ಹುಬ್ಬಳ್ಳಿ: ಇಲ್ಲಿಯ ವಿದ್ಯಾನಗರದಲ್ಲಿರುವ ಕೆಎಲ್ಇ ಸಂಸ್ಥೆಯ ಎಂ.ಆರ್. ಸಾಖರೆ ಆಂಗ್ಲ ಮಾಧ್ಯಮ (ಸ್ಟೇಟ್) ಶಾಲೆಯ ವಿದ್ಯಾರ್ಥಿನಿ ಕೃತಿಕಾ ಎಚ್.ಬಿ. 2023-24 ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ 618 ಅಂಕ (ಶೇ. 98.88) ಪಡೆಯುವ ಮೂಲಕ ಧಾರವಾಡ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿದ್ದಾರೆ. ಧಾರವಾಡ ಜಿಲ್ಲೆಗೆ ಮೂವರು ಪ್ರಥಮ ಸ್ಥಾನ ಪಡೆದಿದ್ದು, ಅದರಲ್ಲಿ ಕೃತಿಕಾ ಅವರು ಕೂಡ ಒಬ್ಬರು. ಇಂಗ್ಲಿಷ್ 123, ಕನ್ನಡ 100, ಹಿಂದಿ 100, ವಿಜ್ಞಾನ 98, ಗಣಿತ 98, ಸಮಾಜ ವಿಜ್ಞಾನ 99 ಅಂಕ ಪಡೆದಿದ್ದಾರೆ. ‘‘ಎಲ್ಲ ರಂಗದಲ್ಲೂ ಮುಂದಿದ್ದ ಈ ವಿದ್ಯಾರ್ಥಿನಿ, ನಮ್ಮ ನಿರೀಕ್ಷೆಗೆ ತಕ್ಕಂತೆ ಅಂಕ ಗಳಿಸಿ ಜಿಲ್ಲೆಗೆ ಕೀರ್ತಿ ತಂದಿದ್ದಾರೆ’’ ಎಂದು ಬಣ್ಣಿಸಿದ್ದಾರೆ ಪ್ರಾಚಾರ್ಯೆ ಶೀತಲ್ ತಿವಾರಿ.
ವಿದ್ಯಾರ್ಥಿಮಿತ್ರ ಫಲ ಕೊಟ್ಟಿದೆ: ನನ್ನ ಶಾಲೆಯಲ್ಲಿ ಶಿಕ್ಷಕರು ನಿತ್ಯ ಹೇಳುತ್ತಿದ್ದ ಪಾಠ ಆಲಿಸಿ ಅಧ್ಯಯನ ಮಾಡುತ್ತಿದ್ದೆ. ಇದರ ಜತೆಗೆ ವಿಜಯವಾಣಿಯ ವಿದ್ಯಾರ್ಥಿಮಿತ್ರ ಕೂಡ ಓದುತ್ತಿದ್ದೆ. ಅದರಲ್ಲಿ ಬರುವ ಪಠ್ಯ ನನ್ನ ಗ್ರಹಿಕೆ ನೀಗಿಸುತ್ತಿತ್ತು. ಪಾಲಕರ ಹಾಗೂ ಶಿಕ್ಷಕರ ಸಹಕಾರದಿಂದ ಇಷ್ಟೊಂದು ಅಂಕ ಗಳಿಸಿ ಜಿಲ್ಲೆಗೆ ಪ್ರಥಮ ಸ್ಥಾನ ಬರಲು ಕಾರಣವಾಯಿತು. ಇನ್ನೂ ಹೆಚ್ಚಿನ ಅಂಕ ಬರುವ ನಿರೀಕ್ಷೆ ಇತ್ತು. ಮುಂದೆ ವಿಜ್ಞಾನ ವಿಭಾಗದಲ್ಲಿ ಅಧ್ಯಯನ ಮಾಡಿ, ವೈದ್ಯಕೀಯ ಕ್ಷೇತ್ರ ಆಯ್ದುಕೊಳ್ಳಬೇಕೆಂಬ ಅಪೇಕ್ಷೆ ಇದೆ.
-ಕೃತಿಕಾ ಎಚ್.ಬಿ., ಜಿಲ್ಲೆಗೆ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿನಿ