ಕೆ.ಆರ್.ಪೇಟೆ : ತಾಲೂಕಿನ ಅಗ್ರಹಾರ ಬಾಚಹಳ್ಳಿ ಗ್ರಾಮದಲ್ಲಿ ಗ್ರಾಮದೇವತೆ ಶ್ರೀ ಲಕ್ಷ್ಮೀದೇವಿ (ಬಾಚಳ್ಳಮ್ಮ) ಅಮ್ಮನವರ ಸಿಡಿಹಬ್ಬದ ಅಂಗವಾಗಿ ಶನಿವಾರ ಮಹಾ ರಥೋತ್ಸವ ವಿಜೃಂಭಣೆಯಿಂದ ನೆರವೇರಿತು.
ಗ್ರಾಮದ ಅರಳೀಮರದ ವೃತ್ತದಲ್ಲಿ ಶನಿವಾರ ಮಧ್ಯಾಹ್ನ 3ಗಂಟೆಗೆ ಗ್ರಾಮದ ಯಜಮಾನರುಗಳು ರಥಕ್ಕೆ ಸಾಂಪ್ರದಾಯಿಕ ಪೂಜೆ ಸಲ್ಲಿಸಿ ರಥೋತ್ಸವಕ್ಕೆ ಚಾಲನೆ ನೀಡಿದರು. ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ಸಾವಿರಾರು ಭಕ್ತರು ರಥಕ್ಕೆ ಹಣ್ಣು-ಜವನ ಸಮರ್ಪಿಸಿ ಉಘೇ.. ಲಕ್ಷ್ಮೀ ದೇವಿ, ಉಘೇ... ಬಾಚಳ್ಳಮ್ಮ ಉಘೇ... ಉಘೇ... ಎಂಬ ಜಯಘೋಷಗಳನ್ನು ಮೊಳಗಿಸಿ ರಥವನ್ನು ಎಳೆದು ಭಕ್ತಿ-ಭಾವ ಸಮರ್ಪಿಸಿದರು.
ಅರಳೀಮರ ವೃತ್ತದಿಂದ ಆರಂಭವಾದ ರಥೋತ್ಸವವು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಪಕ್ಕದ ಬೀದಿ, ಚನ್ನಕೇಶವಸ್ವಾಮಿ ದೇವಾಲಯದ ಮುಂಭಾಗದ ಗದ್ದೆ ಬದುಗಳ ಮೂಲಕ ಬ್ರಾಹ್ಮಣರ ಬೀದಿ ಹಾಗೂ ರಂಗದ ಬೀದಿಯಲ್ಲಿ ಸಾಗಿ ರಂಗಸ್ಥಳದಲ್ಲಿ ಸಮಾಪನಗೊಂಡಿತು. ರಥೋತ್ಸವದಲ್ಲಿ ಭಾಗವಹಿಸಿದ್ದ ಸಕಲ ಭಕ್ತರಿಗೆ ಗ್ರಾಮದ ಸರ್ಕಾರಿ ನೌಕರರ ಸಂಘದ ವತಿಯಿಂದ ಅನ್ನದಾನ ಹಮ್ಮಿಕೊಳ್ಳಲಾಗಿತ್ತು.
ನೆರಳು ಚಪ್ಪರದ ಮೆರವಣಿಗೆ: ರಥೋತ್ಸವಕ್ಕೂ ಮುನ್ನ ಗ್ರಾಮದ ಬ್ರಾಹ್ಮಣ ಸೇವಾ ಸಮಿತಿ ವತಿಯಿಂದ ಲಕ್ಷ್ಮೀ ದೇವಿ ಅಮ್ಮನವರ ಹಾಗೂ ಚನ್ನಕೇಶವ ಸ್ವಾಮಿ ಉತ್ಸವ ಮೂರ್ತಿಯ ನೆರಳು ಚಪ್ಪರದ ಮೆರವಣಿಗೆ ನೆರವೇರಿತು. ಬ್ರಾಹ್ಮಣರ ಬೀದಿಯಿಂದ ಆರಂಭವಾಗಿ ಪ್ರಮುಖ ರಾಜಬೀದಿಯಲ್ಲಿ ಸಾಗಿ ದೇವಾಲಯದ ವರೆಗೆ ಸಾಗಿತು. ತಾಲೂಕಿನ ವಿವಿಧ ಗ್ರಾಮಗಳಿಂದ ಆಗಮಿಸಿದ್ದ ಬ್ರಾಹ್ಮಣರ ಸೇವಾ ಸಮಿತಿ ಸದಸ್ಯರು ದೇವರ ಪಲ್ಲಕ್ಕಿ ಉತ್ಸವದಲ್ಲಿ ಭಾಗವಹಿಸಿದ್ದು ಗಮನ ಸೆಳೆಯಿತು.
ರಥೋತ್ಸವದ ಅಂಗವಾಗಿ ಗುರುವಾರದಿಂದ ಶನಿವಾರದ ವರೆಗೆ ರಾತ್ರಿ ಸಮಯದಲ್ಲಿ ರಂಗಕುಣಿತ, ಬಹು ರೂಪಿ ನಾಟಕ ಪ್ರದರ್ಶನ ನಡೆದವು. ಶುಕ್ರವಾರ ಹೂವಿನ ತೇರು, ರಾತ್ರಿ ಸಿಡಿ ಉತ್ಸವ, ಹರಕೆ ಹೊತ್ತ ಭಕ್ತರಿಂದ ಬಾಯಿಬೀಗ, ಎಡೆ-ಮಡೆ ಉತ್ಸವ ಸಂಪನ್ನಗೊಂಡವು. ಮಡುವಿನ ಕೋಡಿಕೋಡಿ, ಚಿಕ್ಕೋಸಹಳ್ಳಿ, ಹರೀನಹಳ್ಳಿ, ಚಿಲ್ಲದಹಳ್ಳಿ, ಬೇಲದಕೆರೆ, ನಗ ರೂರು- ಮಾರ್ಗೋನಹಳ್ಳಿ, ಬೊಮ್ಮನಾಯಕನಹಳ್ಳಿ, ವಳಗೆರೆ ಮೆಣಸ, ಗುಡ್ಡೇನಹಳ್ಳಿ, ಅರೆ ಬೊಪ್ಪನಹಳ್ಳಿ, ಕೆ.ಆರ್.ಪೇಟೆ, ದಡಿಘಟ್ಟ, ಮೈಸೂರು, ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳ 10ಸಾವಿರಕ್ಕೂ ಹೆಚ್ಚು ಭಕ್ತಾದಿಗಳು ರಥೋತ್ಸವಕ್ಕೆ ಸಾಕ್ಷಿಯಾದರು. ಮುಂಜಾಗ್ರತಾ ಕ್ರಮವಾಗಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.