ಕಿಕ್ಕೇರಿ ಹೋಬಳಿಯ ಗೋವಿಂದನಹಳ್ಳಿ ಗ್ರಾಮದ ವೇಣುಗೋಪಾಲಸ್ವಾಮಿ ದೇಗುಲದಲ್ಲಿ ಕೃಷ್ಣಜನ್ಮಾಷ್ಟಮಿ ಪ್ರಯುಕ್ತ ಶನಿವಾರ ಕೃಷ್ಣನಿಗೆ ಮಾಡಲಾಗಿದ್ದ ಪುಷ್ಪಾಲಂಕಾರ. 
ಜಿಲ್ಲೆ

ಗೋವಿಂದನಹಳ್ಳಿಯಲ್ಲಿ ವೇಣುಗೋಪಾಲನ ಸ್ಮರಣೆ

ನಾಗೇಶ ಎಸ್

ಕಿಕ್ಕೇರಿ: ಪಟ್ಟಣ ಸೇರಿದಂತೆ ಹೋಬಳಿಯ ವಿವಿಧ ಗ್ರಾಮಗಳಲ್ಲಿ ಕೃಷ್ಣ ಜನ್ಮಾಷ್ಟಮಿ ಅಂಗವಾಗಿ ಶನಿವಾರ ಸಂಭ್ರಮ ಮನೆ ಮಾಡಿತ್ತು.

ಆನೆಗೊಳ, ಗೋವಿಂದನಹಳ್ಳಿ ಮೊದಲಾದ ಗ್ರಾಮಗಳಲ್ಲಿ ತಳಿರು ತೋರಣ ಕಟ್ಟಿ, ರಂಗೋಲಿ ಬಿಡಿಸಿ ಕೃಷ್ಣನ ಬೊಂಬೆ, ಫೋಟೋ ಇಟ್ಟು ಪೂಜಿಸಲಾಯಿತು. ವಿವಿಧ ಶಾಲೆಗಳಲ್ಲಿ ಕೃಷ್ಣ, ರಾಧಾ, ರುಕ್ಮಿಣಿಯ ವೇಷಭೂಷಣ ಸ್ಪರ್ಧೆಗಳು ನಡೆದವು. ಗೋಕುಲನಂದನ ಭಜನೆ, ಕೀರ್ತನೆಗಳು ಮೇಳೈಸಿದವು. ಗೋವಿಂದನಹಳ್ಳಿ ಗ್ರಾಮದಲ್ಲಿನ ವೇಣುಗೋಪಾಲಸ್ವಾಮಿ ದೇಗುಲದಲ್ಲಿ ವೇಣುಗೋಪಾಲನಿಗೆ ವಿವಿಧ ಅಭಿಷೇಕ ನೆರವೇರಿಸಿ ಪರಿಮಳ ಪುಷ್ಪಗಳಿಂದ ಸರ್ವಾಲಂಕಾರಗೊಳಿಸಲಾಗಿತ್ತು.

ಗೋಕುಲನಂದನಿಗೆ ಬೆಣ್ಣೆ, ತುಪ್ಪ, ಚಕ್ಕುಲಿ, ಲಡ್ಡು, ಕೋಡುಬಳೆ, ನಿಪ್ಪಟ್ಟು, ಸಿಹಿ, ಖಾರಪೊಂಗಲ್, ಜಿಲೇಬಿಯಂತಹ ವಿವಿಧ ಖಾದ್ಯ, ಹಣ್ಣು ಹಂಪಲುಗಳನ್ನು ನೈವೇದ್ಯವಾಗಿ ಇಡಲಾಗಿತ್ತು. ಮಕ್ಕಳಿಗೆ ಸಿಹಿ ತಿನಿಸು, ಬೆಣ್ಣೆ ಹಂಚಿ ಖುಷಿಪಟ್ಟರು. ಪಾಲಕರು ಕೃಷ್ಣನ ವೇಷ ತೊಡಿಸಿ ಮಕ್ಕಳನ್ನು ಸಂಭ್ರಮದಿಂದ ರಸ್ತೆಯಲ್ಲಿ ಶಾಲೆಗೆ ಕರೆದುಕೊಂಡು ಹೋಗುತ್ತಿರುವುದನ್ನು ಕಂಡು ಹಲವರು ಸೆಲ್ಫಿ ತೆಗೆದುಕೊಂಡರು.

ಗೋವಿಂದನಹಳ್ಳಿಯಲ್ಲಿ ವೇಣುಗೋಪಾಲನಿಗೆ ಪಂಚಾಮೃತ ಅಭಿಷೇಕ ನೆರವೇರಿಸಿ ಬೆಣ್ಣೆ ಅಲಂಕಾರ ಮಾಡಲಾಗಿತ್ತು. ವಿವಿಧ ಪರಿಮಳ ಪುಷ್ಪ, ವಸ್ತ್ರಾಭರಣಗಳಿಂದ ಅಲಂಕರಿಸಿ ಭಕ್ತರಿಗೆ ದರ್ಶನಕ್ಕೆ ಅನುವು ಮಾಡಲಾಗಿತ್ತು. ಭಕ್ತರು ಸರತಿಯಲ್ಲಿ ನಿಂತು ಮಹಾಮಂಗಳಾರತಿ, ತೀರ್ಥ ಪ್ರಸಾದ ಸ್ವೀಕರಿಸಿದರು.