರೆಸ್‌ಗೆ ಶೇಕಡಾ 50 ರಿಂದ 60 ಮತ ಬಂದಿದ್ದವು. ಒಂದು ಬೂತ್ ವ್ಯಾಪ್ತಿಯಲ್ಲಿ 15 ಮನೆ ಕಾಂಗ್ರೆಸ್ ಕಾರ್ಯಕರ್ತರದ್ದು, ಅಲ್ಲಿ 750 ಮತಗಳಿಲ್ಲವೇ? ಆದರೆ ಕಾಂಗ್ರೆಸ್‌ಗೆ ಬಂದಿದ್ದು ಬರೀ ಏಳು ಮತ ಮಾತ್ರ. ಎನ್.ಆರ್. ಕ್ಷೇತ್ರದ ಶಾಂತಿ ನಗರದಲ್ಲೂ ಇದೇ ರೀತಿ ಆಗಿದೆ ಎಂದು ಆರೋಪಿಸಿದರು.