ಉಡುಪಿ: ಮಧ್ವಾಚಾರ್ಯರು ತತ್ವ ಅನುಸಂಧಾನ ತೊಂದರೆ ನಿವಾರಣೆಗಾಗಿ ಶ್ರೀಕೃಷ್ಣನನ್ನು ಪ್ರತಿಷ್ಠಾಪನೆಗೈದು ಸಾಧಕರ ಸಾಧನೆಗೆ ಬೇಕಾದ ವ್ಯವಸ್ಥೆ ಮಾಡಿ ಸಜ್ಜನರನ್ನು ಅನುಗ್ರಹಿಸಿದ್ದಾರೆ. ಕಲಿಯುಗದಲ್ಲಿ ಶ್ರೀಕೃಷ್ಣನ ಉಪಾಸನೆಯಿಂದ ಸರ್ವಾಭಿಷ್ಟ ಸಿದ್ಧಿಯಾಗುತ್ತದೆ ಎಂದು ಪುತ್ತಿಗೆ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿ ಹೇಳಿದರು.
ಶುಕ್ರವಾರ ರಾಜಾಂಗಣದಲ್ಲಿ ನಡೆದ ಪರ್ಯಾಯ ಸಪ್ತೋತ್ಸವ ಧಾರ್ಮಿಕ ಸಭೆಯಲ್ಲಿ ಅವರು ಆಶೀರ್ವದಿಸಿದರು. ಕೃಷ್ಣನ ಅನುಗ್ರಹ ಆಗಬೇಕಾದರೆ ಪ್ರತಿಷ್ಠಾಪಕರಾದ ಮಧ್ವಾಚಾರ್ಯರ ಸ್ಮರಣೆ ಮಾಡುವುದು ಅಗತ್ಯ. ಆಚಾರ್ಯರ ತತ್ವವಾದ ವ್ಯಾಪಕ ಪ್ರಚಾರವಾಗಬೇಕು. ಇದಕ್ಕೆ ಸೀಮಿತ ಪರಿಧಿ ಇರಬಾರದು. ವಿಶ್ವವ್ಯಾಪಿ ಮನ್ನಣೆ ಸಿಗುವಂತಾಗಬೇಕು ಎಂದು ಆಶಿಸಿದರು.
ಭಂಡಾರಕೇರಿ ಮಠಾಧೀಶ ಶ್ರೀ ವಿದ್ಯೇಶ ತೀರ್ಥ ಸ್ವಾಮೀಜಿ, ಪುತ್ತಿಗೆ ಕಿರಿಯ ಶ್ರೀ ಸುಶ್ರೀಂದ್ರ ತೀರ್ಥ ಸ್ವಾಮೀಜಿ ಆಶೀರ್ವಚನ ನೀಡಿದರು. ಶತಾವಧಾನಿ ಡಾ. ರಾಮನಾಥ ಆಚಾರ್ಯ, ವಿಜಯಸಿಂಹ ತೋಟಂತಿಲ್ಲಾಯ , ಮಾಜಿ ಸಚಿವ ಅರಗ ಜ್ಞಾನೇಂದ್ರ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಹಿರಿಯ ವಿದ್ವಾಂಸ ಡಾ. ವ್ಯಾಸನಕೆರೆ ಪ್ರಭಾಂಜನಾಚಾರ್ಯ ಅವರಿಗೆ ಶ್ರೀ ಕೃಷ್ಣಾನುಗ್ರಹ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಶ್ರೀಸುಮಧ್ವವಿಜಯ ಆಧಾರಿತ ಭಂಡಾರಕೇರಿ ಮಠಾಧೀಶರಿಂದ ವಿರಚಿತ
'ಶ್ರೀಗುರುವಿಜಯಗೀತೆ' ಸಾಕ್ಷಚಿತ್ರ ಪ್ರದರ್ಶಿಸಲಾಯಿತು. ವಿದ್ವಾನ್ ಸಂದೀಪ್ ನಾರಾಯಣ್ ಮತ್ತು ಬಳಗದಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ಕಛೇರಿ ನಡೆಯಿತು.