ಹುಬ್ಬಳ್ಳಿ: ಇಲ್ಲಿಯ ಸೇವಾ ಭಾರತಿ ಟ್ರಸ್ಟ್ ವಿದ್ಯಾವಿಕಾಸ ಪ್ರಕಲ್ಪ ವತಿಯಿಂದ ಶ್ರೀಕೃಷ್ಣ ಜನ್ಮಾಷ್ಟಮಿ ನಿಮಿತ್ತ ಭಾನುವಾರ ಏರ್ಪಡಿಸಿದ್ದ ವೇಷಭೂಷಣ ಹಾಗೂ ಮೆರವಣಿಗೆ ಸಾರ್ವಜನಿಕರ ಗಮನ ಸೆಳೆಯಿತು.
ಹಿಂದುಳಿದ ಬಸ್ತಿಗಳಿಗೆ ಸೇರಿದ 300ಕ್ಕೂ ಹೆಚ್ಚು ಬಾಲಕರು, ಶಿಕ್ಷಕರು ಮತ್ತು ಗಣ್ಯರು ಮೆರವಣಿಗೆಯಲ್ಲಿ ಪಾಲ್ಗೊಂಡು ಆಚರಣೆಗೆ ಮೆರಗು ತಂದರು.
ದೇಶಪಾಂಡೆನಗರ ಕೃಷ್ಣ ಕಲ್ಯಾಣ ಮಂಟಪದಿಂದ ಆರಂಭವಾದ ಮೆರವಣಿಗೆ ಜಿಮಖಾನಾ ಮೈದಾನದವರೆಗೆ ನಡೆಯಿತು. ಜನ್ಮಾಷ್ಟಮಿಯು ಪ್ರತಿನಿಧಿಸುವ ಏಕತೆ ಮತ್ತು ಭಕ್ತಿಯ ಮನೋಭಾವವನ್ನು ಒಟ್ಟಾಗಿ ಪ್ರತಿಬಿಂಬಿಸುವ ಭವ್ಯ ಮೆರವಣಿಗೆಯಾಗಿ ಮಾರ್ಪಟ್ಟಿತು.
ವಿದ್ಯಾ ವಿಕಾಸ ಪ್ರಕಲ್ಪದ ರಾಜ್ಯ ಅಧ್ಯಕ್ಷೆ ಭಾರತಿ ನಂದಕುಮಾರ, ರಾಚಯ್ಯ ವಾರಿಕಲ್ಮಠ, ಚಂದ್ರಶೇಖರ ಗೋಕಾಕ, ಸುಭಾಸಸಿಂಗ್ ಜಮಾದಾರ, ದತ್ತಾತ್ರೇಯ ರತನ, ಆದಿತ್ಯ ನಂದಕುಮಾರ ಅವರು ನೇತೃತ್ವ ವಹಿಸಿದ್ದರು.
300ಕ್ಕೂ ಹೆಚ್ಚು ಬಾಲ ರಾಧಾ- ಕೃಷ್ಣರು ಮೆರವಣಿಗೆಯಲ್ಲಿ ಘೋಷಣೆಗಳನ್ನು ಕೂಗುತ್ತ ಮನಸೆಳೆದರು. ಜೈ ಕೃಷ್ಣ ಜೈ ಜೈ ಕೃಷ್ಣ, ಗೀತಾ ಗೀತಾ ಭಗವದ್ಗೀತಾ ಘೋಷಣೆಗಳು ಮೊಳಗಿದವು. ಮಕ್ಕಳು ದಾರಿಯಲ್ಲಿ ದಾನಿಗಳು ನೀಡಿದ ಜ್ಯೂಸ್, ಚಾಕಲೇಟ್, ಬಿಸ್ಕತ್ಗಳನ್ನು ಸವಿದರು.
ಕರ್ನಾಟಕ ಜಿಮಖಾನ ಮೈದಾನದಲ್ಲಿ ನಡೆದ ಸಮಾರಂಭದಲ್ಲಿ ಮಾತನಾಡಿದ ವಿದ್ಯಾ ವಿಕಾಸ ಪ್ರಕಲ್ಪದ ರಾಜ್ಯ ಅಧ್ಯೆ ಭಾರತಿ ನಂದಕುಮಾರ, ಕೃಷ್ಣ ಜನ್ಮಾಷ್ಟಮಿ ಆಚರಣೆಯು ಕೇವಲ ಒಂದು ಉತ್ಸವ ಅಲ್ಲ, ಇದು ನಮ್ಮ ಶ್ರೀಮಂತ ಸಂಸ್ಕೃತಿಯ ಪರಂಪರೆ, ನಮ್ಮ ಸಾಂಸತಿಕ ಮೌಲ್ಯಗಳ ಪ್ರತಿಬಿಂಬ ಎಂದು ಹೇಳಿದರು.
ಅತಿಥಿಗಳಾಗಿದ್ದ ಡಾ. ಶ್ರೀನಿವಾಸ ಜೋಶಿ ಮತ್ತು ಡಾ. ಚೈತನ್ಯ ಕುಲಕರ್ಣಿ ಅವರು, ವಿದ್ಯಾ ವಿಕಾಸದ ಪ್ರಯತ್ನವನ್ನು ಶ್ಲಾಘಿಸಿದರು. ಮಕ್ಕಳ ನಿಯಮಿತ ಆರೋಗ್ಯ ತಪಾಸಣೆಗೆ ತಮ್ಮ ಸಹಾಯ ಸಹಕಾರ ಯಾವತ್ತೂ ಇರುತ್ತದೆ ಎಂದು ಭರವಸೆ ನೀಡಿದರು.
ಮಜೇಥಿಯಾ ಫೌಂಡೇಷನ್ ಅಧ್ಯಕ್ಷೆ ನಂದಿನಿ ಮಾಜೇಥಿಯಾ, ಇನ್ನರ್ವ್ಹೀಲ್ ಕ್ಲಬ್‌ನ ಶಿಲ್ಪಾ ಶೆಟ್ಟಿ ಅವರು, ಸಮಾಜಕ್ಕೆ ಸಮರ್ಪಿತ ಸೇವೆ ಇಂದಿನ ಅಗತ್ಯವಾಗಿದೆ ಎಂದರು.
ಡಾ. ರಘು ಅಕಮಂಚಿ, ನಂದಕುಮಾರ ಇತರರು ಉಪಸ್ಥಿತರಿದ್ದರು.
ಮಡಕೆ ಒಡೆಯುವುದು, ಲಕ್ಷ್ಮಿ ಒಕಡೆ ಅವರ ತಂಡದಿಂದ ಕೃಷ್ಣ ರೂಪಕ ನೃತ್ಯ ಮತ್ತು ಭಕ್ತೀಗಿತೆಗಳು ನಡೆದವು.
ರಾಚಯ್ಯ ವಾರಿಕಲ್ಮಠ ಪ್ರಾಸ್ತಾವಿಕ ಮಾತನಾಡಿದರು. ಅನಿತಾ ಬಾಗಲಕೋಟೆ ನಿರ್ವಹಣೆ ಮಾಡಿದರು. ರಾಜಶೇಖರ ಮಾಣಿಕ್ಯಂ ವಂದಿಸಿದರು.