ಹುಬ್ಬಳ್ಳಿ : ಹಿಂದು ಧರ್ಮದ ರಕ್ಷಣೆ, ಸಂಘಟನೆ, ಮಠಮಾನ್ಯಗಳ ಹಿತ ಕಾಯುವ ಉದ್ದೇಶದಿಂದ ಸ್ಥಾಪನೆಯಾಗಿರುವ ಕ್ರಾಂತಿವೀರ ಬ್ರಿಗೇಡ್ಗೆ 2025ರ ಫೆ. 4ರಂದು ಬಸವನ ಬಾಗೇವಾಡಿಯಲ್ಲಿ ಚಾಲನೆ ದೊರೆಯಲಿದೆ.
ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಬ್ರಿಗೇಡ್ ಅಧ್ಯಕ್ಷ ಮಣಕಾಪುರದ ಶ್ರೀ ಸೋಮೇಶ್ವರ ಸ್ವಾಮೀಜಿ, 1008 ಮಠಾಧೀಶರ ಪಾದಪೂಜೆ ಮಾಡುವ ಮೂಲಕ ಈ ಸಂಘಟನೆ ಲೋಕಾರ್ಪಣೆಗೊಳ್ಳಲಿದೆ ಎಂದರು.
ನಾಡಿನ ವಿವಿಧ ಸಮಾಜದ 100 ಜನ ಮಠಾಧೀಶರು ಕ್ರಾಂತಿವೀರ ಬ್ರಿಗೇಡ್ನ ಸದಸ್ಯರಿದ್ದು, 25 ಮಠಾಧೀಶರು ಪದಾಧಿಕಾರಿಗಳಿದ್ದಾರೆ. ಈ ಸಂಘಟನೆ ರಾಜಕೀಯ ಉದ್ದೇಶಕ್ಕೆ ಸ್ಥಾಪನೆಗೊಂಡಿಲ್ಲ. ಹಿಂದುತ್ವದ ಅಸ್ತಿತ್ವಕ್ಕೆ ಧಕ್ಕೆ ಬಂದಾಗಲೆಲ್ಲ ಕ್ರಾಂತಿವೀರ ಬ್ರಿಗೇಡ್ ಹೋರಾಟ ನಡೆಸಲಿದೆ ಎಂದು ಹೇಳಿದರು.
ನಾಡಿನ ರೈತರ ಜಮೀನು, ಮಠ, ಮಂದಿರಗಳ ಆಸ್ತಿಗಳ ಮೇಲೆ ವಕ್ಪ್ ಬೋರ್ಡ್ ಕಣ್ಣು ಹಾಕಿದ ಸಮಯದಲ್ಲಿ ಕಲಬುರಗಿ ಜಿಲ್ಲಾಧಿಕಾರಿಯವರಿಗೆ ಮನವಿ ಸಲ್ಲಿಸಲಾಗಿತ್ತು. ಹಿಂದುಗಳ ಆಸ್ತಿ ಮೇಲಿನ ವಕ್ಪ್ ಹೆಸರು ತೆಗೆಯದಿದ್ದರೆ ಹೋರಾಟ ನಡೆಸುವ ಎಚ್ಚರಿಕೆ ನೀಡಲಾಗಿತ್ತು. ಮನವಿಗೆ ಸ್ಪಂದಿಸಿದ್ದ ಕಲಬುರಗಿ ಜಿಲ್ಲಾಧಿಕಾರಿ, ಆ ಜಿಲ್ಲೆಯಲ್ಲಿನ ಹಿಂದುಗಳ ಆಸ್ತಿ ಮೇಲಿನ ವಕ್ಪ್ ಹೆಸರು ವಜಾಗೊಳಿಸಿದ್ದರು ಎಂದು ತಿಳಿಸಿದರು.
ಬೆಳಗಾವಿ, ಧಾರವಾಡ, ಬಾಗಲಕೋಟೆ ಜಿಲ್ಲೆಗಳಲ್ಲಿಯೂ ವಕ್ಪ್ನಿಂದ ಆಗಿರುವ ಅನ್ಯಾಯ ಸರಿಪಡಿಸುವ ಕೆಲಸ ಮಾಡಲಾಗುವುದು. ನಮ್ಮ ಕಾರ್ಯಕ್ಕೆ ಕೆ.ಎಸ್. ಈಶ್ವರಪ್ಪ ಅವರು ಬೆನ್ನೆಲುಬಾಗಿ ನಿಂತಿದ್ದಾರೆ ಎಂದರು.
ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ ಮಾತನಾಡಿ, ಯಾವುದೇ ಸಮಾಜದ ಮೀಸಲಾತಿಗಾಗಿ ಕ್ರಾಂತಿವೀರ ಬ್ರಿಗೇಡ್ ಹೋರಾಟ ನಡೆಸುವುದಿಲ್ಲ. ಎಲ್ಲ ಸಮಾಜಗಳಿಗೆ ಹೋರಾಟ ನಡೆಸುವ ಹಕ್ಕು ಇದೆ ಎಂದು ಸ್ಪಷ್ಟಪಡಿಸಿದರು.
ಜಮಖಂಡಿ ಜಕನೂರು ಮಠದ ಶ್ರೀ ಮಾಧುಲಿಂಗ ಸ್ವಾಮೀಜಿ, ಗದಗನ ಶ್ರೀ ಶಿವಕುಮಾರ ಸ್ವಾಮೀಜಿ ಹಾಗೂ ಇತರರು ಇದ್ದರು.