ಉಡುಪಿ: ಕೃಷ್ಣ ಮಠದಲ್ಲಿ ಕೃಷ್ಣಾಪುರ ಮಠದ ಪರ್ಯಾಯ ಪರ್ವ ಮಂಗಳವಾರ ಪ್ರಾರಂಭವಾಗಿದ್ದು, ಪ್ರಾತಃ 5.55ರ ಶುಭ ಮುಹೂರ್ತದಲ್ಲಿ ಶ್ರೀ ವಿದ್ಯಾಸಾಗರ ತೀರ್ಥ ಸ್ವಾಮೀಜಿ ಸರ್ವಜ್ಞ ಪೀಠಾರೋಹಣ ಮಾಡಿದ್ದಾರೆ.
ನಿಕಟಪೂರ್ವ ಪರ್ಯಾಯ ಶ್ರೀ ಈಶಪ್ರಿಯ ತೀರ್ಥ ಸ್ವಾಮೀಜಿ ಮಧ್ವಾಚಾರ್ಯ ಸನ್ನಿಧಿಯಲ್ಲಿ ಕೃಷ್ಣಾಪುರ ಶ್ರೀಗಳಿಗೆ ಅಕ್ಷಯ ಪಾತ್ರೆ ಹಾಗೂ ಬೆಳ್ಳಿ ಸಟ್ಟುಗ ಹಸ್ತಾಂತರಿಸಿದರು.
ತುಳಸಿ ಅರ್ಚನೆ, ಭಜನೆ ಮುಂದುವರಿಕೆ
ರಾಜಾಂಗಣದಲ್ಲಿ ನಡೆದ ಪರ್ಯಾಯ ದರ್ಬಾರ್ ಸಭೆಯಲ್ಲಿ ಆಶೀರ್ವಚನ ನೀಡಿದ ಪರ್ಯಾಯ ಶ್ರೀ ವಿದ್ಯಾಸಾಗರ ತೀರ್ಥ ಸ್ವಾಮೀಜಿ, ಪಲಿಮಾರು ಶ್ರೀಗಳು ಈ ಹಿಂದೆ ನಡೆಸಿದ ನಿತ್ಯ ತುಳಸಿ ಅರ್ಚನೆ ಹಾಗೂ ಎರಡು ವರ್ಷ ನಿರಂತರ ಭಜನಾ ಕಾರ್ಯಕ್ರಮ ಮುಂದುವರಿಸುವುದಾಗಿ ಘೋಷಿಸಿದರು.
ಕರೋನ ಸಂಕಷ್ಟ ಸಮಯದಲ್ಲಿ ಜನತೆ ಬಹಳ ಸಹಕಾರ ನೀಡಿದ್ದು, ಜನರ ಸ್ಪಂದನೆ ನೋಡಿ ಆಶ್ಚರ್ಯವಾಗಿದೆ. ಅವರ ವಿಶ್ವಾಸ ಉಳಿಸಿಕೊಳ್ಳುವ ಶಕ್ತಿ ದೇವರು ಕೊಡಲಿ ಎಂದು ಗುರುಗಳ ಮೂಲಕ ಪ್ರಾರ್ಥಿಸುವುದಾಗಿ ಹೇಳಿದರು.
ಈ ಸಂದರ್ಭ ಪರ್ಯಾಯ ಅದಮಾರು ಶ್ರೀ ಈಶಪ್ರಿಯ ತೀರ್ಥ ಸ್ವಾಮೀಜಿ, ಪಲಿಮಾರು ಮಠದ ಶ್ರೀ ವಿದ್ಯಾಧೀಶ ತೀರ್ಥ ಸ್ವಾಮೀಜಿ, ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ, ಕಾಣಿಯೂರು ಮಠದ ವಿದ್ಯಾವಲ್ಲಭ ತೀರ್ಥ ಸ್ವಾಮೀಜಿ, ಸೋದೆ ಮಠದ ವಿಶ್ವವಲ್ಲಭ ತೀರ್ಥ ಸ್ವಾಮೀಜಿ, ಪಲಿಮಾರು ಕಿರಿಯ ಶ್ರೀ ವಿದ್ಯಾರಾಜೇಶ್ವರ ತೀರ್ಥ ಸ್ವಾಮೀಜಿ, ಶಿರೂರು ಶ್ರೀ ವೇದ ವರ್ಧನ ತೀರ್ಥಸ್ವಾಮೀಜಿ ಉಪಸ್ಥಿತರಿದ್ದರು.
ಮಾಜಿ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್, ಹೈಕೋರ್ಟ್ ನ್ಯಾಯಮೂರ್ತಿ ದಿನೇಶ್ ಕುಮಾರ್, ಕರ್ನಾಟಕ ಬ್ಯಾಂಕ್ ಅಧ್ಯಕ್ಷ ಮಹಾಬಲೇಶ್ವರ, ಶಾಸಕ ರಘುಪತಿ ಭಟ್, ವಿಧಾನಪರಿಷತ್ ಸದಸ್ಯ ಮಂಜುನಾಥ ಭಂಡಾರಿ, ಮಾಜಿ ಸಚಿವ ವಿನಯಕುಮಾರ್ ಸೊರಕೆ ಭಾಗವಹಿಸಿದ್ದರು.