ಮೇಲುಕೋಟೆ: ಮೇಲುಕೋಟೆ ಶ್ರೀ ಚೆಲುವನಾರಾಯಣಸ್ವಾಮಿ ದೇವಾಲಯದಲ್ಲಿ ವಾರದಿಂದ ನಡೆಯುತ್ತಿದ್ದ ಆಷಾಢ ಜಾತ್ರೆ ಕೃಷ್ಣರಾಜಮುಡಿ ಬ್ರಹ್ಮೋತ್ಸವ ಸೋಮವಾರ ಸಾಯಂಕಾಲ ಪಟ್ಟಾಭಿಷೇಕ ಮಹೋತ್ಸವದೊಂದಿಗೆ ಸಂಪನ್ನವಾಯಿತು.
ಕೃಷ್ಣರಾಜಮುಡಿ ಕಿರೀಟದೊಂದಿಗೆ ಕಮಲಮಾಲೆ ಹಾಗೂ ವಿಶೇಷ ತೋಮಾಲೆಯ ಅಲಂಕಾರದಲ್ಲಿ ಕಂಗೊಳಿಸಿದ ಚೆಲುವನಾರಾಯಣನ ಪಟ್ಟಾಭಿಷೇಕದ ಮಂಗಳ ರೂಪವನ್ನು ನೆರೆದಿದ್ದ ಭಕ್ತರು ಕಣ್ತುಂಬಿಕೊಂಡರು. ಇದಕ್ಕೂ ಮುನ್ನ ಸಂಜೆ ಪರಕಾಲ ಮಠದಲ್ಲಿ ಹೋಮ ನೆರವೇರಿಸಿ ಚೆಲುವನಾರಾಯಣಸ್ವಾಮಿಗೆ ಪಟ್ಟಾಭಿಷೇಕ ನೆರವೇರಿಸಲಾಯಿತು. ಸಂಜೆ 5.30ಕ್ಕೆ ಪಟ್ಟಾಭಿರಾಮ ತಿರುಕ್ಕೋಲ ಮಂಗಳವಾದ್ಯ, ಆಂಧ್ರದ ಮಹಿಳಾ ಭಕ್ತೆಯರ ಕೋಲಾಟದೊಂದಿಗೆ ಕಲ್ಯಾಣಿಯಿಂದ ದೇವಾಲಯದವರೆಗೆ ವೈಭವದಿಂದ ನೆರವೇರಿತು.
ಕೃಷ್ಣರಾಜಮುಡಿ ಬ್ರಹ್ಮೋತ್ಸವದ 9ನೇ ತಿರುನಾಳ್ ಪ್ರಯುಕ್ತ ಬೆಳಗ್ಗೆ 8ಗಂಟೆಗೆ ಸಂದಾನ ಸೇವೆ ನೆರವೇರಿತು. ನಂತರ ದೇವಾಲಯದಲ್ಲಿ ವಿಶೇಷ ಪೂಜಾ ಕೈಂಕರ್ಯ ಕೈಗೊಂಡು ಚಿನ್ನದ ಪ್ರಭಾವಳಿಯಲ್ಲಿ ಅಲಂಕಾರ ಮಾಡಿ ಕಲ್ಯಾಣಿಗೆ ಉತ್ಸವ ನೆರವೇರಿಸಲಾಯಿತು. ಕಲ್ಯಾಣಿಯ ಗಜೇಂದ್ರ ವರದನ ಸನ್ನಿಧಿಯಲ್ಲಿ ಮೂರ್ತಿಗೆ ಅಭಿಷೇಕ ನೆರವೇರಿಸಿ, ತೀರ್ಥಸ್ನಾನ ಮಹೋತ್ಸವವನ್ನು ಪೂರೈಸಲಾಯಿತು. ಕಲ್ಯಾಣಿಮಾತೆಯ ಪೂಜೆಯ ನಂತರ ಲೋಕಕಲ್ಯಾಣಾರ್ಥವಾಗಿ ಪ್ರಾರ್ಥಿಸಿ ಅವಭೃತ ಮಹೋತ್ಸವ ಮುಕ್ತಾಯಗೊಳಿಸಲಾಯಿತು.
ಸ್ಥಾನಾಚಾರ್ಯರಿಗೆ ಮಾಲೆ ಮರ್ಯಾದೆ: ಮೇಲುಕೋಟೆ ದೇವಾಲಯದಲ್ಲಿ ಸ್ಥಾನೀಕರದ್ದು ಪ್ರಧಾನ ಭೂಮಿಕೆಯಿದೆ. ಈ ಕಾರಣ ಆಷಾಢ ಜಾತ್ರೆ ಕೃಷ್ಣರಾಜಮುಡಿ ಬ್ರಹ್ಮೋತ್ಸವದ ಯಶಸ್ಸಿನಲ್ಲಿ ಪ್ರಮುಖ ಪಾತ್ರ ವಹಿಸಿದ ಸ್ಥಾನಾಚಾರ್ಯರಾದ ಶ್ರೀನಿವಾಸನರಸಿಂಹನ್ ಗುರೂಜಿ ಕರಗಂರಾಮಪ್ರಿಯ ಕೋವಿಲ್‌ನಂಬಿ ಪ್ರಸನ್ನ ಅವರಿಗೆ ಚೆಲುವನಾರಾಯಣ ಸ್ವಾಮಿಯ ವಿಶೇಷ ಮಾಲೆಯೊಂದಿಗೆ ಮರ್ಯಾದೆ ನೀಡಿ ಗೌರವಿಸಲಾಯಿತು.
ನಂತರ ದೇವಾಲಯದಲ್ಲಿ ಪಡಿಮಾಲೆ ಮತ್ತು ಪೂರ್ಣಾಹುತಿ, ಮಹಾಸಂಪ್ರೋಕ್ಷಣ ನೆರವೇರಿತು. ಪಾಂಡವಪುರ ಉಪವಿಭಾಗಾಧಿಕಾರಿ ಶ್ರೀನಿವಾಸ್ ನೇತೃತ್ವದಲ್ಲಿ ನಡೆದ ಕೃಷ್ಣರಾಜಮುಡಿ ಜಾತ್ರಾ ಮಹೋತ್ಸವದ ಯಶಸ್ಸಿಗೆ ತಹಸೀಲ್ದಾರ್ ಸಂತೋಷ್, ದೇವಾಲಯದ ಇಒ ಶೀಲಾ,ಅರ್ಚಕರು, ಸ್ಥಾನೀಕರು, ಕೈಂಕರ್ಯಪರರು ಶ್ರೀಪಾದದವರು, ಬಂಡೀಕಾರರು ಹಾಗೂ ವಿಶೇಷ ಮಂಗಳವಾದ್ಯದ ಸಿಬ್ಬಂದಿ ಶ್ರಮಿಸಿದರು. ಇನ್‌ಸ್ಪೆೆಕ್ಟರ್ ಅಶೋಕ್ ಕುಮಾರ್ ಮಾರ್ಗದರ್ಶನದಲ್ಲಿ ಮೇಲುಕೋಟೆ ಪೊಲಿಸರು ಭದ್ರತೆ ನೀಡಿದ್ದರು.