ಜಿಲ್ಲೆ

ಸಿದ್ದಾಪುರದಲ್ಲಿ ಕೃಷ್ಣ ಜನ್ಮಾಷ್ಟಮಿ ಸಡಗರ

ಸಿದ್ದಾಪುರ: ಸಿದ್ದಾಪುರದ ವಿವಿಧ ಕಡೆಗಳಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿಯನ್ನು ಸಡಗರ ಸಂಭ್ರಮದಿಂದ ಆಚರಿಸಲಾಯಿತು. ಸುತ್ತಮುತ್ತಲಿನ ವಿವಿಧ ದೇವಸ್ಥಾನಗಳಲ್ಲಿ ಕೃಷ್ಣನ ವಿಗ್ರಹ ಪ್ರತಿಷ್ಠಾಪಿಸಿ ಅಭಿಷೇಕ, ವಿಶೇಷ ಪೂಜೆ ನೆರವೇರಿಸಲಾಯಿತು. ಭಕ್ತರು ಕೃಷ್ಣನನ್ನು ಸ್ತುತಿಸುವ ಭಜನೆ, ಕೀರ್ತನೆ ಹಾಡಿದರು. ಕೃಷ್ಣನ ವಿಗ್ರಹದ ದರ್ಶನಾಶೀರ್ವಾದ ಪಡೆದರು. ಪಾಲಕರು ಮಕ್ಕಳಿಗೆ ಕೃಷ್ಣ ರಾಧೆಯರ ವೇಷಭೂಷಣ ತೊಡಿಸಿ ಸಂಭ್ರಮಿಸಿದರು.

ಪಟ್ಟಣದ ಶ್ರೀ ಕೃಷ್ಣ ವಿದ್ಯಾಮಂದಿರ ಶಾಲೆಯಲ್ಲಿ ಕೃಷ್ಣ ಜನ್ಮಾಷ್ಟಮಿ ನಿಮಿತ್ತ ಕೃಷ್ಣ ಹಾಗೂ ರಾಧಾ ವೇಷ ಭೂಷಣ ಸ್ಪರ್ಧೆ ಏರ್ಪಡಿಸಲಾಗಿತ್ತು. ಪಾಲಕರು ಮಕ್ಕಳಿಗೆ ಉತ್ತಮ ಅಲಂಕಾರ ಮಾಡಿ, ಹಸನ್ಮುಖರಾಗಿ ಶಾಲೆಗೆ ಆಗಮಿಸಿದ್ದರು. ಗಂಡು ಮಕ್ಕಳು ಕೃಷ್ಣ ಹಾಗೂ ಹೆಣ್ಣು ಮಕ್ಕಳು ರಾಧಾ ವೇಷ ಭೂಷಣದಲ್ಲಿ ಗಮನಸೆಳೆದರು.