- ವಿಜಯವಾಣಿ ಸುದ್ದಿಜಾಲ ಧಾರವಾಡ
ಒಬ್ಬ ಕೃಷಿಕ ಸರ್ಕಾರಿ ನೌಕರನಿಗಿಂತ 10 ಪಟ್ಟು ಹೆಚ್ಚು ದುಡಿಯಬಲ್ಲ. ದುರ್ದೈವವೆಂದರೆ ಕೃಷಿ ಕೆಲಸಕ್ಕೆ ಕೂಲಿ ಕಾರ್ಮಿಕರು ಸಿಗುತ್ತಿಲ್ಲ. ಪರಿಣಾಮ ರೈತರು ಜಮೀನುಗಳನ್ನು ಮಾರುತ್ತಿದ್ದು, ಹೊರ ಲೇಔಟ್‌ಗಳು ತಲೆ ಎತ್ತುತ್ತಿವೆ. ಕೃಷಿ ಕಾರ್ಮಿಕರ ಸಮಸ್ಯೆ ಬಗೆಹರಿಸಲು ಸರ್ಕಾರಗಳು ಉದ್ಯೋಗಾ ಖಾತ್ರಿ ಯೋಜನೆಯನ್ನು ಕೃಷಿ ವಲಯಕ್ಕೂ ವಿಸ್ತರಿಸುವಂಥ ನೀತಿ ನಿರೂಪಿಸುವ ಅಗತ್ಯವಿದೆ ಎಂದು ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು.
ನಗರದ ಕೃಷಿ ವಿಶ್ವವಿದ್ಯಾಲಯ ಆಯೋಜಿಸಿರುವ 4 ದಿನಗಳ ಕೃಷಿ ಮೇಳದ ಉದ್ಘಾಟನಾ ಸಮಾರಂಭದಲ್ಲಿ ಭಾನುವಾರ ಅವರು ಮಾತನಾಡಿದರು.
ಕೃಷಿ ವಲಯಕ್ಕೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಹಲವಾರು ಯೋಜನೆಗಳನ್ನು ಅನುಷ್ಠಾನಗೊಳಿಸಿದ್ದರೂ ರೈತರು ನೆಮ್ಮದಿಯಿಂದ ಇಲ್ಲ. ಕೃಷಿ ಕಾರ್ಮಿಕರ ಕೊರತೆಯಿಂದ ಬೇಸತ್ತ ರೈತರು ಹೊಲಗಳನ್ನು ಮಾರುತ್ತಿದ್ದಾರೆ. ಮತ್ತೆ ಕೆಲವರು ಲಾವಣಿ ಕೊಟ್ಟು ನಗರ ಸೇರುತ್ತಿದ್ದಾರೆ. ಬಂದ ಹಣವನ್ನು ಬ್ಯಾಂಕ್‌ನಲ್ಲಿಟ್ಟು ಜೀವನ ಸಾಗಿಸುವ ಅನಿವಾರ್ಯತೆ ಎದುರಾಗಿದೆ. ಈ ವಿಚಾರವನ್ನು ಸದನದಲ್ಲೂ ಪ್ರಸ್ತಾಪಿಸಿದ್ದೇನೆ. ಕೃಷಿ ವಿಶ್ವವಿದ್ಯಾಲಯದ ಸಂಶೋಧನೆಗಳು ರೈತರಿಗೆ ಉಪಯೋಗವಾಗಬೇಕು. ಕೃಷಿ, ತೋಟಗಾರಿಕೆ, ಪಶು ವೈದ್ಯಕೀಯ, ಮೀನುಗಾರಿಕೆ ವಿಶ್ವವಿದ್ಯಾಲಯಗಳು ಸಂಯೋಜನೆಗೊಳ್ಳುವುದರಿ0ದ ರೈತರಿಗೆ ಅನುಕೂಲ ಎಂದರು.
ಕೃಷಿ ಮೇಳ ಉದ್ಘಾಟಿಸಿದ ಉಸ್ತುವಾರಿ ಸಚಿವ ಸಂತೋಷ ಲಾಡ್ ಮಾತನಾಡಿ, ಕೃಷಿಯಲ್ಲಿ ಆಧುನಿಕ ತಂತ್ರಜ್ಞಾನ ಹಾಗೂ ಸಂಶೋಧನೆಗಳು ಹೆಚ್ಚೆಚ್ಚು ಬಳಕೆಯಾಗುತ್ತಿವೆ. ಆದರೂ ದೇಶದ ಕೃಷಿ ಇಳುವರಿ ಇತರ ದೇಶಗಳಿಗೆ ಹೋಲಿಸಿದರೆ ನಿಗದಿತ ಪ್ರಮಾಣದಲ್ಲಿ ಏರಿಕೆಯಾಗದಿರುವ ಬಗ್ಗೆ ಕೃಷಿ ವಿಜ್ಞಾನಿಗಳು ಆತ್ಮಾವಲೋಕನ ಮಾಡಿಕೊಳ್ಳಬೇಕು. ಇಲ್ಲಿನ ಸಂಶೋಧನೆಗಳು ರೈತರಿಗೆ ಅನುಕೂಲವಾಗುವಂತೆ ಕೃಷಿ ವಿಜ್ಞಾನಿಗಳು ರೈತರ ಕ್ಷೇತ್ರಕ್ಕೆ ತೆರಳಿ ಸಮಸ್ಯೆ ಆಲಿಸಿ ಪರಿಹಾರ ನೀಡಬೇಕು. ಕೃಷಿ ಜಮೀನು ಹೆಚ್ಚಿದ್ದರೂ ವಿದೇಶಗಳಿಗೆ ಹೋಲಿಸಿದರೆ ನಮ್ಮ ಉತ್ಪಾದನೆ ಕಡಿಮೆ ಇರುವುದು ಕಳವಳಕಾರಿ. ಕೃಷಿಯಲ್ಲಿ ಯಾಂತ್ರೀಕರಣ ಬಳಸಿದರೂ ನಮ್ಮಲ್ಲಿ ಇಳುವರಿ ಕಡಿಮೆಯಾಗುತ್ತಿರುವ ಬಗ್ಗೆ ಸಂಶೋಧನೆ ಅಗತ್ಯ. ಅವೈಜ್ಞಾನಿಕ ಬೆಳೆವಿಮೆ ಪದ್ಧತಿ, ರೈತರ ಆತ್ಮಹತ್ಯೆ ಕಾರಣಗಳ ಬಗ್ಗೆಯೂ ವಿಶ್ವವಿದ್ಯಾಲಯ ಅಧ್ಯಯನ ಮಾಡಿ ವರದಿ ನೀಡಬೇಕು ಎಂದರು.
ಶಾಸಕ ಹಾಗೂ ಕರ್ನಾಟಕ ಕೊಳಚೆ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಪ್ರಸಾದ ಅಬ್ಬಯ್ಯ, ಶಾಸಕ ಎನ್.ಎಚ್. ಕೋನರೆಡ್ಡಿ, ಮೈಸೂರು ಮಿನರಲ್ಸ್ ನಿಗಮದ ಅಧ್ಯಕ್ಷ ಹಾಗೂ ಶಾಸಕ ಜಿ.ಎಸ್. ಪಾಟೀಲ, ಕುಲಪತಿ ಡಾ. ಪಿ.ಎಲ್. ಪಾಟೀಲ, ಜಿಲ್ಲಾಽಕಾರಿ ದಿವ್ಯ ಪ್ರಭು, ಕುಲಸಚಿವೆ ಜಯಲಕ್ಷಿ÷್ಮÃ ರಾಯಕೋಡ, ಡಾ. ಎಸ್.ಎಸ್. ಅಂಗಡಿ, ಡಾ. ಬಿ.ಡಿ. ಬಿರಾದಾರ ಹಾಗೂ ವಿಶ್ವವಿದ್ಯಾಲಯದ ಆಡಳಿತ ಮಂಡಳಿ ಸದಸ್ಯರಿದ್ದರು.
- ಶಿಷ್ಟಾಚಾರ ಪಾಲಿಸಲು ಶಾಸಕ ಅಬ್ಬಯ್ಯ ಸೂಚನೆ: ಕೃಷಿ ಮೇಳ ಕಾರ್ಯಕ್ರಮದ ಆಹ್ವಾನ ಪತ್ರಿಕೆ ಮತ್ತು ಗಣ್ಯರನ್ನು ಆಹ್ವಾನಿಸುವಲ್ಲಿ ವಿಶ್ವವಿದ್ಯಾಲಯ ಶಿಷ್ಟಾಚಾರ ಪಾಲಿಸದಿರುವುದನ್ನು ಶಾಸಕ ಪ್ರಸಾದ ಅಬ್ಬಯ್ಯ ಪ್ರಸ್ತಾಪಿಸಿದರು. ಇನ್ನು ಮುಂದೆ ಇಂಥ ಎಡವಟ್ಟುಗಳು ಆಗಬಾರದು. ಜಿಲ್ಲಾಽಕಾರಿಯನ್ನು ಸಂಪರ್ಕಿಸಿ ಶಿಷ್ಟಾಚಾರ ಪಾಲಿಸಬೇಕು ಎಂದು ಕುಲಪತಿ ಪಿ.ಎಲ್. ಪಾಟೀಲ ಅವರಿಗೆ ಸೂಚಿಸಿದರು.