ಜಮಖಂಡಿ ತಾಲೂಕಿನ ಹಿಪ್ಪರಗಿ ಗ್ರಾಮದಲ್ಲಿ ಕಾಶಿ ಅರ್ಚಕರು, ಪಂಡಿತರು ಕೃಷ್ಣಾರತಿ ಮಾಡಿದರು. 
ಜಿಲ್ಲೆ

ಹಿಪ್ಪರಗಿಯಲ್ಲಿ ಕೃಷ್ಣಾರತಿ ಸಂಭ್ರಮ

ದತ್ತಾತ್ರೇಯ ಪಿ ಕುಲಕರ್ಣಿ

ಜಮಖಂಡಿ: ಮಹಾರಾಷ್ಟ್ರದ ಮಹಾಬಳೇಶ್ವರದಿಂದ ಅರಬ್ಬಿ ಸಮುದ್ರವರೆಗೆ ಹರಿಯುವ ದೇಶದ ಅತಿ ದೊಡ್ಡ ನದಿಗಳಲ್ಲಿ ಒಂದಾದ ಕೃಷ್ಣಾ ನದಿಗೆ ಸಹಸ್ರಾರು ಸಂಖ್ಯೆಯಲ್ಲಿ ಸೇರಿದ್ದ ರೈತರ ಸಮ್ಮುಖದಲ್ಲಿ ಕೃಷ್ಣ ಜನ್ಮಾಷ್ಟಮಿ ದಿನದಂದು ಸಂಜೆ ಪೂಜೆ ಸಲ್ಲಿಸಿ ಅದ್ದೂರಿಯಿಂದ ಕೃಷ್ಣಾರತಿ ಮಾಡಲಾಯಿತು. ಜಮಖಂಡಿ ತಾಲೂಕಿನ ಹಿಪ್ಪರಗಿ ಗ್ರಾಮದ ಬಳಿ ಉತ್ತರಾಭಿಮುಖವಾಗಿ ಹರಿಯುವ ಕೃಷ್ಣಾ ನದಿಗೆ ಸೋಮವಾರ ಸಂಜೆ ಕಾಶಿ ಅರ್ಚಕರು, ಪಂಡಿತರು ವಿಶೇಷ ಪೂಜೆ ಸಲ್ಲಿಸಿ ಆರತಿ ಮಾಡಿದರು.

ಕಾಶಿಯ ಗಂಗಾರತಿ ಮಾದರಿಯಲ್ಲಿ ರಾಜ್ಯದಲ್ಲಿ ಮೊದಲ ಬಾರಿ ಕೃಷ್ಣಾ ನದಿಗೆ ಪೂಜೆ ಮತ್ತು ಆರತಿ ಮಾಡುವ ಕಾರ್ಯದಲ್ಲಿ ನದಿ ತೀರದ ಎಡ ಮತ್ತು ಬಲ ಭಾಗದ ಗ್ರಾಮಗಳ ಸಹಸ್ರಾರು ಸಂಖ್ಯೆಯ ರೈತರು, ಮಹಿಳೆಯರು, ಯುವಕ, ಯುವತಿಯರು ಭಾಗಿಯಾಗಿದ್ದರು.

ಕಾಶಿಯಿಂದ ಆಗಮಿಸಿದ್ದ ಆಚಾರ್ಯ ರಣದೀಪ, ಪಂಡಿತರಾದ ಅಮಿತ್ ಪಾಂಡೆ, ಸತ್ಯಂ ಮಿಶ್ರಾ, ಗೊವೀಂದ ತಿವಾರಿ, ಪ್ರಿನ್ಸ್ ಮಿಶ್ರಾ, ಹನುಮಾನಜಿ ಅವರು ಕೃಷ್ಣೆಗೆ ಪೂಜೆ ನೆರವೇರಿಸಿದ ಬಳಿಕ ಶಂಖನಾದದೊಂದಿಗೆ ಪ್ರಾರಂಭಿಸಿದ ಕೃಷ್ಣಾರತಿಗೆ ನೆರೆದ ಜನತೆ ಭಕ್ತಿ ಭಾವದಿಂದ ನಮಿಸಿದರು.
ಕಂಕಣವಾಡಿ, ಮೈಗೂರ, ಮುತ್ತೂರ ಗ್ರಾಮದಿಂದ ತರಿಸಿದ್ದ ಬೋಟ್ ಮೂಲಕ ಶ್ರೀಗಳು, ಪಂಡಿತರು, ಅರ್ಚಕರು, ಮುತ್ತೈದೆಯರು, ಗಣ್ಯರೊಂದಿಗೆ ಸಂಗಮೇಶ ನಿರಾಣಿ ನದಿಯಲ್ಲಿ ತೆರಳಿ ಕೃಷ್ಣೆಗೆ ವಿಶೇಷ ಪೂಜೆ ಸಲ್ಲಿಸಿ ಬಾಗಿನ ಅರ್ಪಿಸಿದರು.

ವಿವಿಧ ಗ್ರಾಮಗಳ ಮಹಿಳೆಯರು ಆರತಿಯೊಂದಿಗೆ ಕೃಷ್ಣಾರತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು. ಕಲಾ ತಂಡಗಳಿಂದ ನಡೆದ ಭರತನಾಟ್ಯ ಸೇರಿ ವಿವಿಧ ಧಾರ್ಮಿಕ, ಸಾಂಸ್ಕೃತಿ ಕಾರ್ಯಕ್ರಮಗಳು ಜನರ ಮನಸೂರೆಗೊಂಡವು.

ಕೃಷ್ಣಾರತಿ ಕಾರ್ಯಕ್ರಮದಲ್ಲಿ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪೂರ, ತೇರದಾಳ ಶಾಸಕ ಸಿದ್ದು ಸವದಿ, ಹುಕ್ಕೇರಿ ಚಂದ್ರಶೇಖರ ಶ್ರೀಗಳು, ಬನಹಟ್ಟಿಯ ಶರಣ ಬಸವ ಶಿವಾಚಾರ್ಯ ಶ್ರೀಗಳು, ಮುತ್ತಿನಕಂತಿ ಹಿರೇಮಠದ ಶಿವಲಿಂಗ ಪಂಡಿತಾರಾಧ್ಯ ಶಿವಾಚಾರ್ಯರು, ಪಿ.ಎನ್.ಪಾಟೀಲ, ಸಿ.ಪಿ.ಜನವಾಡ, ಲಕ್ಷ್ಮಣ ನಿರಾಣಿ ಇದ್ದರು.

ಕೃಷ್ಣಾ ನದಿಯಿಂದ ನಾವು ಜೀವನ ಕಟ್ಟಿಕೊಂಡಿದ್ದೇವೆ. ನದಿಯಿಂದ ನಾವು ಆರ್ಥಿಕವಾಗಿ ಸಬಲರಾಗಿ ದ್ದೇವೆ. ಇಂದು ಕೃಷ್ಣಾರತಿ ಮಾಡುತ್ತಿರುವುದು ನಮಗೆಲ್ಲ ಸಂತಸ ತಂದಿದೆ ಎಂದು ರೈತ ಬಿ.ಟಿ.ಹಿಪ್ಪರಗಿ ಹರ್ಷ ವ್ಯಕ್ತಪಡಿಸಿದರು.