ಜಿಲ್ಲೆ

ಕೃಷ್ಣ ಜನಾಷ್ಟಮಿ ಆಚರಣೆ ಸಂದರ್ಭದಲ್ಲಿ ಯಾದವ ಸಮುದಾಯ ಅಸಮಾಧಾನ, ಸವಲತ್ತುಗಳಿಗೆ ಒತ್ತಾಯ

Rest of Bengaluru - Chikkaballapura - Venkatesh

ಚಿಕ್ಕಬಳ್ಳಾಪುರ: ಜಿಲ್ಲಾದ್ಯಂತ ಕೃಷ್ಣ ಜನಾಷ್ಟಮಿಯನ್ನು ಸಂಭ್ರಮದಿಂದ ಆಚರಿಸುತ್ತಿದ್ದು ಕಳೆದ ಹಲವು ವರ್ಷಗಳಿಂದಲೂ ಸವಲತ್ತುಗಳ ಒದಗಿಸುವಲ್ಲಿನ ಆಡಳಿತ ಯಂತ್ರಾಂಗದ ಕಡೆಗಣನೆಗೆ ಯಾದವ ಕ್ಷೇಮಾಭಿವೃದ್ಧಿ ಸಂಘವು ಅಸಮಾಧಾನ ವ್ಯಕ್ತಪಡಿಸಿದೆ.

ಜಿಲ್ಲಾಡಳಿತ, ಜಿ.ಪಂ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಯಾದವ ಕ್ಷೇಮಾಭಿವೃದ್ಧಿ ಸಂಘದಿಂದ ಚಿಕ್ಕಬಳ್ಳಾಪುರ ನಗರದ ಎಂ.ಜಿ ರಸ್ತೆಯ ಶ್ರೀ ವೇಣುಗೋಪಾಲಸ್ವಾಮಿ ದೇವಸ್ಥಾನದಲ್ಲಿ ಬುಧವಾರ ಶ್ರೀ ಕೃಷ್ಣ ಜಯಂತಿಯನ್ನು ಕೈಗೊಳ್ಳಲಾಗಿಯಿತು. ಪ್ರಮುಖ ರಸ್ತೆಗಳಲ್ಲಿ ದೇವರ ಮುತ್ತಿನ ಪಲ್ಲಕ್ಕಿ ಉತ್ಸವ ಮೆರವಣಿಗೆ ನಡೆಯಿತು. ಇದೇ ವೇಳೆ ಜಿಲ್ಲಾಡಳಿತದ ಮೂಲಕ ಸರ್ಕಾರಕ್ಕೆ ಸಮುದಾಯದ ನಾಯಕರು ಮನವಿ ಪತ್ರ ಸಲ್ಲಿಸಿದ್ದಾರೆ.

ಯಾದವ ಸಮುದಾಯಕ್ಕೆ ಪ್ರತ್ಯೇಕ ನಿಗಮ ಸ್ಥಾಪನೆ, ಜಿಲ್ಲೆಯಲ್ಲಿ ಶ್ರೀ ಕೃಷ್ಣನ ಭವನ ಮತ್ತು ವಿದ್ಯಾರ್ಥಿ ನಿಲಯ ನಿರ್ಮಾಣ, ಶೈಕ್ಷಣಿಕ ಪ್ರೋತ್ಸಾಹ ಮತ್ತು ಸ್ವಯಂ ಉದ್ಯೋಗಕ್ಕೆ ನೆರವು ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿದ್ದಾರೆ. ಇದರ ನಡುವೆ ಹಿಂದುಳಿದ ಯಾದವ ಸಮುದಾಯದ ಬೇಡಿಕೆಗಳನ್ನು ಈಡೇರಿಸುವಲ್ಲಿ ಕಡೆಗಣಿಸಲಾಗುತ್ತಿದೆ ಎಂದು ಜಿ.ಪಂ.ಮಾಜಿ ಸದಸ್ಯ ಕೆ.ಎಂ.ಮುನೇಗೌಡ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ 2.75 ಲಕ್ಷ ಮಂದಿ ಸಮುದಾಯವರು ಇದ್ದಾರೆ. ಇಲ್ಲಿ ಜನಾಂಗಕ್ಕೆ ಮೊದಲು ಸಮುದಾಯದ ಭವನ ನಿರ್ಮಿಸಲು 3 ಎಕರೆ ಜಮೀನು ನೀಡುವುದಾಗಿ ಹೇಳಿ, 16 ಗುಂಟೆ ಜಾಗದ ದಾಖಲಾತಿ ತೋರಿಸಲಾಗಿದೆ. ಪ್ರೋತ್ಸಾಹದಾಯಕ ಕ್ರಮ ಮತ್ತು ಜನಾಂಗಕ್ಕೆ ಸವಲತ್ತುಗಳನ್ನು ಒದಗಿಸುವಲ್ಲಿ ನಿರ್ಲಕ್ಷ್ಯ ತೋರಲಾಗಿದೆ ಎಂದು ಆರೋಪಿಸಿದ್ದಾರೆ.