ಜಿಲ್ಲೆ

ಕೃಷ್ಣಾ ತೀರದ ಗ್ರಾಮಗಳ ಗರ್ಭಿಣಿಯರ ಸ್ಥಳಾಂತರ

ಲಿಂಗಸುಗೂರು: ನಾರಾಯಣಪುರದ ಬಸವಸಾಗರ ಜಲಾಶಯದಿಂದ ಕೃಷ್ಣಾ ನದಿಗೆ 3 ಲಕ್ಷ ಕ್ಯೂಸೆಕ್ ನೀರು ಬಿಡಲಾಗಿದ್ದು, ತಾಲೂಕಿನ ನದಿ ತೀರದ ಗ್ರಾಮಗಳ ಮೂವರು ಗರ್ಭಿಣಿಯರನ್ನು ಆರೋಗ್ಯದ ಹಿತದೃಷ್ಟಿಯಿಂದ ಶುಕ್ರವಾರ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಯಿತು.

ನದಿಯಲ್ಲಿ ಪ್ರವಾಹದಿಂದಾಗಿ ಶೀಲಹಳ್ಳಿ ಸೇತುವೆ ಮುಳುಗಡೆಯಾಗಿದೆ. ಇದರಿಂದಾಗಿ ನದಿ ತೀರದ ಕಡದರಗಡ್ಡಿ, ಯರಗೋಡಿ, ಹಂಚಿನಾಳ ಗ್ರಾಮಗಳ ಜನರು 45 ಕಿ.ಮೀ. ಸುತ್ತುವರಿದು ಲಿಂಗಸುಗೂರಿಗೆ ತಲುಪಬೇಕಿದೆ. ಕೃಷ್ಣಾ ನದಿಗೆ ಇನ್ನೂ ಅಧಿಕ ಪ್ರಮಾಣದಲ್ಲಿ ನೀರು ಬಿಟ್ಟರೆ ಯರಗೋಡಿ ಸೇತುವೆ ಮುಳುಗಡೆಯಾಗಲಿದೆ. ಇದರಿಂದ ಕಡದರಗಡ್ಡಿ, ಯರಗೋಡಿ, ಹಂಚಿನಾಳ ಗ್ರಾಮಗಳ ಸಂಪರ್ಕ ಸಂಪೂರ್ಣವಾಗಿ ಕಡಿತಗೊಳ್ಳಲಿದೆ.

ಆರೋಗ್ಯ ಇಲಾಖೆ ಸಿಬ್ಬಂದಿ ನದಿ ತೀರದ ಗ್ರಾಮಗಳಲ್ಲಿ ಸಾಂಕ್ರಾಮಿಕ ರೋಗಗಳು ಹರಡದಂತೆ ಮುಂಜಾಗ್ರತೆ ವಹಿಸಿದ್ದು, ಪ್ರತಿ ಮನೆಗೆ ತೆರಳಿ ಜನರ ಆರೋಗ್ಯ ತಪಾಸಣೆ ನಡೆಸುತ್ತಿದ್ದಾರೆ. ಕಡದರಗಡ್ಡಿ, ಯಳಗುಂದಿ ಹಾಗೂ ಹಂಚಿನಾಳ ಗ್ರಾಮದಲ್ಲಿನ 12 ಜನ ಗರ್ಭಿಣಿಯರ ಸುರಕ್ಷತೆಗೆ ಕ್ರಮ ವಹಿಸಲಾಗಿದೆ.

ಕಡದರಗಡ್ಡಿ ಗ್ರಾಮದ ನಾಲ್ವರು ಗರ್ಭಿಣಿಯರ ಪೈಕಿ ಇಬ್ಬರನ್ನು ಈಚನಾಳ ಆರೋಗ್ಯ ಕೇಂದ್ರಕ್ಕೆ ಸ್ಥಳಾಂತರಿಸಲಾಗಿತ್ತು. ಈ ಪೈಕಿ ಒಬ್ಬ ಗರ್ಭಿಣಿಯನ್ನು ಲಿಂಗಸುಗೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು ಹೆರಿಗೆಯಾಗಿದೆ. ಇನ್ನಿಬ್ಬರನ್ನು ಅವರ ತವರು ಮನೆಗೆ ಕಳುಹಿಸಲಾಗಿದೆ.
ಯಳಗುಂದಿ ಗ್ರಾಮದ ನಾಲ್ವರು ಗರ್ಭಿಣಿಯರ ಪೈಕಿ ಒಬ್ಬರು ಗ್ರಾಮದಲ್ಲೇ ಇದ್ದು, ಇಬ್ಬರನ್ನು ಆರಂಭದಲ್ಲಿ ಆಂಬುಲೆನ್ಸ್ ಮೂಲಕ ಈಚನಾಳ ಆರೋಗ್ಯ ಕೇಂದ್ರಕ್ಕೆ ಸ್ಥಳಾಂತರಿಸಲಾಗಿತ್ತು. ಬಳಿಕ ಲಿಂಗಸುಗೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು ಹೆರಿಗೆಯಾಗಿದೆ. ಒಬ್ಬರು ತವರು ಮನೆಗೆ ತೆರಳಿದ್ದಾರೆ. ಹಂಚಿನಾಳದ ನಾಲ್ವರು ಗರ್ಭಿಣಿಯರ ಪೈಕಿ ಇಬ್ಬರನ್ನು ಲಿಂಗಸುಗೂರು ಸರ್ಕಾರಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದ್ದು ಅವರಿಗೆ ಹೆರಿಗೆಯಾಗಿದೆ. ಇನ್ನಿಬ್ಬರು ತವರು ಮನೆಗೆ ತೆರಳಿದ್ದಾರೆ.

ಟಿಎಚ್‌ಒ ಡಾ.ಅಮರೇಶ ಪಾಟೀಲ್, ಆರೋಗ್ಯ ಶಿಕ್ಷಣಾಧಿಕಾರಿ ಪ್ರಾಣೇಶ ಜೋಷಿ, ಸಿಎಚ್‌ಒಗಳಾದ ಸಿದ್ಧಲಿಂಗಪ್ಪ, ಪ್ರತಾಪ, ಎಚ್‌ಐಒಗಳಾದ ಶಿವಕುಮಾರ, ಅಲಿ, ಪಿಎಚ್‌ಸಿಒಗಳಾದ ಹುಲಿಗೆಮ್ಮ, ರಾಧಾ, ಆಶಾ ಕಾರ್ಯಕರ್ತೆಯರು ಪ್ರವಾಹಪೀಡಿತ ಗ್ರಾಮಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ಆನೆಹೊಸೂರು ಆರೋಗ್ಯ ಕೇಂದ್ರದಲ್ಲಿ ಆಂಬುಲೆನ್ಸ್ ವ್ಯವಸ್ಥೆ ಕಲ್ಪಿಸಲಾಗಿದೆ.