ಜಿಲ್ಲೆ

ಆ.11ರಂದು ಬುನಾದಿ ತರಬೇತಿ ಕಾರ್ಯಾಗಾರ: ಕೃಷಿಕ್ ಸರ್ವೋದಯ ಟ್ರಸ್ಟ್ ಅಧ್ಯಕ್ಷ ಟಿ.ತಿಮ್ಮೇಗೌಡ ಮಾಹಿತಿ

ಕೆ.ಎನ್.ರಾಘವೇಂದ್ರ

ಮಂಡ್ಯ: ಮಂಡ್ಯ ಕೃಷಿಕ್ ಸರ್ವೋದಯ ಟ್ರಸ್ಟ್‌ನ ರಜತ ಮಹೋತ್ಸವ ಸಂಭ್ರಮದ ಅಂಗವಾಗಿ ಅ.11ರಂದು ಬೆಳಗ್ಗೆ 10ಗಂಟೆಗೆ ಕೆಎಎಸ್, ಐಎಎಸ್, ಬ್ಯಾಂಕಿಂಗ್ ಮತ್ತಿತರ ಸ್ಪರ್ಧಾತ್ಮಕ ಪರೀಕ್ಷೆಗಳ ಮಾಹಿತಿ ಹಂಚಿಕೊಳ್ಳಲು ನಗರದಲ್ಲಿ ‘ಬುನಾದಿ ತರಬೇತಿ ಕಾರ್ಯಾಗಾರ’ ಆಯೋಜಿಸಲಾಗಿದೆ ಎಂದು ಟ್ರಸ್ಟ್ ಅಧ್ಯಕ್ಷ ಟಿ.ತಿಮ್ಮೇಗೌಡ ಹೇಳಿದರು.

ಪ್ರಸಕ್ತ ವರ್ಷದಲ್ಲಿ 60 ಸಾವಿರಕ್ಕೂ ಹೆಚ್ಚು ಹುದ್ದೆಗೆ ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಅಂದು ಟ್ರಸ್ಟ್‌ನ ಡಾ.ಎಚ್.ಡಿ.ಚೌಡಯ್ಯ ಸಭಾಂಗಣದಲ್ಲಿ ಆಯೋಜಿಸಿರುವ ಕಾರ್ಯಾಗಾರದಲ್ಲಿ ಪರೀಕ್ಷೆಗಳ ಬಗ್ಗೆ ಮಾಹಿತಿ, ಮಾರ್ಗದರ್ಶನ ಮತ್ತು ತರಬೇತಿ ನೀಡಲಾಗುತ್ತದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಕೆನರಾಬ್ಯಾಂಕ್‌ನ ನಿವೃತ್ತ ವ್ಯವಸ್ಥಾಪಕ ಡಾ.ಎಸ್.ಟಿ.ರಾಮಚಂದ್ರ ಬ್ಯಾಂಕಿಂಗ್ ಪರೀಕ್ಷೆ ಬಗ್ಗೆ ಹಾಗೂ ಡಾ.ಹೇಮಚಂದ್ರ ಅವರು ಐಎಎಸ್, ಕೆಎಎಸ್ ಸೇರಿ ಇನ್ನಿತರ ಸ್ಪರ್ಧಾತ್ಮಕ ಪರೀಕ್ಷೆಗಳ ಮಹತ್ವ, ಸವಾಲು, ಪರೀಕ್ಷಾ ವಿಧಾನ, ಪಠ್ಯಕ್ರಮ ಮತ್ತು ಪರೀಕ್ಷಾ ಪೂರ್ವ ಸಿದ್ಧತೆ ಬಗ್ಗೆ ಮಾರ್ಗದರ್ಶನ ನೀಡಲಿದ್ದಾರೆ. ಅಧ್ಯಕ್ಷ ಟಿ.ತಿಮ್ಮೇಗೌಡ, ಕಾರ್ಯಾಧ್ಯಕ್ಷ ಡಾ.ರಾಮಲಿಂಗಯ್ಯ, ಉಪಾಧ್ಯಕ್ಷ ಡಾ.ಎಂ.ಮಾದಯ್ಯ ಸೇರಿದಂತೆ ಪದಾಧಿಕಾರಿಗಳು ಭಾಗವಹಿಸಲಿದ್ದಾರೆ. ಆಸಕ್ತ ಉದ್ಯೋಗಾಕಾಂಕ್ಷಿಗಳು ಭಾಗವಹಿಸಿ ಕಾರ್ಯಾಗಾರದ ಸದುಪಯೋಗಪಡೆದುಕೊಳ್ಳುವಂತೆ ಮನವಿ ಮಾಡಿದರು.

ಕಾರ್ಯಾಧ್ಯಕ್ಷ ಡಾ.ರಾಮಲಿಂಗಯ್ಯ, ಉಪಾಧ್ಯಕ್ಷ ಡಾ.ಎಂ.ಮಾದಯ್ಯ, ಕಾರ್ಯದರ್ಶಿ ಡಾ.ಕೆ.ಬಿ.ಬೋರಯ್ಯ, ಜಂಟಿ ಕಾರ್ಯದರ್ಶಿ ಡಾ.ಎಸ್.ಟಿ.ರಾಮಚಂದ್ರ, ಸಂಘಟನಾ ಕಾರ್ಯದರ್ಶಿ ಡಿ.ಎಸ್.ದೇವರಾಜು ಇದ್ದರು.