ಕೆ.ಪಿ. ನಂಜುಂಡಿ 
ಜಿಲ್ಲೆ

ಜೂ.19ರಂದು ಕೃಷ್ಣ ಜೆ.ರಾವ್ ಪ್ರಕರಣ ಸುಖಾಂತ್ಯ ನಿರೀಕ್ಷೆ

ಮಂಗಳೂರು: ಮದುವೆಯಾಗುವುದಾಗಿ ನಂಬಿಸಿ, ಮಗುವಾದ ಬಳಿಕ ವಂಚಿಸಿದ ಪುತ್ತೂರು ಕೃಷ್ಣ ಜೆ.ರಾವ್ ಪ್ರಕರಣ ಜೂ.19ರಂದು ಸುಖಾಂತ್ಯಗೊಳ್ಳುವ ನಿರೀಕ್ಷೆ ಇದೆ ಎಂದು ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾ ರಾಜ್ಯಾಧ್ಯಕ್ಷ ಕೆ.ಪಿ. ನಂಜುಂಡಿ ತಿಳಿಸಿದರು.
ರಾಜಿ ಸಂಧಾನಕ್ಕೆ ಆರೋಪಿ ಪರ ವಕೀಲರು ಹೈಕೋಟ್‌ನಲ್ಲಿ ಪ್ರಸ್ತಾಪಿಸಿದ್ದು, ಈ ಹಿನ್ನೆಲೆಯಲ್ಲಿ ಸಂತ್ರಸ್ತೆಯ ಕುಂಟುಂಬಿಕರು ಹಾಗೂ ಆರೋಪಿಯ ಕುಟುಂಬಿಕರು ಜೂ.19ರಂದು ಮಧ್ಯಸ್ಥಿಕೆ ಕೇಂದ್ರಕ್ಕೆ ಹಾಜರಾಗಬೇಕು ಎಂದು ಹೈಕೋಟ್ ಸೂಚಿಸಿದೆ. ಮುಂದಿನ ವಿಚಾರಣೆಯನ್ನು ಜೂ.30ಕ್ಕೆ ನಿಗದಿಪಡಿಸಲಾಗಿದೆ. ರಾಜಿ ಸಂಧಾನದ ಮೂಲಕ ಸಂತ್ರಸ್ತೆಗೆ ನ್ಯಾಯ ದೊರೆಯುವ ಭರವಸೆಯಿದೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಅವರು ಹೇಳಿದರು.
ಪ್ರಕರಣದಿಂದ ಎರಡೂ ಕುಟುಂಬಗಳು ತೊಂದರೆ, ಅವಮಾನ ಅನುಭವಿಸಿದ್ದು, ರಾಜಿ ಸಂಧಾನದ ಮೂಲಕ ಸಂತ್ರಸ್ತೆಯನ್ನು ಕೃಷ್ಣ ಜೆ. ರಾವ್ ಕುಟುಂಬಿಕರು ಮನೆ ತುಂಬಿಸಿಕೊಳ್ಳುವ ವಿಶ್ವಾಸವಿದೆ. ಸಂತ್ರಸ್ತೆಗೆ ಗಂಡ, ಮಗುವಿಗೆ ಅಪ್ಪ ಬೇಕು. ಈ ಹಿನ್ನೆಲೆಯಲ್ಲಿ ಜೂ. 17ರಂದು ನಿಗದಿಪಡಿಸಿದ್ದ ಮಗುವಿನ ನಾಮಕರಣವನ್ನು ಮುಂದೂಡಲಾಗಿದೆ ಎಂದು ತಿಳಿಸಿದರು.
ಈ ಪ್ರಕರಣಕ್ಕೆ ಸಂಬಂಧಿಸಿ ಹುಡುಗಿ ಹಾಗೂ ಹುಡುಗ ಸಮಾನವಾಗಿ ತಪ್ಪು ಎಸಗಿದ್ದಾರೆ. ರಾಜಿ ಸಂಧಾನಕ್ಕೆ ಮುಂದಾಗಿರುವ ಕೃಷ್ಣ ಜೆ. ರಾವ್ ಕುಟುಂಬಿಕರ ನಿರ್ಧಾರ ಸ್ವಾಗತಾರ್ಹ. ಇಂತಹಾ ಪ್ರಕರಣ ಯಾವುದೇ ಕುಟುಂಬದಲ್ಲಿ ಮುಂದಕ್ಕೆ ನಡೆಯಬಾರದು. ಈ ಬಗ್ಗೆ ವಿದ್ಯಾರ್ಥಿ ಜೀವನದಲ್ಲಿರುವ ಹುಡುಗ- ಹುಡುಗಿಯರ ಎಚ್ಚರ ವಹಿಸಬೇಕು ಎಂದರು.
ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾ ಬೆಂಗಳೂರು ಇದರ ಪದಾಧಿಕಾರಿಗಳಾದ ಲಗ್ಗೆರೆ ರವಿಕುಮಾರ್, ಜನಾರ್ದನ ಆಚಾರ್, ಲೋಕೇಶ್ ತಿಟ್ಟಹಳ್ಳಿ, ಜಗದೀಶ್ ಪೀಣ್ಯ, ಉಡುಪಿ ಘಟಕ ಉಪಾಧ್ಯಕ್ಷ ಗೋಪಾಲ್, ಗಂಗಾಧರ್ ಆಚಾರ್ ಉಪಸ್ಥಿತರಿದ್ದರು.