ಚಿಕ್ಕಬಳ್ಳಾಪುರ: ಜಿಲ್ಲಾದ್ಯಂತ ಶ್ರೀ ಕೃಷ್ಣಾ ಜನ್ಮಾಷ್ಟಮಿ ಹಬ್ಬವು ಧಾರ್ಮಿಕ ವಿವಿಧ ಪೂಜಾ ಕಾರ್ಯಕ್ರಮಗಳೊಂದಿಗೆ ಬುಧವಾರ ಸಂಭ್ರಮದಿಂದ ನೆರವೇರಿತು.
ಇಲ್ಲಿನ ಶ್ರೀ ವೇಣುಗೋಪಾಲಸ್ವಾಮಿ ಸ್ವಾಮಿ, ಗೋಪಿನಾಥಸ್ವಾಮಿ ಬೆಟ್ಟದ ಶ್ರೀ ಗೋಪಿನಾಥ, ಮಾರಗಾನಹಳ್ಳಿಯ ಶ್ರೀ ಚನ್ನಕೇಶವಸ್ವಾಮಿ ಮತ್ತು ಪಟ್ರೇನಹಳ್ಳಿಯ ಶ್ರೀ ವೇಣುಗೋಪಾಲಸ್ವಾಮಿ ಆಲಯದಲ್ಲಿ ದೇವರಿಗೆ ವಿಶೇಷ ಅಭಿಷೇಕ ಮತ್ತು ಅಲಂಕಾರ ಕೈಗೊಳ್ಳಲಾಗಿತ್ತು. ಬೆಳಿಗ್ಗೆಯಿಂದಲೇ ಭಕ್ತಾದಿಗಳು ಆಲಯಕ್ಕೆ ಆಗಮಿಸಿ ದೇವರ ದರ್ಶನ ಪಡೆದರು. ಆಲಯದ ಆವರಣದಲ್ಲಿ ಕೃಷ್ಣನ ಆರಾಧನೆ ಮತ್ತು ಭಜನಾ ಕಾರ್ಯಕ್ರಮ ನಡೆಯಿತು. ದೇವಾಲಯ ಸಮಿತಿಗಳು ಭಕ್ತರಿಗೆ ಅನ್ನಸಂತರ್ಪಣೆ ಕೈಗೊಂಡಿದ್ದವು. ಇನ್ನೂ ಹಲವರು ಮಕ್ಕಳಿಗೆ ಕೃಷ್ಣ ರಾಧೆ ವೇಷವನ್ನು ಹಾಕಿ ಆಲಯಕ್ಕೆ ಕರೆದುಕೊಂಡು ಬಂದಿದ್ದ ದೃಶ್ಯ ಕಂಡು ಬಂತು. ಅನ್ಯ ಧರ್ಮೀಯರ ಮಕ್ಕಳು ಸಹ ಕೃಷ್ಣ ರಾಧಾ ವೇಷಾವಳಿಯಲ್ಲಿ ಗಮನ ಸೆಳೆಯುವ ಮೂಲಕ ಸೌಹಾರ್ದತೆ ಮೆರೆದರು.
*ಬಿಜಿಎಸ್ ಆಂಗ್ಲ ಶಾಲೆಯಲ್ಲಿ ಜನ್ಮಾಷ್ಟಮಿ ಚಿಕ್ಕಬಳ್ಳಾಪುರ ತಾಲೂಕಿನ ಅಗಲಗುರ್ಕಿಯ ಬಿಜಿಎಸ್ ಆಂಗ್ಲ ಶಾಲೆಯಲ್ಲಿ ವಿವಿಧ ವೇಷಾವಳಿ, ನೃತ್ಯ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಕೃಷ್ಣ ಜಯಂತಿ ಆಚರಿಸಲಾಯಿತು.
ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಜಂಟಿ ನಿರ್ದೇಶಕಿ ಸವಿತಾ, ದೇವರು ಬೇರೆ ಬೇರೆ ರೂಪಗಳಲ್ಲಿ ಜನರ ಕಷ್ಟಗಳನ್ನು ನಿವಾರಿಸಲು ಅವತಾರ ಎತ್ತಿ ಬರುತ್ತಾರೆ ಎಂದರು.
ಕೃಷ್ಣನ ಬಾಲ್ಯಲೀಲೆಗಳನ್ನು ನೆನಪಿಸುವ ಪುಟಾಣಿಗಳ ನೃತ್ಯ ರೂಪಕ ಮೆಚ್ಚುಗೆಗೆ ಪಾತ್ರವಾಯಿತು. ಕಾರ್ಯಕ್ರಮದಲ್ಲಿ ಬಿಜಿಎಸ್ ಕಾಲೇಜಿನ ಪ್ರಾಂಶುಪಾಲ ಎಚ್.ರಮೇಶ್, ಬಿಜಿಎಸ್ ಆಂಗ್ಲ ಶಾಲೆಯ ಪ್ರಾಂಶುಪಾಲ ಡಿ.ಸಿ.ಮೋಹನ್‌ಕುಮಾರ್, ಬಿಜಿಎಸ್ ಶಾಲೆಯ ಶೈಕ್ಷಣಿಕ ಸಲಹೆಗಾರ ಎಸ್.ವೆಂಕಟೇಶಪ್ಪ ಮತ್ತಿತರರು ಇದ್ದರು.
*ಕೃಷ್ಣನ ಮೆರವಣಿಗೆ
ಕಾರ್ಯಕ್ರಮಕ್ಕೂ ಮೊದಲು ಶ್ರೀ ಕೃಷ್ಣನ ಮೂರ್ತಿಯನ್ನೊಳಗೊಂಡ ಹೂವಿನ ಪಲ್ಲಕ್ಕಿಗಳು ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿದವು. ಸಮುದಾಯದ ಮುಖಂಡರು ಕಾಲ್ನಡಿಗೆಯಲ್ಲಿ ಸಾಗಿದರು. ಇದಕ್ಕೆ ಜಾನಪದ ವಿವಿಧ ಕಲಾ ತಂಡಗಳು ಸಾಥ್ ನೀಡಿದವು.