ಪಾಂಡವಪುರ: ಪಟ್ಟಣದ ಬಿಜಿಎಸ್ ಶಿಕ್ಷಣ ಸಂಸ್ಥೆಯಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಅಂಗವಾಗಿ ನಡೆದ ವೇಷಭೂಷಣ ಸ್ಪರ್ಧೆಯಲ್ಲಿ ಮಕ್ಕಳು ಶ್ರೀಕೃಷ್ಣ, ರಾಧೆ, ರುಕ್ಮಿಣಿ, ಅರ್ಜುನ, ಭೀಮ, ಶಿವ, ಪಾರ್ವತಿ, ಗಣಪತಿ ಸೇರಿದಂತೆ ಹಲವು ವೇಷಭೂಷಣ ಧರಿಸಿ ಪ್ರದರ್ಶನ ನೀಡಿದರು.
ಬ್ರಹ್ಮಲೋಕ, ಕೈಲಾಶ, ವೈಕುಂಠ, ಅಷ್ಟಲಕ್ಷ್ಮೀಯರು, ಪಾಂಡವರು ಮತ್ತು ಕೌರವರ ವೇಷ ಭೂಷಣಗಳು ಎಲ್ಲರ ಗಮನಸೆಳೆದವು. ಕೃಷ್ಣನ ಅವತಾರದಲ್ಲಿ ಮಕ್ಕಳು ನೀಡಿದ ಪ್ರದರ್ಶನಗಳನ್ನು ಕಂಡು ಪಾಲಕರು, ಆಗಮಿಸಿದ್ದ ಗಣ್ಯರು ಚಪ್ಪಾಳೆ ತಟ್ಟಿ ಪ್ರೋತ್ಸಾಹ ನೀಡಿದರು.
ಸಂಸ್ಥೆಯ ಕಾರ್ಯದರ್ಶಿ ಡಾ.ಜೆ.ಎನ್.ರಾಮಕೃಷ್ಣೇಗೌಡ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಶ್ರೀಕೃಷ್ಣ ಜನ್ಮಾಷ್ಟಮಿಯನ್ನು ಭಾರತೀಯರು ದೇಶದಾದ್ಯಂತ ವಿಜೃಂಭಣೆಯಿಂದ ಆಚರಿಸುತ್ತಾರೆ. ನಾವು ಶ್ರೀಕೃಷ್ಣ ಹತ್ತು ಅವತಾರಗಳನ್ನು ನೋಡಿದ್ದೇವೆ. ಆದರೆ ಇಲ್ಲಿ ನಡೆಯುತ್ತಿರುವ ವೇಷಭೂಷಣ ಸ್ಪರ್ಧೆಯಲ್ಲಿ ಶ್ರೀಕೃಷ್ಣನ 10 ಅವತಾರಗಳ ಜತೆಗೆ ಇನ್ನೂ ಹಲವಾರು ಅವತಾರಗಳನ್ನು ಕಣ್ತುಂಬಿಕೊಂಡಂತಾಯಿತು ಎಂದರು.
ದುಷ್ಠಶಕ್ತಿಗಳನ್ನು ಹೋಗಲಾಡಿಸುವುದೇ ಶ್ರೀಕೃಷ್ಣನ ಮೊದಲ ತಂತ್ರವಾಗಿತ್ತು. ದುಷ್ಟರ ಸಂಹಾರ ಮಾಡಿ ಸತ್ಯ, ಧರ್ಮ, ಪ್ರೀತಿ ತುಂಬಿದ ಆದರ್ಶ ಜಗತ್ತು ಸೃಷ್ಟಿಸುವುದೇ ಶ್ರೀಕೃಷ್ಣನ ಉದ್ದೇಶವಾಗಿತ್ತು. ಅದೇ ರೀತಿ ಕೃಷ್ಣ ಹಲವು ಅವತಾರಗಳೊಂದಿಗೆ ದುಷ್ಠರನ್ನು ಸಂಹರಿಸುವ ಕೆಲಸ ಮಾಡಿದ್ದಾರೆ. ಕೃಷ್ಣ ಜನ್ಮಾಷ್ಟಯ ಅಂಗವಾಗಿ ಪಾಲಕರು, ಶಿಕ್ಷಕರು ಹೆಚ್ಚಿನ ಪರಿಶ್ರಮ ಹಾಕಿ ಮಕ್ಕಳನ್ನು ಕರೆತಂದು ಭಾಗವಹಿಸಿದ್ದಾರೆ. ಮಕ್ಕಳಿಗೆ ಕೃಷ್ಣನ ಗುಣಗಳನ್ನು ಮೈಗೂಡಿಸಿ ಸಮಾಜದಲ್ಲಿ ಸನ್ಮಾರ್ಗದಲ್ಲಿ ನಡೆಸಿ ಮಾದರಿಯಾಗಿ ಮಾಡಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ವೀರಶೈವ ಮುಖಂಡ ಎಸ್.ಎ.ಮಲ್ಲೇಶ್, ಸಿ.ಆರ್.ರಮೇಶ್, ನಾಗಸುಂದರ, ರವಿಕುಮಾರ್, ಕೃಷ್ಣೇಗೌಡ, ಮಧು, ಮಂಜು ಇತರರು ಇದ್ದರು.