ಮಂಗಳೂರು: ಕ್ರೀಡೆ ಮನಸ್ಸಿಗೆ ಆನಂದ ನೀಡುತ್ತದೆ. ಆನಂದದಲ್ಲಿ ಇದ್ದಾಗ ವ್ಯಕ್ತಿ ಪರಿಪೂರ್ಣತ್ವದೆಡೆಗೆ ಸಾಗಲು ಸಾಧ್ಯ. ಕ್ರೀಡೆಯ ಮೂಲಕ ವಿದ್ಯಾರ್ಥಿಗಳಲ್ಲಿ ಚಾರಿತ್ರೃ ನಿರ್ಮಾಣ ಮಾಡಿ, ಆ ಮೂಲಕ ರಾಷ್ಟ್ರ ನಿರ್ಮಾಣದ ಕಾರ್ಯ ನಡೆಸುವುದು ಕ್ರೀಡಾಭಾರತಿಯ ಉದ್ದೇಶ ಎಂದು ವಾಗ್ಮಿ ಪ್ರಕಾಶ್ ಮಲ್ಪೆ ಹೇಳಿದರು.
ಕ್ರೀಡಾ ಭಾರತಿ ಮಂಗಳೂರು ವತಿಯಿಂದ ನಗರದ ಕರಾವಳಿ ಉತ್ಸವ ಮೈದಾನದಲ್ಲಿ ಭಾನುವಾರ ನಡೆದ ಜಿಲ್ಲಾ ಕ್ರೀಡಾ ಸಮ್ಮೇಳನ ಹಾಗೂ ವಿವಿಧ ಪಂದ್ಯಾಟಗಳ ಉದ್ಘಾಟನಾ ಸಮಾರಂಭದಲ್ಲಿ ದಿಕ್ಸೂಚಿ ಭಾಷಣ ಮಾಡಿದರು.
ಕ್ರೀಡೆಗೆ ಮಹತ್ವ: ಕ್ರೀಡೆಯಲ್ಲಿ ಸ್ಪರ್ಧಾ ಮನೋಭಾವ ಇರಬೇಕು. ಆದರೆ, ಅದು ಯುದ್ಧವಲ್ಲ. ಸೋಲು-ಗೆಲುವನ್ನು ಸಮಾನವಾಗಿ ಸ್ವೀಕರಿಸಬೇಕು. ಈ ಮನೋಭಾವ ಜೀವನದ ಕಷ್ಟ ಸುಖಗಳನ್ನು ಎದುರಿಸಲು ಸಹಾಯ ಮಾಡುತ್ತದೆ. ಕ್ರೀಡಾಪಟುಗಳಿಗೆ ಪ್ರೋತ್ಸಾಹ ನೀಡುವ ಮೂಲಕ ಕ್ರೀಡಾಭಾರತಿ ದೇಶದ ಕ್ರೀಡಾಕ್ಷೇತ್ರಕ್ಕೆ ಕೊಡುಗೆ ನೀಡುತ್ತಿದೆ ಎಂದರು.
ರಾಷ್ಟ್ರೀಯ ಸ್ವಯಂ ಸೇವಕ ಸಂಘ ಕರ್ನಾಟಕ ದಕ್ಷಿಣ ಪ್ರಾಂತ ಸಂಘಚಾಲಕ ಡಾ.ಪಿ.ವಾಮನ ಶೆಣೈ ಮಾತನಾಡಿ, ಕ್ರೀಡಾಭಾರತಿ ವಿದ್ಯಾರ್ಥಿಗಳಲ್ಲಿ ಭಾರತೀಯ ಸಂಸ್ಕೃತಿ ಬೆಳೆಸುವ ಕಾರ್ಯ ಮಾಡುತ್ತಿದೆ. ಪ್ರಸ್ತುತ ಕ್ರೀಡಾ ಕ್ಷೇತ್ರಕ್ಕೆ ಆದ್ಯತೆ ನೀಡಲಾಗುತ್ತಿದ್ದು, ಕ್ರೀಡಾಪಟುಗಳು ಈ ಅವಕಾಶ ಉಪಯೋಗಿಸಿಕೊಳ್ಳಬೇಕು ಎಂದರು.
ವಿಧಾನ ಪರಿಷತ್ ಮಾಜಿ ಸದಸ್ಯ ಕ್ಯಾ.ಗಣೇಶ್ ಕಾರ್ಣಿಕ್ ಕಾರ್ಯಕ್ರಮ ಉದ್ಘಾಟಿಸಿದರು. ಶಾಸಕ ವೇದವ್ಯಾಸ ಕಾಮತ್ ಅಧ್ಯಕ್ಷತೆ ವಹಿಸಿದ್ದರು. ಆರೆಸ್ಸೆಸ್ ಮಂಗಳೂರು ಮಹಾನಗರ ಸಂಘಚಾಲಕ ಡಾ.ಸತೀಶ್ ರಾವ್, ಮೇಯರ್ ಪ್ರೇಮಾನಂದ ಶೆಟ್ಟಿ, ಸಂಸ್ಕಾರ ಭಾರತಿ ರಾಜ್ಯ ಉಪಾಧ್ಯಕ್ಷ ಚಂದ್ರಶೇಖರ ಶೆಟ್ಟಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಉಪನಿರ್ದೇಶಕ ಪ್ರದೀಪ್ ಡಿಸೋಜ, ಮಂಗಳಾ ಬ್ಯಾಡ್ಮಿಂಟನ್ ಅಸೋಸಿಯೇಶನ್ ಅಧ್ಯಕ್ಷ ಅಶೋಕ್ ಹೆಗ್ಡೆ ಅತಿಥಿಗಳಾಗಿದ್ದರು.
ಕ್ರೀಡಾಭಾರತಿ ರಾಜ್ಯ ಉಪಾಧ್ಯಕ್ಷ, ಮಾಜಿ ಸಚಿವ ಬಿ.ನಾಗರಾಜ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ರಾಜ್ಯ ಕಾರ್ಯಕಾರಿಣಿ ಸದಸ್ಯ ಭೋಜರಾಜ ಕಲ್ಲಡ್ಕ, ಮಂಗಳೂರು ಘಟಕ ಅಧ್ಯಕ್ಷ ಕಾರಿಯಪ್ಪ ರೈ ಕೆ., ಪ್ರಧಾನ ಕಾರ್ಯದರ್ಶಿ ಕೃಷ್ಣ ಶೆಟ್ಟಿ ತಾರೆಮಾರ್, ಜತೆ ಕಾರ್ಯದರ್ಶಿ ಹರೀಶ್ ರೈ ಬಿ., ಡಾ.ಕರುಣಾಕರ ಶೆಟ್ಟಿ, ಮಹಿಳಾ ಪ್ರಮುಖ್ ಹೇಮಪ್ರಭಾ ಲಾಲ ಉಪಸ್ಥಿತರಿದ್ದರು. ಬೆಳ್ತಂಗಡಿ ಘಟಕದ ಅಜಿತ್ ಜೈನ್ ಕಾರ್ಯಕ್ರಮ ನಿರೂಪಿಸಿದರು. ಇದಕ್ಕೂ ಮುನ್ನ ಪಿವಿಎಸ್ ವೃತ್ತದಿಂದ ಕರಾವಳಿ ಮೈದಾನದವರೆಗೆ ಜಿಲ್ಲಾ ಸಮ್ಮೇಳನದ ಶೋಭಾಯಾತ್ರೆ ನಡೆಯಿತು. ಬಳಿಕ ವಿವಿಧ ಪಂದ್ಯಾಟ ನೆರವೇರಿತು.