ಉಡುಪಿ: ಶ್ರೀಕೃಷ್ಣ ಜಯಂತಿ ಪ್ರಯುಕ್ತ ಕೃಷ್ಣ ಮಠಕ್ಕೆ ಭಾನುವಾರ ಬೆಳಗ್ಗಿನಿಂದಲೇ ರಾಜ್ಯ, ಹೊರರಾಜ್ಯಗಳಿಂದ ಭಕ್ತ ಜನಸಾಗರ ಹರಿದುಬಂದಿದ್ದು, ಸಾವಿರಾರು ಜನರು ಸರತಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದರು. ರಥಬೀದಿಯಲ್ಲಿಯೂ ಜನಜಂಗುಳಿ ಹೆಚ್ಚಾಗಿದ್ದು, ಅಷ್ಟಮಿ ಖರೀದಿ ಭರಾಟೆ ಜೋರಾಗಿತ್ತು.
ಕೃಷ್ಣದೇವರಿಗೆ ಪುತ್ತಿಗೆ ಕಿರಿಯ ಮಠಾಧೀಶ ಶ್ರೀ ಸುಶ್ರೀಂದ್ರ ತೀರ್ಥ ಸ್ವಾಮೀಜಿ ಕೃಷ್ಣನಿಗೆ ಬಂದ ಗೋವಿಂದ ವಿಶೇಷ ಅಲಂಕಾರ ಮಾಡಿದ್ದು, ಪರ್ಯಾಯ ಮಠಾಧೀಶ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿ ಮಹಾಪೂಜೆ ನೆರವೇರಿಸಿದರು. ಬಳಿಕ ಭೋಜನ ಶಾಲೆಯಲ್ಲಿ ಪರ್ಯಾಯ ಉಭಯ ಶ್ರೀಗಳು ಕೃಷ್ಣನಿಗೆ ರಾತ್ರಿ ಪೂಜೆಯಲ್ಲಿ ಸಮರ್ಪಿಸುವ ಲಡ್ಡಿಗೆ ಮತ್ತು ಚಕ್ಕುಲಿ ತಯಾರಿಗೆ ಚಾಲನೆ ನೀಡಿದರು.
ಕೃಷ್ಣ ಮಂತ್ರ ಜಪಕ್ಕೆ ಚಾಲನೆ
ಕೃಷ್ಣಜಯಂತಿ ಪರ್ವದಿನದಲ್ಲಿ ಮಠದಲ್ಲಿ ಲೋಕಕಲ್ಯಾಣಕ್ಕಾಗಿ ಉದಯಾಸ್ತಮಾನ ಪರ್ಯಂತ ಶ್ರೀಕೃಷ್ಣ ಮಂತ್ರ ಜಪಯಜ್ಞ ನಡೆಯಿತು. ಬೆಳಗ್ಗೆ ಪರ್ಯಾಯ ಶ್ರೀಪಾದರು ಚಾಲನೆ ನೀಡಿದರು.
ಹೂವಿನ ಅಲಂಕಾರ
ಕೃಷ್ಣ ಮಠದ ಸುತ್ತಮುತ್ತ ವಿಶೇಷ ಹೂವಿನ ಅಲಂಕಾರ ನೆರವೇರಿಸಲಾಗಿದೆ. ಗರ್ಭಗುಡಿ, ಮಠದ ಸುತ್ತುಪೌಳಿ, ಚಂದ್ರಶಾಲೆ, ತೀರ್ಥ ಮಂಟಪ, ಮಧ್ವಮಂಟಪ, ಸುಬ್ರಹ್ಮಣ್ಯ ಗುಡಿ, ನವಗ್ರಹಗುಡಿ ಮೊದಲಾದೆಡೆ ಸೇವಂತಿಗೆ, ಚೆಂಡು ಹೂ, ಕನಕಾಂಬರ, ತುಳಸಿ, ಅಬ್ಬಲ್ಲಿಗೆ ಹೂವಿನ ಅಲಂಕಾರ ನೋಡುಗರ ಕಣ್ಮನ ಸೆಳೆಯುತ್ತಿದೆ. ರಥಬೀದಿಯಲ್ಲಿ ಮೊಸರುಗುಡಿಕೆ ಉತ್ಸವಕ್ಕಾಗಿ ಅಳವಡಿಸಿರುವ 13 ಗುರ್ಜಿಗಳಿಗೆ ವಿಶೇಷ ವಸಾಲಂಕಾರ ಮಾಡಲಾಗಿದೆ.
ಮುದ್ದುಕೃಷ್ಣರ ಕಲರವ
ಕೃಷ್ಣಮಠದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ವಿಶೇಷ ಆಕರ್ಷಣೆ ಕೃಷ್ಣವೇಷ ಸ್ಪರ್ಧೆ. ಬೆಳಗ್ಗೆಯಿಂದ ಮಠದ ಪರಿಸರದಲ್ಲಿ ಕೃಷ್ಣ ವೇಷಧಾರಿ ಪುಟಾಣಿಗಳ ಕಲರವ ಮನಸೂರೆಗೊಳ್ಳುತ್ತಿತ್ತು. ಮುದ್ದುಕೃಷ್ಣನ ವೇಷ ಭೂಷಣ ತೊಟ್ಟ ಮಕ್ಕಳ ನಲಿದಾಟ, ತುಂಟಾಟ ನಂದಗೋಕುಲ ಮರು ಸೃಷ್ಟಿಸಿದಂತೆ ಭಾಸವಾಗಿದೆ.
ಗೀತಾಮಂದಿರದಲ್ಲಿ 1 ವರ್ಷದೊಳಗಿನ ಮಕ್ಕಳಿಗೆ ಬೆಣ್ಣೆಕೃಷ್ಣ ಸ್ಪರ್ಧೆ, ಮಧ್ವಮಂಟಪದಲ್ಲಿ 1 ರಿಂದ 3 ವರ್ಷ ಮಕ್ಕಳಿಗೆ ಮುದ್ದುಕೃಷ್ಣ ಸ್ಪರ್ಧೆ, ರಾಜಾಂಗಣದಲ್ಲಿ 3 ರಿಂದ 5 ವರ್ಷ ಮಕ್ಕಳಿಗೆ ಬಾಲಕೃಷ್ಣ ಸ್ಪರ್ಧೆ, ಅನಂತೇಶ್ವರ ದೇವಸ್ಥಾನದಲ್ಲಿ 5 ರಿಂದ 8 ವರ್ಷ ಮಕ್ಕಳಿಗೆ ಕಿಶೋರಕೃಷ್ಣ ಸ್ಪರ್ಧೆ ಆಯೋಜಿಸಲಾಗಿತ್ತು. ಸುಮಾರು 426 ಮಂದಿ ಮಕ್ಕಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದು, ಎಲ್ಲಾ ಮಕ್ಕಳಿಗೆ ಪ್ರಮಾಣ ಪತ್ರ ಹಾಗೂ ಕೃಷ್ಣ ಪ್ರಸಾದ ವಿತರಿಸಲಾಯಿತು.
ವೇಷಗಳ ಮೆರುಗು
ಶ್ರೀಕೃಷ್ಣಜನ್ಮಾಷ್ಟಮಿ ಸಂಭ್ರಮದ ಜತೆ ನಗರದಲ್ಲಿ ವಿವಿಧ ವೇಷಧಾರಿಗಳು ಕಣ್ಮನ ಸೆಳೆಯುತ್ತಿದ್ದಾರೆ. ಶ್ರೀಕೃಷ್ಣಮಠ ರಥಬೀದಿ ಸೇರಿದಂತೆ ನಗರದಲ್ಲೆಡೆ ಬಾಲಕೃಷ್ಣ, ಯ, ಹುಲಿವೇಷ ಸೇರಿದಂತೆ ನಾನಾಬಗೆಯ ವೇಷಧಾರಿಗಳು ತಿರುಗಾಟ ನಡೆಸುತ್ತಿದ್ದು, ನಗರದ ಬೀದಿಗಳಲ್ಲಿ ಪ್ರಮುಖ ಹುಲಿವೇಷ ತಂಡಗಳು, ಯಗಾನದ ವಿವಿಧ ವೇಷಗಳು, ರಕ್ಕಸ ವೇಷಗಳು, ಟ್ಯಾಬ್ಲೋ ತಂಡಗಳು ಎಲ್ಲೆಡೆ ಕಾಣಸಿಗುತ್ತಿವೆ. ನಗರದೆಲ್ಲೆಡೆ ಸುಮಾರು 30ಕ್ಕೂ ಹೆಚ್ಚು ಹುಲಿವೇಷಧಾರಿಗಳ ತಂಡ ಜನರನ್ನು ರಂಜಿಸುತ್ತಿದ್ದಾರೆ.
ಪೊಲೀಸ್ ಬಿಗಿಭದ್ರತೆ
ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಉಡುಪಿಯ ರಥಬೀದಿ, ಕೃಷ್ಣ ಮಠ ಪರಿಸರ ಮತ್ತು ನಗರದಲ್ಲಿ ಹೆಚ್ಚುವರಿ ಪೊಲೀಸ್ ಭದ್ರತೆಯನ್ನು ಒದಗಿಸಲಾಗಿದೆ. ರಥಬೀದಿಯಲ್ಲಿ ಸಹಾಯವಾಣಿಯನ್ನು ತೆರೆಯಲಾಗಿದ್ದು, ಸಿಸಿಟಿವಿ ಕಣ್ಗಾವಲಿರಿಸಲಾಗಿದೆ. ರಥಬೀದಿಯನ್ನು ಸಂಪರ್ಕಿಸುವ 8 ಗೇಟುಗಳಲ್ಲಿ ಪೊಲೀಸರನ್ನು ನಿಯೋಜಿಸಲಾಗಿದ್ದು, ಸಾರ್ವಜನಿಕರ ಮೇಲೆ ನಿಗಾ ಇಡಲಾಗಿದೆ.