ಜಿಲ್ಲೆ

ಪರ್ಯಾಯ ಶ್ರೀಗಳಿಂದ ಕೃಷ್ಣನಿಗೆ ಅರ್ಘ್ಯಪ್ರದಾನ

ಉಡುಪಿ : ಶ್ರೀಕೃಷ್ಣ ಜನ್ಮಾಷ್ಟಮಿ ಅಂಗವಾಗಿ ಶುಕ್ರವಾರ ರಾತ್ರಿ ತುಳಸಿ ಅರ್ಚನೆಯೊಂದಿಗೆ ವಿಶೇಷ ಪೂಜೆ ನೆರವೇರಿಸಿದ ಬಳಿಕ ಕೃಷ್ಣ ಮಠದ ಗರ್ಭಗುಡಿಯಲ್ಲಿ ಪರ್ಯಾಯ ಕೃಷ್ಣಾಪುರ ಮಠದ ಶ್ರೀ ವಿದ್ಯಾಸಾಗರ ತೀರ್ಥ ಸ್ವಾಮೀಜಿ ಹಾಗೂ ಕಾಣಿಯೂರು ಮಠದ ಶ್ರೀ ವಿದ್ಯಾವಲ್ಲಭ ತೀರ್ಥ ಸ್ವಾಮೀಜಿ ಶ್ರೀಕೃಷ್ಣನಿಗೆ ಬಿಲ್ವಪತ್ರೆ ಅರ್ಪಿಸಿ, ಶಂಖದಲ್ಲಿ ನೀರು ತುಂಬಿ ಅರ್ಘ್ಯ ಪ್ರದಾನ ಮಾಡಿದರು.

ಚಂದ್ರೋದಯ ಸಮಯ 12.21ರ ಮುಹೂರ್ತದಲ್ಲಿ ತುಳಸಿಕಟ್ಟೆ ಬಳಿ ವಿಶೇಷ ಪೂಜೆ ನೆರವೇರಿಸಿ, ತೆಂಗಿನ ಹೋಳಿನಲ್ಲಿ ಸುದರ್ಶನ ಸಾಲಿಗ್ರಾಮವನ್ನಿಟ್ಟು  ಚಂದ್ರನಿಗೆ ಶಂಖದಿಂದ ಕ್ಷೀರಾರ್ಘ್ಯವನ್ನು ನೀಡಿದರು.

ಕೃಷ್ಣನ ಮುಂಭಾಗ ತೀರ್ಥ ಮಂಟಪದಲ್ಲಿ ವಿಶೇಷವಾಗಿ ಅಳವಡಿಸಿದ್ದ ಬೆಳ್ಳಿ ಮಂಟಪದಲ್ಲಿ ವಿದ್ವಾಂಸರು, ಮಠದ ಪರಿವಾರದವರು, ಗಣ್ಯರು, ಭಕ್ತರು ಸರತಿ ಸಾಲಿನಲ್ಲಿ ಬಂದು ಕೃಷ್ಣಾರ್ಘ್ಯವನ್ನೂ, ತುಳಸಿಕಟ್ಟೆಯಲ್ಲಿ ಚಂದ್ರಾರ್ಘ್ಯವನ್ನು ನೀಡಿದರು.