ಕೆ.ಆರ್. ಪೇಟೆ.: ಕಸಬಾ ಹೋಬಳಿಯ ಅಗ್ರಹಾರಬಾಚಹಳ್ಳಿ ಗ್ರಾಮ ದೇವತೆ ಶ್ರೀ ಲಕ್ಷ್ಮೀದೇವಿ(ಬಾಚಳ್ಳಮ್ಮ) ಅಮ್ಮನವರ ಸಿಡಿಹಬ್ಬ ಹಾಗೂ ರಥೋತ್ಸವ ಏ.26ರಿಂದ 28ರವರೆಗೆ ನಡೆಯಲಿದೆ. ಸಾವಿರಾರು ಭಕ್ತರು ಈ ಸಂದರ್ಭ ಸಮಾಗಮಗೊಳ್ಳಲಿದ್ದಾರೆ.
26ರ ಬೆಳಗ್ಗೆ ಲಕ್ಷ್ಮೀದೇವಿ ಅಮ್ಮನವರ ಹಾಗೂ ಶ್ರೀ ಚನ್ನಕೇಶವ ಸ್ವಾಮಿ ಉತ್ಸವ ಮೂರ್ತಿಯ ಮೆರವಣಿಗೆಯು ಬ್ರಾಹ್ಮಣರ ಬೀದಿಯಿಂದ ಆರಂಭವಾಗಿ ಪ್ರಮುಖ ಮಾರ್ಗಗಳಲ್ಲಿ ಸಾಗಿ ದೇವಾಲಯದ ವರೆಗೆ ಆಗಮಿಸಲಿದೆ. ಈ ಉತ್ಸವವನ್ನು ಗ್ರಾಮದ ಬ್ರಾಹ್ಮಣ ಸೇವಾ ಸಮಿತಿಯಿಂದ ನಡೆಸಿಕೊಡಲಾಗುತ್ತದೆ. 26ರ ಮಧ್ಯಾಹ್ನ 3ಗಂಟೆಗೆ ಅಮ್ಮನವರ ಬ್ರಹ್ಮ ರಥೋತ್ಸವವು ಗ್ರಾಮದ ಅರಳೀಮರದ ವೃತ್ತದಿಂದ ಆರಂಭವಾಗಲಿದೆ. ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಪಕ್ಕದ ಬೀದಿ, ಚನ್ನಕೇಶವಸ್ವಾಮಿ ದೇವಾಲಯದ ಮುಂಭಾಗದ ಹೊಲೆ-ಗದ್ದೆ-ಬದುಗಳು ಇರುವ ದಾರಿಯಲ್ಲಿ ಸಾಗಿ, ಬ್ರಾಹ್ಮಣರ ಬೀದಿಯ ಮೂಲಕ ರಂಗದ ಬೀದಿಯ ರಂಗಸ್ಥಳದಲ್ಲಿ ನಿಲ್ಲಲಿದೆ. ಅಲ್ಲಿಂದ ದೇವಿಯ ಉತ್ಸವ ಮೂರ್ತಿಯನ್ನು ದೇವಾಲಯಕ್ಕೆ ತರಲಾಗುತ್ತದೆ. ನಂತರ ಭಕ್ತಾದಿಗಳು ಹಣ್ಣು-ಕಾಯಿ ಅರ್ಪಿಸಿ ಪೂಜೆ ಸಲ್ಲಿಸಲು ಅವಕಾಶ ನೀಡಲಾಗುತ್ತದೆ. ರಥೋತ್ಸವದಲ್ಲಿ ಭಾಗವಹಿಸುವ ಎಲ್ಲರಿಗೂ ಸರ್ಕಾರಿ ನೌಕರರ ಸಂಘದಿಂದ ಅನ್ನದಾನ ಹಮ್ಮಿಕೊಳ್ಳಲಾಗಿದೆ. ರಾತ್ರಿ 7ಗಂಟೆಗೆ ಗ್ರಾಮದ ಯುವಕರ ಸಂಘ ಹಾಗೂ ಬೆಂಗಳೂರು ಬಾಚಳ್ಳಿ ಬಾಯ್ಸ್ ಸಹಕಾರದಿಂದ ಆರ್ಕೆಸ್ಟ್ರಾ ಹಾಗೂ ಮನರಂಜನಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಓಕುಳಿ ಆಟ: 27ರಂದು ಕೋಲಾಟ, ಓಕುಳಿ ಆಟ, ದೇವರಿಗೆ ವಿಶೇಷ ಪೂಜೆ, ಮಹಾಂಗಳಾರತಿ ಕಾರ್ಯಕ್ರಮಗಳು ನಡೆಯಲಿವೆ. 28ರಂದು ಸೋಮನ ಕುಣಿತ, ಮನೆ ಮನೆಯಲ್ಲಿ ಸೋಮದೇವರುಗಳಿಗೆ ಪೂಜೆ, ಮಜ್ಜಿಗೆ, ಪಾನಕ ವಿತರಣೆ ವಿತರಣಾ ಕಾರ್ಯಕ್ರಮಗಳು ಮಂಗಳವಾರ ಮಂಜಾನೆವರೆಗೆ ನೆರವೇರಲಿವೆ. ರಾಜ್ಯದ ವಿವಿಧ ಭಾಗಗಳಲ್ಲಿ ಇರುವ ದೇವಿಯ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಜಾತ್ರಾ ಮಹೋತ್ಸವ ಮತ್ತು ರಥೋತ್ಸವ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ಲಕ್ಷ್ಮೀ ದೇವಿ ಸಿಡಿಹಬ್ಬ ಆಚರಣಾ ಸಮಿತಿ ಪದಾಧಿಕಾರಿಗಳು ಮನವಿ ಮಾಡಿದ್ದಾರೆ.