ವಿಜಯಪುರ: ಭಗವಾನ ಶ್ರೀ ಕೃಷ್ಣರು ವಿಷ್ಣುವಿನ ಎಂಟನೇ ಅವತಾರ. ಕೃಷ್ಣ ಜನ್ಮ ತಾಳಿದ ದಿನವನ್ನು ಗೋಕುಲಾಷ್ಠಮಿ ಎಂದು ಆಚರಿಸಲಾಗುತ್ತಿದೆ. ಮುರಳೀಧರ, ಕೇಶವ, ಗೋಪಾಲ, ಗೋವಿಂದ, ಮೋಹನ, ಮದನ, ಮುರಾರಿ, ಗೋಕುಲ, ಕನ್ಹಯ್ಯಾ, ಮುಕುಂದ, ವಾಸುದೇವ, ದಾಮೋದರ, ನಂದಲೋಲ, ದೇವಕಿನಂದ, ಯಶೋದಾನಂದ ಸೇರಿ ಮತ್ತಿತರ ಹೆಸರುಗಳಿಂದ ಕರೆಯುತ್ತಾರೆ ಎಂದು ಕಸಾಪ ಜಿಲ್ಲಾಧ್ಯಕ್ಷ ಹಾಸಿಂಪೀರ ವಾಲಿಕಾರ ಹೇಳಿದರು.
ನಗರದ ದರ್ಗಾ ರಸ್ತೆ ಬಳಿಯ ಪ್ರಜಾಪಿತ ಬ್ರಹ್ಮ ಕುಮಾರಿ ಈಶ್ವರಿಯ ವಿಶ್ವವಿದ್ಯಾಲಯದಲ್ಲಿ ಸೋಮವಾರ ಹಮ್ಮಿಕೊಂಡ ಭಗವಾನ ಶ್ರೀ ಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಕೃಷ್ಣ ಬಾಲ್ಯದಲ್ಲಿ ತುಂಬಾ ಹಠಮಾರಿ ಮತ್ತು ತಮಾಷೆಯಿಂದ ಬೆಳೆದ.
ಹಿತರೊಂದಿಗೆ ದನಗಳನ್ನು ಕಾಯುತ್ತಿದ್ದ. ಮಹಾಭಾರತದಲ್ಲಿ ಶ್ರೀ ಕೃಷ್ಣ ಪಾತ್ರ ಮಹತ್ವದ್ದಾಗಿದೆ ಎಂದು ಹೇಳಿದರು.
ಪ್ರಜಾಪಿತ ಬ್ರಹ್ಮ ಕುಮಾರಿ ಈಶ್ವರಿಯ ವಿಶ್ವವಿದ್ಯಾಲಯ ರಾಜಯೋಗಿನಿ ಸರೋಜಾ ಅಕ್ಕನವರು ಮಾತನಾಡಿ, ಶ್ರೀ ಕೃಷ್ಣ ತಂದೆ ವಸುದೇವ ತಾಯಿ ದೇವಕಿಯ ಉದರದಲ್ಲಿ ಜನಿಸಿದ.
ದೇವಕಿಯ ಏಳು ಮಕ್ಕಳನ್ನು ಸಹೋದರ ಕಂಸ ಕೊಂದು ಹಾಕಿದ ಪರಿಣಾಮ ಎಂಟನೇ ಮಗುವಾಗಿ ಶ್ರೀ ಕೃಷ್ಣ ಈ ಜಗತ್ತಿನ ಉಳಿವಿಗಾಗಿ ಹಾಗೂ ಕಂಸನ ಸಂಹಾರಕ್ಕಾಗಿ ಜನಿಸಿದ. ಇಂದಿನ ಸಮಾಜದಲ್ಲಿ ನ್ಯಾಯ ಸ್ಥಾಪಿಸಲು ಶ್ರೀ ಕೃಷ್ಣ ಅವತರಿಸಿದ್ದಾನೆ ಎಂದು ತಿಳಿಸಿದರು.
ಪಾಲಿಕೆ ಮಾಜಿ ಸದಸ್ಯ ಉಮೇಶ ವಂದಾಲ ಅಧ್ಯಕ್ಷತೆವಹಿಸಿದ್ದರು. ಡಿ.ಎಸ್. ಪಾಟೀಲ ಮಾತನಾಡಿದರು. ಬಾಲಕ ಬಾಲಕಿಯರು ಕೃಷ್ಣ&ರಾಧೆಯ ಪಾತ್ರದಲ್ಲಿ ವೇಷಧಾರಿಯಾಗಿ ಗಮನ ಸೆಳೆದರು.
ಬಿಕೆ ಗಂಗಾಧರ, ಬಿಕೆ ಕವಿತಾ, ಬಿಕೆ ಪ್ರಭು ತೆಲಗಿ, ಬಿಕೆ ಹಿರೇಮಠ, ಬಿಕೆ ಸುನಿತಾ, ಪದ್ಮಾ ವಾರದ, ಪ್ರತಿಭಾ ಮುಂಡಾಸ, ನಿರ್ಮಲಾ ದಿಂಡವಾರ, ಅರ್ಜುನ ಕವಟೆಕರ, ಎನ್.ಆರ್. ಮಠ, ರಾಜು ಅಂಗಡಿ ಮತ್ತಿತರರಿದ್ದರು.