ಹುಲಿಕೆರೆ ಗ್ರಾಮದ ಬಿಜಿಎಸ್ ಶಾಲೆಯಲ್ಲಿ ಕೃಷ್ಣಜನ್ಮಾಷ್ಟಮಿ ಅಂಗವಾಗಿ ಮಕ್ಕಳು ಕೃಷ್ಣ, ರಾಧೆ ವೇಷ ತೊಟ್ಟು ಗಮನ ಸೆಳೆದರು. ಶ್ರೀ ಸೋಮೇಶ್ವರನಾಥ ಸ್ವಾಮೀಜಿ, ಆಶಾ, ಅಭಿ ಇತರರು ಇದ್ದರು. 
ಜಿಲ್ಲೆ

ಬಿಜಿಎಸ್ ಶಾಲೆಯಲ್ಲಿ ಕೃಷ್ಣ ಜನ್ಮಾಷ್ಟಮಿ ಸಂಭ್ರಮ

ನಾಗೇಶ ಎಸ್

ಕೆ.ಆರ್.ಸಾಗರ: ಹುಲಿಕೆರೆ ಗ್ರಾಮದ ಕೆ.ಆರ್.ಸಾಗರ ಮುಖ್ಯ ರಸ್ತೆಯಲ್ಲಿರುವ ಬಿ.ಜಿ.ಎಸ್. ಬಾಲಜಗತ್ ಶಾಲೆಯಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಅಂಗವಾಗಿ ಶಾಲೆಯ ಮಕ್ಕಳಿಗೆ ರಾಧೆ-ಕೃಷ್ಣ ವೇಷ ಸ್ಪರ್ಧೆಯನ್ನು ಶನಿವಾರ ಆಯೋಜಿಸಲಾಗಿತ್ತು.

ಆದಿಚುಂಚನಗಿರಿ ಮೈಸೂರು ಶಾಖಾ ಮಠದ ಕಾರ್ಯದರ್ಶಿ ಶ್ರೀ ಸೋಮೇಶ್ವರನಾಥ ಸ್ವಾಮೀಜಿ ಅವರು ಶ್ರೀಕೃಷ್ಣ, ಶ್ರೀ ಬಾಲಗಂಗಾಧರ ಸ್ವಾಮೀಜಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು. ನಂತರ ತೊಟ್ಟಿಲಿನಲ್ಲಿ ಕೃಷ್ಣವೇಶ ತೊಟ್ಟ ಮಗುನ್ನು ಕೂರಿಸಿ ತೂಗುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಮಕ್ಕಳು ಉತ್ತಮ ಪ್ರಜೆಯಾಗಲು ಮೊದಲು ತಂದೆ-ತಾಯಿ ತಮ್ಮ ಮಕ್ಕಳ ಬಗ್ಗೆ ಹೆಚ್ಚಿನ ಗಮನ ಕೊಡಬೇಕು. ಮಕ್ಕಳು ದೇವರಿದ್ದಂತೆ, ಅವರನ್ನು ನಾವು ಸಂತೋಷದಿಂದ ನೋಡುವುದೇ ನಮ್ಮ ಸಂತೋಷ. ಅವರ ದಿನ ನಿತ್ಯದ ಚಟುವಟಿಕೆ ಬಗ್ಗೆ ತಿಳಿದುಕೊಳ್ಳುವುದು ಪಾಲಕರ ಕರ್ತವ್ಯವಾಗಿದೆ ಎಂದರು.

ಕೆ.ಆರ್.ಸಾಗರ ಕ್ಲಸ್ಟರ್ ಸಿ.ಆರ್.ಪಿ ಮಹೇಶ್ ಮಾತನಾಡಿ, ಭಗವಾನ್ ಕೃಷ್ಣರ ಭಗವದ್ಗೀತೆ ನಮಗೆ ಮಾದರಿಯಾಗಿದೆ. ಇದರಲ್ಲಿನ ಉಪದೇಶಗಳಿಗೆ ನಮ್ಮ ಬದುಕನ್ನು ತಿದ್ದುವ, ತೀಡುವ, ಬೆಳಗುವ ಶಕ್ತಿ ಇದೆ. ನಾವು ಇಂತಹ ಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮಗಳನ್ನು ನಡೆಸುವುದರಿಂದ ಸಾಂಸ್ಕೃತಿಕ ಚಟುವಟಿಕೆಗಳು ಕೂಡ ಬೆಳೆಸಲು ಸಾಧ್ಯವಾಗುತ್ತದೆ ಎಂದರು.

ಶಾಲೆಯ ಮಕ್ಕಳು ರಾಧೆ-ಕೃಷ್ಣ ವೇಷ ತೊಟ್ಟು ಪ್ರದರ್ಶನ ಮಾಡಿದರು. ಮುಖ್ಯ ಶಿಕ್ಷಕಿ ಆಶಾ, ವ್ಯವಸ್ಥಾಪಕ ಅಭಿ ಇತರರು ಇದ್ದರು.