ಉಡುಪಿ: ಕೃಷ್ಣ ಮಠದಲ್ಲಿ ನ. 3ರಿಂದ 4 ದಿನದ ಲಕ್ಷದಿಪೋತ್ಸವ ಪ್ರಾರಂಭವಾಗಲಿದ್ದು, ವಾರ್ಷಿಕ ರಥೋತ್ಸವಗಳಿಗೆ ಚಾಲನೆ ದೊರೆಯಲಿದೆ. ಚಾತುರ್ಮಾಸ್ಯ ಕಾಲದಲ್ಲಿ ಗರ್ಭಗುಡಿ ಸೇರಿದ ಕೃಷ್ಣನ ಉತ್ಸವ ಮೂರ್ತಿ ಉತ್ಥಾನ ದ್ವಾದಶಿಯಂದು ರಥವನ್ನೇರಲಿದೆ. ಸೋಮವಾರ ಮಧ್ಯಾಹ್ನ ಪರ್ಯಾಯ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿ ಹಣತೆ ಮುಹೂರ್ತ ನೆರವೇರಿಸಲಿದ್ದಾರೆ. ಸಾಯಂಕಾಲ ಮಧ್ವಸರೋವರದ ಮಧ್ಯದಲ್ಲಿರುವ ಮಂಟಪದಲ್ಲಿ ಕ್ಷೀರಾಬ್ಧಿ ಪೂಜೆ ನಡೆಯಲಿದ್ದು, ಶ್ರೀಗಳು ತಮ್ಮ ಪಟ್ಟದ ದೇವರಿಗೆ ಅ್ಯರ್ ಪ್ರದಾನ ಮಾಡಲಿದ್ದಾರೆ. ರಾತ್ರಿ 7 ಗಂಟೆಗೆ ಮಠದಲ್ಲಿ ಉತ್ಸವ ಮುಹೂರ್ತ ಧಾರ್ಮಿಕ ವಿಧಿ ನಡೆಯಲಿದ್ದು, ನವಗ್ರಹ ಪೂಜೆ, ನವಗ್ರಹ ದಾನದ ನಂತರ ರಥೋತ್ಸವ ಪ್ರಾರಂಭವಾಗಲಿದೆ.
ತುಳಸೀ ಪೂಜೆ ಸಂಪನ್ನ
ಕೃಷ್ಣ ಮಠದಲ್ಲಿ ದೀಪಾವಳಿ ಪಾಡ್ಯದಿಂದ ಪ್ರಾರಂಭವಾದ ತುಳಸೀ ಪೂಜೆ ಉತ್ಥಾನ ದ್ವಾದಶಿ ದಿನ ಸೋಮವಾರ ಸಂಪನ್ನಗೊಳ್ಳಲಿದೆ. ಪರ್ಯಾಯ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿ ಪೂಜೆ ನೆರವೇರಿಸಲಿದ್ದಾರೆ. ಬೆಳಗ್ಗೆ 5 ಗಂಟೆಗೆ ಕೊನೆಯ ಪಶ್ಚಿಮ ಜಾಗರಪೂಜೆ ನಡೆಯಲಿದೆ.
ಖರೀದಿ ಭರಾಟೆ
ಉತ್ಥಾನ ದ್ವಾದಶಿ ತುಳಸೀ ಪೂಜೆ ಹಿನ್ನೆಲೆಯಲ್ಲಿ ಭಾನುವಾರ ರಥಬೀದಿಯಲ್ಲಿ ಹೂ, ಹಣ್ಣು ಮತ್ತು ನೆಲ್ಲಿಗಿಡ ಖರೀದಿ ಭರಾಟೆ ಜೋರಾಗಿತ್ತು. ಚಿಕ್ಕಮಗಳೂರು, ಹಾಸನ ಮೊದಲಾದ ಕಡೆಗಳಿಂದ ಆಗಮಿಸಿದ್ದ ವರ್ತಕರು ನಗರದ ವಿವಿಧೆಡೆ ವ್ಯಾಪಾರದಲ್ಲಿ ತೊಡಗಿದ್ದರು.