ಹಳೆಯಂಗಡಿ: ಮಾತೃ ಸಮಾನವಾದ ಮಣ್ಣಿನ ಸತ್ವದ ಕೃಷಿ ಬದುಕಿನ ಪರಂಪರೆಯನ್ನು ಮಕ್ಕಳಿಗೆ ತಿಳಿಸುವ ಕಾರ್ಯ ನಡೆಯದಿದ್ದರೆ ಕಾಣದ ಕಡಲಿನ ಬಗ್ಗೆ ಬೆನ್ನು ಹತ್ತಿ ತನ್ನತನ ಸಂಸ್ಕೃತಿ ಸಂಸ್ಕಾರ ಮರೆತು ಸಮಾಜಘಾತಕರಾಗಿ ಬದುಕುವ ಭೀತಿ ಇದೆ ಎಂದು ಮಂಗಳೂರು ಉತ್ತರ ವಿಭಾಗದ ಸಹಾಯಕ ಪೊಲೀಸ್ ಆಯುಕ್ತ ಮಹೇಶ್ ಕುಮಾರ್ ಹೇಳಿದರು.
ಪಾವಂಜೆ ನೀನಾದ ರಂಗಮಂದಿರದಲ್ಲಿ ಶುಕ್ರವಾರ ಮಂಗಳೂರು ವಿಶ್ವವಿದ್ಯಾಲಯ ಬ್ರಹ್ಮಶ್ರೀ ನಾರಾಯಣಗುರು ಅಧ್ಯಯನ ಪೀಠ ಸಂಯೋಜನೆಯಲ್ಲಿ ಸುರತ್ಕಲ್ ಗೋವಿಂದ ದಾಸ ಕಾಲೇಜು ರಾಷ್ಟ್ರೀಯ ಸೇವಾ ಯೋಜನಾ ಘಟಕ, ಜೂನಿಯರ್ ರೆಡ್‌ಕ್ರಾಸ್ ಘಟಕ, ರೋವರ್ಸ್ ಆ್ಯಂಡ್ ರೇಂಜರ್ಸ್ ಘಟಕ, ಗೋವಿಂದ ದಾಸ ಪದವಿ ಪೂರ್ವ ಕಾಲೇಜು ಸಹಯೋಗದಲ್ಲಿ ನೇಗಿಲ ಯೋಗಿ ಯುವಕರಿಗೆ ಕೃಷಿ ಖುಷಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಧಾರ್ಮಿಕ ಪರಿಷತ್ ಸದಸ್ಯ ಭುವನಾಭಿರಾಮ ಉಡುಪ ಮಾತನಾಡಿ, ಸೇವೆ ಹಾಗೂ ತ್ಯಾಗಮಯ ಬದುಕಾದ ಕೃಷಿ ಸಂಸ್ಕೃತಿಯನ್ನು ಮಕ್ಕಳಿಗೆ ಕಲಿಸಿಕೊಟ್ಟಲ್ಲಿ, ಪ್ರಾದೇಶಿಕ ಸಂಸ್ಕೃತಿ ಭಾಷೆಯ ಅಭಿವೃದ್ಧಿ ಸಾಧ್ಯವಿದ್ದು, ಈ ಬಗ್ಗೆ ಅಧ್ಯಯನ ಪೀಠದ ಕಾರ್ಯ ಶ್ಲಾಘನೀಯ ಎಂದರು.
ಮೂಲ್ಕಿ ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ಡಾ.ವಾಸುದೇವ ಬೆಳ್ಳೆ ಕನಕ ತತ್ವ ಹಾಗೂ ಗುರು ಸತ್ವದ ಬಗ್ಗೆ ಉಪನ್ಯಾಸ ನೀಡಿ, ಕೃಷಿ ಬದುಕಿನ ವಿಚಾರಧಾರೆಗಳನ್ನು ತಮ್ಮ ಕೀರ್ತನೆಯ ರೂಪದಲ್ಲಿ ಸಮಾಜಕ್ಕೆ ಅರಿವಾಗುವ ರೀತಿಯಲ್ಲಿ ಪ್ರಸ್ತುತಪಡಿಸಿದ ಕನಕದಾಸರ ವೈಚಾರಿಕತೆಯಂತೆ ಕೇರಳದಲ್ಲಿ ನಾರಾಯಣ ಗುರುಗಳು ಸಮಾಜದಲ್ಲಿ ಸಾಮ್ಯತೆ, ಸಂಘಟನೆ ಹಾಗೂ ಶಿಕ್ಷಣ, ಪರಿಸರ ಪ್ರೇಮದ ಬಗ್ಗೆ ಮಾಡಿದ ಸಾಧನೆಗಳು ಗುರುಗಳ ಮತ್ತು ಕನಕದಾಸರ ಕಾರ್ಯದಲ್ಲಿ ಬಹಳ ಸಾಮ್ಯತೆ ಇದೆ ಎಂದರು.
ಸಾಮಾಜಿಕ ಹಾಗೂ ಧಾರ್ಮಿಕ ಮುಂದಾಳು ಕಡಂಬೋಡಿ ಮಹಾಬಲ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ಸುರತ್ಕಲ್ ಗೋವಿಂದದಾಸ್ ಕಾಲೇಜು ಪ್ರಾಂಶುಪಾಲ ಪ್ರೊ.ಕೃಷ್ಣಮೂರ್ತಿ, ಕಾಟಿಪಳ್ಳ ಶ್ರೀ ನಾರಾಯಣಗುರು ಸಂಸ್ಥೆಗಳ ಅಧ್ಯಕ್ಷ ಪಿ.ದಯಾಕರ್ , ಸದಸ್ಯ ಭೋಜ ಅಂಚನ್ ಮಧ್ಯ, ಯೋಗ ತಜ್ಞ ಯಾದವ ದೇವಾಡಿಗ ಹಳೆಯಂಗಡಿ, ಶ್ರೀ ನಾರಾಯಣಗುರು ಪದವಿ ಪೂರ್ವ ಕಾಲೇಜು ಉಪಪ್ರಾಂಶುಪಾಲ ಪ್ರೊ.ಧರ್ಮಪಾಲ, ಉದ್ಯಮಿ ರಾಜಾರಾಮ ಸಾಲ್ಯಾನ್, ಪ್ರಗತಿಪರ ಕೃಷಿಕ ಬಾಲಚಂದ್ರ ಸನಿಲ್ ಮೂಲ್ಕಿ, ಸಂಯೋಜಕ ಡಾ.ಗಣೇಶ್ ಅಮೀನ್ ಸಂಕಮಾರ್, ಎನ್.ಎಸ್.ಎಸ್ ಸಂಯೋಜಕಿ ಅಕ್ಷತಾ, ರೋವರ್ಸ್ ಮತ್ತು ರೇಂಜರ್ಸ್ ಸಂಯೋಜಕಿ ಶೈಲಜಾ, ರೆಡ್‌ಕ್ರಾಸ್ ಸಂಯೋಜಕಿ ಜಯಂತಿ ಉಪಸ್ಥಿತರಿದ್ದರು. ಡಾ.ಗಣೇಶ್ ಅಮೀನ್ ಸಂಕಮಾರ್ ಸ್ವಾಗತಿಸಿದರು. ಅನು ಸಂಕಮಾರ್ ನಿರೂಪಿಸಿದರು. ಜಯಂತಿ ಸಂಕಮಾರ್ ವಂದಿಸಿದರು.
ವಿಶೇಷ ರೀತಿಯಲ್ಲಿ ಉದ್ಘಾಟನೆ: ಕೋಣ ಉಪಯೋಗಿಸಿ ನೇಗಿಲಿನಿಂದ ಉಳುವುದು, ಪವರ್ ಟಿಲ್ಲರ್ ಉಳುಮೆ ಪ್ರಾತ್ಯಕ್ಷಿಕೆ ನಡೆಯಿತು. ವೇದಿಕೆಯಲ್ಲಿ ದೀಪ ಬೆಳಗಿಸಿ, ಪಡಿ ಮಂಚದ ಮೇಲೆ ತೆನೆ ಪೈರು ಹೊಡೆದು ಬತ್ತ ತೆಗೆದು ಪೊಲಿ ಹಾಕುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಶೈಲಜಾ ಕೃಷಿ ಹಾಡುಗಳನ್ನು ಹಾಡಿದರು, ಡಾ.ಗಣೇಶ್ ಅಮೀನ್ ಸಂಕಮಾರ್ ಪೊಲಿ ಕೂಗಿದರು. ನಂದಿನಿ ನದಿ ಮುಖಜ ಗದ್ದೆಯಲ್ಲಿ ಕೃಷಿ ಅಧ್ಯಯನದ ಬಳಿಕ ರಸಪ್ರಶ್ನೆ ಸ್ಪರ್ಧೆ ಆಯೋಜಿಸಲಾಯಿತು.