ಅವಿನಾಶ್ ಜೈನಹಳ್ಳಿ ಮೈಸೂರು
ಜಿದ್ದಾಜಿದ್ದಿಯ ರಾಜಕಾರಣಕ್ಕೆ ಹೆಸರುವಾಸಿಯಾಗಿರುವ ‘ಭತ್ತದ ಕಣಜ’ ಕೆ.ಆರ್.ನಗರದಲ್ಲಿ ವರ್ಷಕ್ಕೆ ಮುನ್ನವೇ ವಿಧಾನಸಭಾ ಚುನಾವಣೆಯ ಕಾವು ಏರತೊಡಗಿದ್ದು, ಕಾಂಗ್ರೆಸ್ ಯಾರಿಗೆ ಟಿಕೆಟ್ ನೀಡಲಿದೆ ಎಂಬುದು ಕುತೂಹಲ ಮೂಡಿಸಿದೆ. ಈ ಮಧ್ಯೆ ಕೆಲವು ಆಕಾಂಕ್ಷಿಗಳು ಈಗಾಗಲೇ ಕ್ಷೇತ್ರದಲ್ಲಿ ಮತಬೇಟೆ ಆರಂಭಿಸಿದ್ದಾರೆ.
2023ರ ಚುನಾವಣೆಗೆ ಜೆಡಿಎಸ್‌ನಿಂದ ಶಾಸಕ ಸಾ.ರಾ.ಮಹೇಶ್ ಮತ್ತೊಮ್ಮೆ ಸ್ಪರ್ಧಿಸುವುದು ಖಚಿತವಾಗಿದೆ. ಆದರೆ ಕಾಂಗ್ರೆಸ್‌ನಿಂದ ಅನೇಕ ಟಿಕೆಟ್ ಆಕಾಂಕ್ಷಿಗಳಿದ್ದರೂ ತಾಲೂಕಿನ ಪ್ರಭಾವಿ ಮುಖಂಡ ದೊಡ್ಡಸ್ವಾಮಿಗೌಡರ ಮಗ, ಜಿಲ್ಲಾ ಪಂಚಾಯಿತಿ ವಿರೋಧ ಪಕ್ಷದ ಮಾಜಿ ನಾಯಕ ಡಿ.ರವಿಶಂಕರ್ ಮುನ್ನೆಲೆಯಲ್ಲಿದ್ದಾರೆ. ಈ ಬಾರಿಯೂ ಕಾಂಗ್ರೆಸ್ ಟಿಕೆಟ್ ಪಡೆದು ಚುನಾವಣೆಗೆ ಸ್ಪರ್ಧಿಸಿ ಹೇಗಾದರೂ ಮಾಡಿ ವಿಧಾನಸಭೆಗೆ ಪ್ರವೇಶಿಸಬೇಕು ಎಂಬ ಪಣ ತೊಟ್ಟಿದ್ದಾರೆ. ಅಲ್ಲದೆ, ಈ ನಿಟ್ಟಿನಲ್ಲಿ ನಿರಂತರವಾಗಿ ಕ್ಷೇತ್ರದಲ್ಲಿ ಪಕ್ಷ ಕಟ್ಟುತ್ತಿದ್ದು, ಕಾರ್ಯಕರ್ತರ ಜತೆ ಸಂಪರ್ಕದಲ್ಲಿದ್ದಾರೆ. ಈ ನಡುವೆ, ಇತ್ತೀಚಿನ ಬೆಳವಣಿಗೆಗಳನ್ನು ಗಮನಿಸಿದರೆ ಡಿ.ರವಿಶಂಕರ್ ಅವರ ಆಸೆಗೆ ಶಾಸಕ ಜಿ.ಟಿ.ದೇವೇಗೌಡರ ಪುತ್ರ ಜಿ.ಡಿ.ಹರೀಶ್‌ಗೌಡ ತಣ್ಣೀರು ಎರಚುವರೇ ಎಂಬ ಅನುಮಾನ ಕ್ಷೇತ್ರದಲ್ಲಿದೆ.
2018ರಲ್ಲೂ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದ ಮಾಜಿ ಶಾಸಕ ದಿ.ಮಂಚನಹಳ್ಳಿ ಮಹದೇವ್ ಅವರ ಪುತ್ರಿ ಐಶ್ವರ್ಯ ಮಹದೇವ್ ಈ ಬಾರಿಯಾದರೂ ಟಿಕೆಟ್ ಪಡೆದುಕೊಳ್ಳುವ ಕಸರತ್ತು ನಡೆಸುತ್ತಿದ್ದಾರೆ. ಇನ್ನು ಬಿಜೆಪಿಯಿಂದ ಹೊಸಹಳ್ಳಿ ವೆಂಕಟೇಶ್, ಮುಖಂಡರಾದ ಶ್ರೀನಿವಾಸ್‌ಗೌಡ, ಎಚ್.ಪಿ.ಗೋಪಾಲ್ ಆಕಾಂಕ್ಷಿಗಳಾಗಿದ್ದಾರೆ.
ಕ್ಷೇತ್ರದಲ್ಲಿ ಬಿಜೆಪಿಗೆ ಹೇಳಿಕೊಳ್ಳುವಷ್ಟು ನೆಲೆ ಇಲ್ಲ. ಹಾಲಿ ಜೆಡಿಎಸ್ ಪಕ್ಷದ ಶಾಸಕರೇ ಇದ್ದರೂ ಜೆಡಿಎಸ್ ಮತ್ತು ಕಾಂಗ್ರೆಸ್ ಎರಡೂ ಪಕ್ಷಗಳು ತಮ್ಮದೇ ಪ್ರಾಬಲ್ಯ ಹೊಂದಿವೆ. ಈ ಕ್ಷೇತ್ರದ ಇತಿಹಾಸ ಗಮನಿಸಿದರೆ ಹಿಂದಿನಿಂದಲೂ ಕಾಂಗ್ರೆಸ್ ಮತ್ತು ಜೆಡಿಎಸ್ ಅಭ್ಯರ್ಥಿಗಳ ನಡುವೆಯೇ ಸಾಕಷ್ಟು ಪೈಪೋಟಿ ನಡೆಯುತ್ತಿದ್ದು, ಅದು 2023ರ ಚುನಾವಣೆಯಲ್ಲೂ ಮುಂದುವರಿಯುವ ನಿರೀಕ್ಷೆ ಇದೆ. ಹಿಂದೆಲ್ಲ ಎಚ್.ವಿಶ್ವನಾಥ್(ಕಾಂಗ್ರೆಸ್) ಮತ್ತು ನಂಜಪ್ಪ(ಜೆಡಿಎಸ್) ನಡುವೆಯೇ ನೇರ ಹೋರಾಟ ನಡೆಯುತ್ತಿತ್ತು. ಹಾಗಾಗಿ, ಕ್ಷೇತ್ರದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಟಿಕೆಟ್‌ಗೆ ಡಿಮ್ಯಾಂಡ್ ಹೆಚ್ಚಾಗಿದೆ.
ರವಿಶಂಕರ್‌ಗೆ ಅಡ್ಡಿಯಾಗುವರೆ ಜಿಡಿಎಚ್?
ಡಿ.ರವಿಶಂಕರ್ ಅವರ ಆಸೆಗೆ ಜಿ.ಡಿ.ಹರೀಶ್‌ಗೌಡ ಅಡ್ಡಿಯಾಗಲಿದ್ದಾರೆಯೇ ಎಂಬ ಅನುಮಾನ ಇಡೀ ಕ್ಷೇತ್ರದಲ್ಲಿ ಆವರಿಸಿದೆ. ತಮ್ಮ ಪುತ್ರ ಜಿ.ಡಿ.ಹರೀಶ್‌ಗೌಡ ಅವರಿಗೆ ರಾಜಕೀಯ ಭವಿಷ್ಯ ರೂಪಿಸಲು ಶಾಸಕ ಜಿ.ಟಿ.ದೇವೇಗೌಡ 2018ರ ವಿಧಾನಸಭಾ ಚುನಾವಣೆಯಲ್ಲೇ ಸಿದ್ಧತೆ ಕೈಗೊಂಡಿದ್ದರು. ಹರೀಶ್‌ಗೌಡರ ಸ್ಪರ್ಧೆಗಾಗಿ ಹುಣಸೂರು ಕ್ಷೇತ್ರದಲ್ಲಿ ಸಿದ್ಧತೆ ನಡೆಸಿದ್ದರು. ಆದರೆ, ಜೆಡಿಎಸ್‌ನಲ್ಲಿ ಅಂದು ನಡೆದ ರಾಜಕೀಯ ಬದಲಾವಣೆಯಿಂದಾಗಿ ಮಗನ ರಾಜಕೀಯ ಪ್ರವೇಶವನ್ನು ದೂರವಿಟ್ಟಿದ್ದರು. ಈಗ ಶತಾಯಗತಾಯ 2023ರ ಚುನಾವಣೆಯಲ್ಲಾದರೂ ಮಗನನ್ನು ಶಾಸಕನಾಗಿ ಮಾಡಲು ಮುಂದಾಗಿರುವ ಜಿಟಿಡಿ, ಅದಕ್ಕಾಗಿ ಜೆಡಿಎಸ್‌ನೊಂದಿಗೆ ಅಂತರ ಕಾಯ್ದುಕೊಂಡಿದ್ದಾರೆ. ಜತೆಗೆ, ಕಾಂಗ್ರೆಸ್ ಸೇರಿದಂತೆ ಯಾವುದೇ ಪಕ್ಷ ಇಬ್ಬರಿಗೂ ಟಿಕೆಟ್ ಘೋಷಿಸಿದರೆ ಆ ಪಕ್ಷ ಸೇರುವ ಬಗ್ಗೆ ತಿಳಿಸಿದ್ದಾರೆ.
ಈಗಾಗಲೇ ಕಾಂಗ್ರೆಸ್ ನಾಯಕರ ಜತೆ ಮಾತುಕತೆ ನಡೆಸಿರುವ ಜಿ.ಟಿ.ದೇವೇಗೌಡ, ನನಗೆ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಟಿಕೆಟ್ ನೀಡುವ ಜತೆಗೆ ಪುತ್ರನಿಗೆ ಹುಣಸೂರು, ಕೆ.ಆರ್.ನಗರ ಅಥವಾ ಚಾಮರಾಜ ಈ ಪೈಕಿ ಯಾವುದಾದರೂ ಒಂದು ಕ್ಷೇತ್ರಕ್ಕೆ ಟಿಕೆಟ್ ನೀಡುವಂತೆ ಮನವಿ ಮಾಡಿದ್ದಾರೆ. ಈ ಬಗ್ಗೆ ಕಾಂಗ್ರೆಸ್ ನಾಯಕರು ಒಪ್ಪಿಗೆ ಸೂಚಿಸಿದ್ದಾರೆ ಎಂದು ಹೇಳಲಾಗುತ್ತಿದೆ.
ಹರೀಶ್‌ಗೌಡ ಹುಣಸೂರು ಕ್ಷೇತ್ರದಿಂದ ಸ್ಪರ್ಧಿಸುವ ಕನಸು ಕಾಣುತ್ತಿದ್ದರು. ಆದರೆ, ಸದ್ಯದ ರಾಜಕೀಯ ಬೆಳವಣಿಗೆಯಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹುಣಸೂರಿನಿಂದ ಸ್ಪರ್ಧಿಸುವ ಸಾಧ್ಯತೆಗಳಿವೆ. ಒಂದು ವೇಳೆ ಸಿದ್ದರಾಮಯ್ಯ ಹುಣಸೂರಿನಿಂದ ಸ್ಪರ್ಧಿಸಿದರೆ ಕೆ.ಆರ್.ನಗರದ ಕಾಂಗ್ರೆಸ್ ಟಿಕೆಟ್ ಜಿ.ಡಿ.ಹರೀಶ್‌ಗೌಡರ ಪಾಲಾಗಲಿದೆ. ಜಿ.ಟಿ.ದೇವೇಗೌಡರು ಹುಣಸೂರು ಕ್ಷೇತ್ರದಲ್ಲಿ ತಮ್ಮದೇ ಹಿಡಿತ ಹೊಂದಿರುವುದರಿಂದ ಹುಣಸೂರಿನಲ್ಲಿ ಸಿದ್ದರಾಮಯ್ಯ ಅವರ ಗೆಲುವು ಸುಲಭವಾಗಲಿದೆ. ಇದರ ಪ್ರತಿಫಲವಾಗಿ ಜಿ.ಡಿ.ಹರೀಶ್‌ಗೌಡರಿಗೆ ಕೆ.ಆರ್.ನಗರದ ಕಾಂಗ್ರೆಸ್ ಟಿಕೆಟ್ ಸಿಗಬಹುದು ಎಂಬ ಮಾತು ಕ್ಷೇತ್ರದಲ್ಲಿದೆ. ಅದರಂತೆ, ಹರೀಶ್‌ಗೌಡ ಕೆ.ಆರ್.ನಗರದಲ್ಲೂ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಕೆ.ಆರ್.ನಗರ ಸೇರಿದಂತೆ ಮೂರು ಕ್ಷೇತ್ರಗಳಲ್ಲಿ ಬಿರುಸಿನ ಓಡಾಟ, ಕಾರ್ಯಕರ್ತರ ಸಭೆ ನಡೆಸುತ್ತಾ ಸಂಘಟನೆಯಲ್ಲಿ ನಿರತರಾಗಿದ್ದಾರೆ.
ಕಾರ್ಯಕರ್ತರ ಜತೆ ಒಳ್ಳೆಯ ಸಂಬಂಧ:
ಡಿ.ರವಿಶಂಕರ್ ಕ್ಷೇತ್ರದಲ್ಲಿ ತಮ್ಮದೇ ಆದ ಶಕ್ತಿ ಹೊಂದಿದ್ದಾರೆ. ಕಾರ್ಯಕರ್ತರ ಜತೆ ಉತ್ತಮ ಒಡನಾಟ ಇಟ್ಟುಕೊಂಡಿದ್ದಾರೆ. ಈಗಾಗಲೇ ಮತ ಬೇಟೆ ಆರಂಭಿಸಿರುವ ಅವರು, ಪ್ರತಿದಿನ ಕ್ಷೇತ್ರ ಪ್ರದಕ್ಷಿಣೆ ಮಾಡುತ್ತಿದ್ದಾರೆ. ಕ್ಷೇತ್ರದ ಪ್ರತಿಯೊಂದು ಸಾವು-ನೋವುಗಳಲ್ಲಿಯೂ ಭಾಗಿಯಾಗುತ್ತಿದ್ದಾರೆ.
2013ರ ಚುನಾವಣೆಯಲ್ಲಿ ಡಿ.ರವಿಶಂಕರ್ ತಂದೆ ದೊಡ್ಡಸ್ವಾಮಿಗೌಡ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಸೋಲು ಕಂಡಿದ್ದರು. 2018ರ ಚುನಾವಣೆಯಲ್ಲಿ ಡಿ.ರವಿಶಂಕರ್ ಕಾಂಗ್ರೆಸ್ ಅಭ್ಯರ್ಥಿಯಾಗಿ ಸಾ.ರಾ.ಮಹೇಶ್‌ಗೆ ಉತ್ತಮ ಪೈಪೋಟಿ ನೀಡಿದ್ದರು. ಆಗ ಶಾಸಕ ಸಾ.ರಾ.ಮಹೇಶ್ 1,779 ಮತಗಳ ಅಂತರದಿಂದ ಪ್ರಯಾಸದ ಜಯ ಗಳಿದ್ದರು. 4ನೇ ಬಾರಿ ಚುನಾವಣೆಗೆ ಸ್ಪರ್ಧಿಸಿದ್ದ ಅವರು, ಒಟ್ಟು 85,011 ಮತ ಪಡೆದರೆ, ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಡಿ.ರವಿಶಂಕರ್ 83,232 ಮತ ಪಡೆದಿದ್ದರು. ಈ ಬಾರಿ ಶತಾಯ ಗತಾಯ ಕ್ಷೇತ್ರದಿಂದ ಶಾಸಕರಾಗಲು ಡಿ.ರವಿಶಂಕರ್ ಮುಂದಾಗಿದ್ದಾರೆ.
2023ನೇ ಸಾಲಿನ ಚುನಾವಣೆಗೂ ಕಾಂಗ್ರೆಸ್‌ನಿಂದ ನನಗೆ ಟಿಕೆಟ್ ಸಿಗುವ ವಿಶ್ವಾಸವಿದೆ. ಈ ಬಗ್ಗೆ ನಮ್ಮ ನಾಯಕರು ನನಗೆ ಆಶ್ವಾಸನೆ ನೀಡಿದ್ದಾರೆ. 2018ರ ಚುನಾವಣೆಯಲ್ಲಿ ಸ್ವಲ್ಪ ಅಂತರದಲ್ಲಿ ಸೋತಿದ್ದೇನೆ. ಈ ಬಾರಿ ಕ್ಷೇತ್ರದ ಎಲ್ಲ ಮತದಾರರು ನನ್ನ ಪರ ಇದ್ದಾರೆ. ಸೋತರೂ ಕ್ಷೇತ್ರ ಬಿಡದೆ ನಿರಂತರವಾಗಿ ಕ್ಷೇತ್ರದ ಎಲ್ಲ ಮತದಾರರ ಕಷ್ಟ ಸುಖಗಳಲ್ಲಿ ಭಾಗಿಯಾಗುತ್ತಿದ್ದೇನೆ. ಪ್ರತಿದಿನ ಕಾರ್ಯಕರ್ತರ ಸಂಪರ್ಕದಲ್ಲಿದ್ದೇನೆ. ಅಧಿಕಾರದಲ್ಲಿರದಿದ್ದರೂ ಮತದಾರರ ಕಷ್ಟಗಳಿಗೆ ಸ್ಪಂದಿಸುತ್ತಿದ್ದೇನೆ. ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದಲೇ ಸ್ಪರ್ಧಿಸಿ, ಶಾಸಕನಾಗುತ್ತೇನೆ ಎಂಬ ನಂಬಿಕೆ ಇದೆ.
ಡಿ.ರವಿಶಂಕರ್, ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ, ಕೆ.ಆರ್.ನಗರ ವಿಧಾನಸಭಾ ಕ್ಷೇತ್ರ