ಜಿಲ್ಲೆ

ಕೆ.ಆರ್. ಸಾಗರ ಭದ್ರತೆ ಮತ್ತಷ್ಟು ಹೆಚ್ಚಳ

Mysuru - Desk - Ravikumar

 ಕೆ.ಆರ್.ಸಾಗರ: ರಾಜ್ಯಗಳ ಅಣೆಕಟ್ಟೆಗಳಿಗೆ ಬಿಗಿಭದ್ರತೆ ಕೈಗೊಳ್ಳುವಂತೆ ಕೇಂದ್ರ ಸರ್ಕಾರ ಆದೇಶ ನೀಡಿರುವ ಹಿನ್ನೆಲೆಯಲ್ಲಿ ಕೃಷ್ಣರಾಜಸಾಗರ ಅಣೆಕಟ್ಟೆಗೆ ಮತ್ತಷ್ಟು ಭದ್ರತೆ ಹೆಚ್ಚಿಸಲಾಗಿದೆ.

2016ರಿಂದ ಅಣೆಕಟ್ಟೆಗೆ ವಿಶೇಷವಾಗಿ ಕರ್ನಾಟಕ ಕೈಗಾರಿಕಾ ಭದ್ರತಾ ಪಡೆ ನಿಯೋಜನೆ ಮಾಡಲಾಗಿದೆ. ಮೂರು ಪಾಳಿಯಲ್ಲಿ 24 ಗಂಟೆಯೂ ಅಣೆಕಟ್ಟೆಯ ಎಲ್ಲ ದ್ವಾರಗಳಲ್ಲಿ ಶಸ್ತ್ರಸಹಿತವಾಗಿ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ಅಣೆಕಟ್ಟೆಯ ಹಿನ್ನೀರು ಹಾಗೂ ಸುತ್ತಮುತ್ತ ಸಿಬ್ಬಂದಿ ಗಸ್ತು ಮಾಡುತ್ತಿದ್ದಾರೆ.

ಒಬ್ಬ ಉಸ್ತುವಾರಿ ಇನ್‌ಸ್ಪೆಕ್ಟರ್, ಇಬ್ಬರು ಇನ್‌ಸ್ಪೆಕ್ಟರ್‌ಗಳು ಸೇರಿದಂತೆ 56 ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ಪ್ರತಿ ಪಾಳಿಯಲ್ಲೂ ಒಬ್ಬ ಇನ್‌ಸ್ಪೆಕ್ಟರ್ ಹಾಗೂ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದರು. ಕೆ.ಆರ್.ಸಾಗರ ವೃತ್ತದ ಕಬಿನಿ, ಹಾರಂಗಿ, ತಾರಕ, ನುಗು, ಹೇಮಾವತಿ ಸೇರಿದಂತೆ ಹಲವು ಜಲಾಶಯಗಳ ಅಣೆಕಟ್ಟೆಗೆ ಒಬ್ಬ ಸಹಾಯಕ ಕಮಾಡೆಂಟ್ ಅನ್ನು ನಿಯೋಜನೆ ಮಾಡಲಾಗಿದೆ. ಈಗ ಭದ್ರತೆಯನ್ನು ಇನ್ನಷ್ಟು ಹೆಚ್ಚಿಸಲಾಗಿದೆ.

ಕೆ.ಆರ್.ಸಾಗರ ಅಣೆಕಟ್ಟೆ ಸೇರಿದಂತೆ ಸುತ್ತಮುತ್ತ ಡ್ರೋನ್ ಹಾರಾಟ ನಿಷೇಧಿಸಲಾಗಿದೆ. ಬೃಂದಾವನಕ್ಕೆ ಬರುವ ಪ್ರತಿ ಪ್ರವಾಸಿಗರನ್ನು ಪ್ರವೇಶ ದ್ವಾರದಲ್ಲಿ ತಪಾಸಣೆ ಮಾಡಿ ಒಳಬಿಡಲಾಗುತ್ತಿದೆ. ಅಣೆಕಟ್ಟೆ ಸೇರಿದಂತೆ ನದಿ ಪಾತ್ರದಲ್ಲಿ ನಡೆಯುವ ಚಟುವಟಿಕೆಗಳನ್ನು ಗಮನಿಸಲು ಉತ್ತಮ ದರ್ಜೆಯ ಬೈನಾಕುಲರ್ ಬಳಸಲಾಗುತ್ತಿದೆ.

ಕೆಆರ್‌ಎಸ್ ಅಣೆಕಟ್ಟೆಗೆ ಹಲವು ವರ್ಷಗಳಿಂದ ಕರ್ನಾಟಕ ಕೈಗಾರಿಕಾ ಭದ್ರತಾ ಪಡೆಯನ್ನು ನಿಯೋಜಿಸಲಾಗಿದೆ. ಕೇಂದ್ರ ಸರ್ಕಾರದ ಸೂಚನೆಯಂತೆ ಇನ್ನಷ್ಟು ಕಟ್ಟೆಚ್ಚರ ವಹಿಸಲು ಹಾಗೂ ಅಣೆಕಟ್ಟೆಯ ಹಿನ್ನೀರು ಸಮೀಪ ಗಸ್ತು ಹೆಚ್ಚಿಸಲು ಸೂಚಿಸಲಾಗಿದೆ.

ರಘುರಾಮ್, ಅಧೀಕ್ಷಕ ಇಂಜಿನಿಯರ್, ಕಾ.ನೀ.ನಿಗಮ, ಮಂಡ್ಯ ವೃತ್ತ

ಕೆ.ಆರ್.ಸಾಗರ ಅಣೆಕಟ್ಟೆ ಸೇರಿದಂತೆ ನಮ್ಮ ವ್ಯಾಪ್ತಿಗೆ ಬರುವ ಅಣೆಕಟ್ಟೆಗಳಲ್ಲಿ ಸಿಬ್ಬಂದಿ 9 ವರ್ಷಗಳಿಂದಲೂ 3 ಪಾಳಿಯಲ್ಲಿ ಭದ್ರತಾ ಕಾರ್ಯನಿರ್ವಹಿಸುತ್ತಿದ್ದಾರೆ. ಉತ್ತಮ ಶಸ್ತ್ರಾಸ್ತ್ರಗಳು, ಬೈನಾಕುಲರ್ ಸೇರಿದಂತೆ ಹಲವು ಭದ್ರತಾ ಪರಿಕರಗಳನ್ನು ಸಿಬ್ಬಂದಿಗೆ ನೀಡಲಾಗಿದೆ. ಈಗ ಮೊದಲಿಗಿಂತ ಹೆಚ್ಚು ಗಸ್ತು ಮಾಡುತ್ತಿದ್ದು, ಅಣೆಕಟ್ಟೆ ಸುತ್ತಮುತ್ತ ಯಾವುದೇ ಅನುಮಾನಾಸ್ಪದ ವ್ಯಕ್ತಿಗಳು, ವಾಹನಗಳು ಸಂಚರಿಸಿದರೂ ಪರಿಶೀಲನೆ ಮಾಡಲಾಗುತ್ತಿದೆ.

ಪ್ರಮೋದ್ ಸಹಾಯಕ ಕಮಾಡೆಂಟ್, ಕರ್ನಾಟಕ ಕೈಗಾರಿಕಾ ಭದ್ರತಾ ಪಡೆ, ಕೆ.ಆರ್.ಸಾಗರ ವೃತ್ತ