ಉಡುಪಿ: ಕೃಷ್ಣ ಮಠದ ವಾರ್ಷಿಕ ಜಾತ್ರೆ ಸಪ್ತೋತ್ಸವ ಭಾನುವಾರ ಬೆಳಗ್ಗೆ ಹಗಲು ತೇರು, ಅವಭೃತೋತ್ಸವದೊಂದಿಗೆ ಸಂಪನ್ನಗೊಂಡಿತು.
ಬೆಳಗ್ಗೆ 9.30ಕ್ಕೆ ಮಹಾಪೂಜೆ ಬಳಿಕ ಶ್ರೀಕೃಷ್ಣ ಹಾಗೂ ಮುಖ್ಯಪ್ರಾಣ ದೇವರನ್ನು ಬ್ರಹ್ಮರಥದಲ್ಲಿರಿಸಿ, ಪರ್ಯಾಯ ಶ್ರೀ ವಿದ್ಯಾಸಾಗರ ತೀರ್ಥ ಸ್ವಾಮೀಜಿ ಸಹಿತ ವಿವಿಧ ಮಠಾಧೀಶರು ಭಕ್ಷೃ, ಫಲವಸ್ತು, ತೆಂಗಿನಕಾಯಿಗಳನ್ನು ಸಮರ್ಪಿಸಿ ಮಂಗಳಾರತಿ ಬೆಳಗಿದರು. ನಂತರ ಭಕ್ತರಿಗೆ ಪ್ರಸಾದಗಳನ್ನು ವಿತರಿಸಲಾಯಿತು. ಪರ್ಯಾಯ ಶ್ರೀಗಳ ಸಹಿತ ವಿವಿಧ ಮಠಾಧೀಶರು ಬ್ರಹ್ಮರಥವನ್ನು ಎಳೆಯುವ ಮೂಲಕ ಹಗಲುತೇರಿನ ಮೆರವಣಿಗೆ (ಚೂರ್ಣೋತ್ಸವ) ಪ್ರಾರಂಭವಾಯಿತು. ಬಳಿಕ ವಸಂತ ಮಂಟಪದಲ್ಲಿ ಓಕುಳಿ ಪೂಜೆ, ಅಷ್ಟಾವಧಾನ ಸೇವೆ, ಅಷ್ಟ ಮಠದ ಸ್ವಾಮೀಜಿಯವರಿಗೆ ಪರ್ಯಾಯ ಮಠದಿಂದ ಗೌರವ ಸಮರ್ಪಣೆ, ಸೇವಾಕರ್ತೃಗಳಿಗೆ ಪ್ರಸಾದ ವಿತರಣೆ ನಡೆಯಿತು. ನಂತರ ಮಧ್ವ ಸರೋವರದಲ್ಲಿ ಅವಭೃತಥೋತ್ಸವ ನಡೆಯಿತು. ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ, ಸೋದೆ ಶ್ರೀ ವಿಶ್ವವಲ್ಲಭ ತೀರ್ಥ ಸ್ವಾಮೀಜಿ, ಕಾಣಿಯೂರು ಶ್ರೀವಿದ್ಯಾವಲ್ಲಭ ತೀರ್ಥರು, ಪಲಿಮಾರು ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದರು, ಪಲಿಮಾರು ಕಿರಿಯ ಶ್ರೀವಿದ್ಯಾರಾಜೇಶ್ವರ ತೀರ್ಥ ಸ್ವಾಮೀಜಿ ಉಪಸ್ಥಿತರಿದ್ದರು.