ವಿಜಯವಾಣಿ ಸುದ್ದಿಜಾಲ ಉಡುಪಿ
ಎಲ್ಲಿ ಏನಾಗಬೇಕು? ಏನು ಘಟಿಸಬೇಕೆನ್ನುವುದೆಲ್ಲವೂ ವಿಧಿ ಲಿಖಿತ. ಭಗವಂತನ ಇಚ್ಛೆ ಇಲ್ಲದೆ ಎನೂ ನಡೆಯದು ಎಂದು ಖ್ಯಾತ ಗಾಯಕ ಪುತ್ತೂರು ನರಸಿಂಹ ನಾಯಕ ಅನಿಸಿಕೆ ವ್ಯಕ್ತಪಡಿಸಿದರು.
ನಾನೂ ಸೇರಿದಂತೆ ಯಾವುದೇ ಕಲಾವಿದರು ಕಾರ್ಯಕ್ರಮದ ನಿಮಿತ್ತ ವಿದೇಶಗಳಿಗೆ ಹೋದರೆ ಅಲ್ಲಿ ಪುತ್ತಿಗೆ ಶ್ರೀಗಳು ನಿರ್ಮಿಸಲ್ಪಟ್ಟಿರುವ ಕೃಷ್ಣ ಮಂದಿರಗಳು ನಮಗೆ ಆಸರೆಯಾಗುತ್ತಿವೆ. ನಮಗೆ ಭದ್ರತೆಯ ಭಾವ ಮೂಡುತ್ತದೆ. ಪರದೇಶದಲ್ಲಿ ಎಲ್ಲಿಯೇ ಆದರೂ ನಮಗೆ ಆದರದ ಸ್ವಾಗತ ಲಭಿಸುತ್ತಿದೆ ಎಂದರು.
ಸಂಗೀತ ಕಛೇರಿಯ ಆರಂಭದಲ್ಲಿ ಒಂದು ಬಾರಿ ಸ್ಮರಣೆ ಸಾಲದೆ...' ಎಂಬ ದಾಸ ಗೀತೆಯ ಮೂಲಕ ಪುತ್ತೂರು ನರಸಿಂಹ ನಾಯಕ ಅವರು ಸಭಿಕರಲ್ಲಿ ಗುರು ಭಾವ ಮೂಡಿದರು. ಬಳಿಕ ಗಾಯಕ ಬಾಗಲಕೋಟೆಯ ಅನಂತ ಕುಲಕರ್ಣಿ ಅವರು ಜಗನ್ನಾಥ ದಾಸರು ಭೀಮಸೇನನ ಕುರಿತು ರಚಿಸಿದ ಹಾಗೂ ಹಾಡಿನ ಪ್ರತಿಸಾಲಿನ ನುಡಿಯಲ್ಲೂ 'ಚ' ಅಕ್ಷರಗಳನ್ನೊಳಗೊಂಡ ಬಿನ್ನೈಪೆ ನಿನಗಾನು ಭೀಮಸೇನ ಬಣ್ಣ ಬಡುತಿಹ ಜನರ ಭಯವ ಪರಿಹರಿಸೆಂದು ಎಂಬ ವಿಶಿಷ್ಟ ಪದ ಹಾಡಿದರು. ತದನಂತರ, ರಾಯಚೂರಿನ ಶೇಷಗಿರಿ ದಾಸ ಅವರು ಹನುಮಂತನ ಕುರಿತ ಘಟಿಕಾಚಲದಿ ನಿಂತ ಶ್ರಿ ಹನುಮಂತ ಎಂಬ ಗೀತೆ ಹೇಳಿ ರಾಜಾಂಗಣದಲ್ಲಿ ಭಕ್ತಿ ಲೋಕ ತೆರೆದರು.
ಕಾರ್ಯಕ್ರಮದ ಕೊನೆಯಲ್ಲಿ ಸುಗುಣೇಂದ್ರ ತೀರ್ಥ ಶ್ರೀಪಾದರು, ಕಿರಿಯ ಶಿಷ್ಯ ಸುಶ್ರೀಂದ್ರ ತೀರ್ಥ ಶ್ರೀಪಾದರು ಎಲ್ಲ ಕಲಾವಿದರನ್ನು ಸನ್ಮಾನಿಸಿ ಗೌರವಿಸಿದರು. ದಿವಾನ ನಾಗರಾಜ ಆಚಾರ್ಯ, ಕಾರ್ಯದರ್ಶಿ ಪ್ರಸನ್ನ ಆಚಾರ್ಯ, ರತೀಶ ತಂತ್ರಿ, ರಮೇಶ ಭಟ್, ಮಹಿತೋಷ ಆಚಾರ್ಯ ಇತರರಿದ್ದರು. ವಿದ್ವಾನ್ ಡಾ. ಬಿ.ಗೋಪಾಲ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು.
ಸುಗುಣೇಂದ್ರ ಶ್ರೀಗಳು ಕಲಾವಿದರನ್ನು ಗೌರವಿಸಿ, ಗಂಗಾ, ಯಮುನಾ ಹಾಗೂ ಸರಸ್ವತಿ ನದಿಯಲ್ಲಿ ಯಾವಾಗ ಬೇಕಾದರೂ ಸ್ನಾನ ಮಾಡಬಹುದು. ಆದರೆ, ಮಹಾ ಕುಂಭಮೇಳದಲ್ಲಿ ಮಾತ್ರ ಈ ಮೂರೂ ನದಿಗಳು ಪ್ರಯಾಗರಾಜನಲ್ಲಿ ಹರಿದು ತ್ರಿವೇಣಿ ಸಂಗಮವಾಗುತ್ತದೆ. ಅದರಂತೆ ನಾಡಿನ ಶ್ರೇಷ್ಠ ಗಾನ ರತ್ನರಾದ ಪುತ್ತೂರು ನರಸಿಂಹ ನಾಯಕ, ಶೇಷಗಿರಿ ದಾಸ ಹಾಗೂ ಅನಂತ ಕುಲಕರ್ಣಿ ಅವರ ಸಂಗೀತ ಕಛೇರಿಯನ್ನು ಪ್ರತ್ಯೇಕವಾಗಿ ನೋಡಿರಬಹುದು. ಇದೇ ಮೊದಲ ಬಾರಿಗೆ ಆ ಮೂವರೂ ಕಲಾವಿದರು ಕೃಷ್ಣ ಸನ್ನಿಧಿಯಲ್ಲಿ ಸಂಗೀತ ಕಛೇರಿ ನಡೆಸುವ ಮೂಲಕ ಇಲ್ಲೊಂದು ತ್ರಿವೇಣಿ ಸಂಗಮದ ಮೂಲಕ ಕುಂಭಮೇಳ ಮಾಡಿದ್ದಾರೆ. ಮೂವರೂ ಸಹ ತನ್ಮಯತೆಯಿಂದ ಭಕ್ತೀಗಿತೆಗಳನ್ನು ಹಾಡುವ ಮೂಲಕ ಕೇಳುಗರಿಗೆ ದೇವರ ದರ್ಶನ ಮಾಡಿಸುವ ಪುಣ್ಯದ ಕಾರ್ಯ ಮಾಡುತ್ತಿದ್ದಾರೆ. ಶ್ರೀಕೃಷ್ಣನ ಅನುಗ್ರಹ ಇವರ ಮೇಲೆ ಸದಾ ಇರಲೆಂದು ಆಶೀರ್ವದಿಸಿದರು.