ಉಡುಪಿ: ಪರ್ಯಾಯ ಅದಮಾರು ಮಠದ ಆಶ್ರಯದಲ್ಲಿ ಕೃಷ್ಣ ಮಠದಲ್ಲಿ ಜ.9ರಿಂದ 15ರವರೆಗೆ ಸಪ್ತೋತ್ಸವ ನಡೆಯಲಿದೆ.
13ನೇ ಶತಮಾನದಲ್ಲಿ ಆಚಾರ್ಯ ಮಧ್ವರು ಮಕರ ಸಂಕ್ರಾಂತಿಯಂದು ಕೃಷ್ಣ ವಿಗ್ರಹವನ್ನು ಪ್ರತಿಷ್ಠಾಪಿಸಿದ್ದು, ಮಠದ ವಾರ್ಷಿಕ ಜಾತ್ರೆ ಅಂಗವಾಗಿ ಸಪ್ತೋತ್ಸವ ಪ್ರತೀ ವರ್ಷ ನಡೆಯುತ್ತದೆ. 15ರಂದು ಹಗಲು ರಥೋತ್ಸವ ‘ಚೂರ್ಣೋತ್ಸವ’ ಎಂದೇ ಪ್ರಸಿದ್ಧವಾಗಿದೆ.
9ರಂದು ಸಾಯಂಕಾಲ ಶ್ರೀಕೃಷ್ಣನ ಉತ್ಸವ ಮೂರ್ತಿಯನ್ನು ಸುವರ್ಣ ಪಲ್ಲಕ್ಕಿಯಲ್ಲಿರಿಸಿ ಮಧ್ವ ಸರೋವರದಲ್ಲಿ ತೆಪ್ಪೋತ್ಸವ ನಡೆಯಲಿದೆ. ಬಳಿಕ ರಥಬೀದಿಯಲ್ಲಿ ಮಹಾಪೂಜೆ ರಥದಲ್ಲಿ ಅನಂತೇಶ್ವರ ಮತ್ತು ಚಂದ್ರೇಶ್ವರ ದೇವರು, ಗರುಡ ರಥದಲ್ಲಿ ಕೃಷ್ಣ ಮುಖ್ಯಪ್ರಾಣ ದೇವರ ರಥೋತ್ಸವ ಜರುಗಲಿದೆ.
* ಮಕರ ಸಂಕ್ರಾಂತಿಗೆ ಮೂರು ರಥ: ಮಕರಸಂಕ್ರಾಂತಿಯಂದು ಸಾಯಂಕಾಲ ಶ್ರೀಕೃಷ್ಣ, ಮುಖ್ಯ ಪ್ರಾಣ ದೇವರಿಗೆ ಮಧ್ವ ಸರೋವರದಲ್ಲಿ ವೈಭವದ ತೆಪ್ಪೋತ್ಸವ ನಡೆಯಲಿದೆ. ಬಳಿಕ ರಥಬೀದಿಯಲ್ಲಿ ಬ್ರಹ್ಮರಥದಲ್ಲಿ ಕೃಷ್ಣನ ಉತ್ಸವ ಮೂರ್ತಿ ಪ್ರತಿಷ್ಠಾಪಿಸಲಾಗುತ್ತದೆ. ಸಣ್ಣರಥದಲ್ಲಿ ಮುಖ್ಯಪ್ರಾಣ ದೇವರು, ಗರುಡರಥದಲ್ಲಿ ಅನಂತೇಶ್ವರ ಮತ್ತು ಚಂದ್ರೇಶ್ವರ ದೇವರ ಮೂರ್ತಿಗಳನ್ನಿಟ್ಟು ಅಷ್ಟಮಠಾಧೀಶರ ಸಹಿತ ಭಕ್ತರು ತೇರನ್ನು ಎಳೆಯಲಿದ್ದಾರೆ.
15ರಂದು ಚೂರ್ಣೋತ್ಸವ: ಹಗಲು ರಥೋತ್ಸವ (ಚೂರ್ಣೋತ್ಸವ) 15ರಂದು ನಡೆಯಲಿದ್ದು, ಬೆಳಗ್ಗೆ 8.30ಕ್ಕೆ ಮಹಾಪೂಜೆ ಬಳಿಕ ಶ್ರೀಕೃಷ್ಣ ಹಾಗೂ ಮುಖ್ಯಪ್ರಾಣ ದೇವರನ್ನು ಬ್ರಹ್ಮರಥದಲ್ಲಿರಿಸಿ ಪರ್ಯಾಯ ಶ್ರೀಪಾದರ ಸಹಿತ ಅಷ್ಟಮಠದ ಯತಿಗಳು ಮಂಗಳಾರತಿ ಬೆಳಗಲಿದ್ದಾರೆ. ಬ್ರಹ್ಮರಥೋತ್ಸವ ಬಳಿಕ ವಸಂತ ಮಂಟಪದಲ್ಲಿ ಓಕುಳಿ ಪೂಜೆ, ಅಷ್ಟ ಮಠದ ಸ್ವಾಮೀಜಿಯವರಿಗೆ ಪರ್ಯಾಯ ಮಠದಿಂದ ಗೌರವ ಸಮರ್ಪಣೆ, ಮಧ್ವ ಸರೋವರದಲ್ಲಿ ಶ್ರೀಕೃಷ್ಣ ಮುಖ್ಯಪ್ರಾಣದೇವರ ಅವಭೃತಥೋತ್ಸವದೊಂದಿಗೆ ಏಳಾಯನೋತ್ಸವ ಸಂಪನ್ನಗೊಳ್ಳಲಿದೆ.
10ರಿಂದ ಭೋಜನ ಪ್ರಸಾದ: ಕೋವಿಡ್-19 ಹಿನ್ನೆಲೆಯಲ್ಲಿ 9 ತಿಂಗಳಿನಿಂದ ಕೃಷ್ಣ ಮಠದಲ್ಲಿ ಸಾರ್ವಜನಿಕರಿಗೆ ಭೋಜನ ವ್ಯವಸ್ಥೆ ರದ್ದುಪಡಿಸಲಾಗಿತ್ತು. ಜ.10ರಿಂದ ಮತ್ತೆ ಪ್ರಾರಂಭಿಸಲಾಗುತ್ತಿದೆ. ಸಪ್ತೋತ್ಸವ ಹಿನ್ನಲೆಯಲ್ಲಿ ಮಠಕ್ಕೆ ಸಾವಿರಾರು ಭಕ್ತರು ಆಗಮಿಸಲಿದ್ದು, ಭೋಜನ ಶಾಲೆ, ಅನ್ನಬ್ರಹ್ಮ ಛತ್ರದಲ್ಲಿ ಎಂದಿನಂತೆ ಮಧ್ಯಾಹ್ನದ ಭೋಜನ ಪ್ರಸಾದ ಸ್ವೀಕರಿಸಬಹುದಾಗಿದೆ.