ಹುಬ್ಬಳ್ಳಿ: ಕರ್ನಾಟಕ ರಾಜ್ಯ ಮಹಾವಿದ್ಯಾಲಯ ಶಿಕ್ಷಕ ಸಂಘದ (ಕೆಆರ್ ಎಂಎಸ್ ಎಸ್) ಸಂಸ್ಥಾಪನ ದಿನದ ಅಂಗವಾಗಿ ಸೆ. 14ರಂದು ಪ್ರೇರಣಾ ದಿವಸ ಆಚರಿಸಲಾಗುತ್ತಿದ್ದು, ಸಾಧಕರಿಗೆ ಸನ್ಮಾನ ಏರ್ಪಡಿಸಲಾಗಿದೆ ಎಂದು ಸಂಘದ ಸಂಸ್ಥಾಪಕ ಅಧ್ಯಕ್ಷ ಡಾ. ರಘು ಅಕಮಂಚಿ ತಿಳಿಸಿದರು.
ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2015ರಲ್ಲಿ ಪ್ರಾರಂಭವಾಗಿರುವ ಕೆ.ಆರ್.ಎಂ.ಎಸ್.ಎಸ್. ಪ್ರತಿ ವರ್ಷ ಹಲವು ಪ್ರೋತ್ಸಾಹಕ ಕಾರ್ಯಕ್ರಮ ಆಯೋಜಿಸುತ್ತಿದೆ. ಉನ್ನತ ಶಿಕ್ಷಣದಲ್ಲಿ ಸಾಧಕರನ್ನು ಗುರುತಿಸಲಾಗುತ್ತಿದೆ. ಜೀವಮಾನ ಸಾಧನೆಗಾಗಿ ಉನ್ನತ ಶಿಕ್ಷಣದಲ್ಲಿ ಅವಿಸ್ಮರಣೀಯ ಕಾರ್ಯ ಮಾಡಿದ ಕೆಎಲ್ಇ ತಾಂತ್ರಿಕ ವಿಶ್ವವಿದ್ಯಾಲಯ ಸಮಕುಲಾಧಿಪತಿ ಡಾ. ಅಶೋಕ ಶೆಟ್ಟರ ಹಾಗೂ ಕನಕದಾಸ ಶಿಕ್ಷಣ ಸಂಸ್ಥೆ ಡಾ. ಬಿ.ಎಫ್. ದಂಡಿನ ಅವರನ್ನು ಆಯ್ಕೆ ಮಾಡಲಾಗಿದೆ ಎಂದರು.
ಅಧ್ಯಾಪಕ ಭೂಷಣ ಪ್ರಶಸ್ತಿಯನ್ನು ಉತ್ತಮ ಆಡಳಿತಗಾರ ವಿಭಾಗದಲ್ಲಿ ನವಲಗುಂದದ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಡಾ. ಎಂ.ಬಿ. ಬಗಾಡಿ, ಉತ್ತಮ ಶಿಕ್ಷಕ ವಿಭಾಗದಲ್ಲಿ ಹಿರಿಯ ಪ್ರಾಧ್ಯಾಪಕಿ ಡಾ. ಶಾರದಾ ಭಟ್ ಹಾಗೂ ಹುಲಕೋಟಿಯ ಅತಿಥಿ ಉಪನ್ಯಾಸಕಿ ಡಾ. ವನಮಾಲಾ ಖಾನಗೌಡರ್ ಅವರನ್ನು ಆಯ್ಕೆ ಮಾಡಲಾಗಿದೆ.
ಉತ್ತಮ ಸಂಶೋಧಕರ ವಿಭಾಗದಲ್ಲಿ ಕರ್ನಾಟಕ ವಿಜ್ಞಾನ ಮಹಾವಿದ್ಯಾಲಯದ ಡಾ. ರಾಜೇಶ್ ಕನಕಂಭಕರ್, ಗದಗ ಜಿಲ್ಲೆ ಮುಂಡರಗಿಯ ಕೆ.ಆರ್. ಬೆಲ್ಲದ ಮಹಾವಿದ್ಯಾಲಯದ ಡಾ. ಮನೋಜ ಕೋಪರ್ಡೆ ಇವರಿಗೆ ಉತ್ತಮ ದೈಹಿಕ ಶಿಕ್ಷಣ ನಿರ್ದೇಶಕ ಪ್ರಶಸ್ತಿ ಹಾಗೂ ಹಾನಗಲ್ ನ ಕುಮಾರೇಶ್ವರ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದ ಡಾ. ಕಾಗಿನೆಲೆ ಪಂಪಾಪತಿ ಅವರನ್ನು ಉತ್ತಮ ಗ್ರಂಥಪಾಲಕ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ದೈಹಿಕ ಶಿಕ್ಷಣದಲ್ಲಿ ವಿಶೇಷ ಸಾಧನೆ ಮಾಡಿದ ಕುಮಟಾದ ಬಾಳಿಗಾ ಶಿಕ್ಷಣ ಮಹಾವಿದ್ಯಾಲಯದ ಅಂತಾರಾಷ್ಟ್ರೀಯ ರೆಫರಿ ಗಣಪತಿ ಭಟ್ ಅವರನ್ನು ಆಯ್ಕೆ ಮಾಡಲಾಗಿದೆ ಎಂದರು.
ಶಿಕ್ಷಕರು ತಮ್ಮ ಸುತ್ತಮುತ್ತಲಿನ ಅಸಾಮಾನ್ಯ ಸಾಧಕರನ್ನು ಗುರುತಿಸುವ ಕಾರ್ಯ ಮಾಡಬೇಕೆಂಬ ಹಿನ್ನೆಲೆಯಲ್ಲಿ ಟೀಚರ್ಸ್ ಇನ್ ಸರ್ಚ್ ಆಫ್ ಟ್ಯಾಲೆಂಟ್ಸ್ ಎನ್ನುವ ಸೆಲ್ಫಿ ವಿತ್ ಸಾಧಕ ಕಾರ್ಯಕ್ರಮ ಏರ್ಪಡಿಸಲಾಗಿದೆ. ಭಾವಚಿತ್ರದ ಜತೆಗೆ ಸಾಧಕರ ಸಂಕ್ಷಿಪ್ತ ಮಾಹಿತಿ ಕಳಿಸಲು ಕೋರಲಾಗಿತ್ತು. ಇದಕ್ಕೆ ಸುಮಾರು 70 ಸೆಲ್ಫಿ ಹಾಗೂ ಮಾಹಿತಿ ಬಂದಿದೆ. ಸಾಧಕರ ಪರಿಚಯವನ್ನು ಸಮಾಜದ ಮುಂದಿಡುವ ಕಾರ್ಯ ಸಂಘ ಮಾಡಲಿದೆ ಎಂದರು.
ವಿಚಾರ ಸಂಕಿರಣ:
ಪ್ರೇರಣಾ ದಿವಸದ ಹಿನ್ನೆಲೆಯಲ್ಲಿ ಸೆ. 14ರಂದು ಬೆಳಗ್ಗೆ 11ಕ್ಕೆ ಕೆಎಲ್ಇ ಬಯೋಟೆಕ್ ಸಭಾಂಗಣದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ಕುರಿತು ವಿಚಾರ ಸಂಕಿರಣ ಏರ್ಪಡಿಸಲಾಗಿದೆ. ಕಲಬುರ್ಗಿಯ ಕರ್ನಾಟಕ ಕೇಂದ್ರಿಯ ವಿಶ್ವವಿದ್ಯಾಲಯ ಕುಲಪತಿ ಡಾ. ಬಟ್ಟೂ ಸತ್ಯನಾರಾಯಣ ಅವರು ಉದ್ಘಾಟಿಸುವರು. ನ್ಯಾಕ್ ನಿರ್ದೇಶಕ ಡಾ. ಗಣೇಶನ್ ಕನ್ನಬಿರನ್ ದಿಕ್ಸೂಚಿ ಭಾಷಣ ಮಾಡುವರು.
ಪ್ರಶಸ್ತಿ ಪ್ರದಾನ: ಮಧ್ಯಾಹ್ನ 12ಕ್ಕೆ ನಡೆಯುವ ಸಮಾರಂಭದಲ್ಲಿ ವಿಆರ್ ಎಲ್ ಸಮೂಹ ಸಂಸ್ಥೆಗಳ ಚೇರ್ಮನ್, ಪದ್ಮಶ್ರೀ ಡಾ. ವಿಜಯ ಸಂಕೇಶ್ವರ ಅವರು ಅಧ್ಯಾಪಕ ಭೂಷಣ ಪ್ರಶಸ್ತಿ ಪ್ರದಾನ ಮಾಡುವರು. ಅತಿಥಿಗಳಾಗಿ ಶಾಸಕ ಮಹೇಶ ಟೆಂಗಿನಕಾಯಿ, ವಿಭವ ಇಂಡಸ್ಟ್ರೀಸ್ ಸಿಇಒ ಎಚ್.ಎನ್. ನಂದಕುಮಾರ ಭಾಗವಹಿಸಲಿದ್ದಾರೆ ಎಂದರು.
ಮಾಧ್ಯಮಿಕ ಶಿಕ್ಷಕ ಸಂಘದ ಅಧ್ಯಕ್ಷ ಸಂದೀಪ ಬೂದಿಹಾಳ, ಖಜಾಂಚಿ ಡಾ. ಲಿಂಗರಾಜ ಹೊರಕೇರಿ ಗೋಷ್ಠಿಯಲ್ಲಿದ್ದರು.