ಮಾಗಡಿ : ಜಾಲಮಂಗಲದಲ್ಲಿ ಕೆಪಿಎಸ್‌ಸಿ ಶಾಲೆ ಆರಂಭಿಸಲಾಗುತ್ತಿದ್ದು, 1 ರಿಂದ 12 ನೇ ತರಗತಿಯವರೆಗೆ ಕನ್ನಡ, ಇಂಗ್ಲಿಷ್ ಕಲಿಕೆಗೆ ಅವಕಾಶ ಕಲ್ಪಿಸಿದ್ದು, ಪ್ರಥಮ ಹಂತದಲ್ಲಿ ಮಕ್ಕಳನ್ನು ಕರೆದೋಯ್ಯಲು ಮೂರು ವಾಹನ ವ್ಯವ್ಯಸ್ಥೆ ಕಲ್ಪಿಸಲಾಗಿದೆ ಎಂದು ಶಾಸಕ ಎಚ್.ಸಿ. ಬಾಲಕೃಷ್ಣ ಹೇಳಿದರು.
ತಾಲೂಕಿನ ಮತ್ತಿಕೆರೆ ಗ್ರಾಮದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಉಚಿತ ಬೃಹತ್ ಆರೋಗ್ಯ ತಪಾಸಣೆ ಮತ್ತು ಶಸ್ತ್ರ ಚಿಕಿತ್ಸಾ ಶಿಬಿರ ಉದ್ಘಾಟಿಸಿ ಮಾತನಾಡಿದ ಅವರು, ಮತ್ತಿಕೆರೆ ಗ್ರಾಮದ ಒಳಗೆ ಕಿರಿದಾದ ರಸ್ತೆ ಇರುವುವುದರಿಂದ ವಾಹನ ಸಂಚಾರಕ್ಕೆ ತೊಂದರೆಯಾಗಿದ್ದು, ರಸ್ತೆ ವಿಸ್ಥರಣೆಗೆ ಗ್ರಾಮಸ್ಥರು ಸಹಕಾರ ನೀಡುವಂತೆ ಮನವಿ ಮಾಡಿದರು.
ಸಿರಿವಂತರು ಸಂಪಾದಿಸಿದ ಹಣದಲ್ಲಿ ಬಡವರ ಆರೋಗ್ಯಕ್ಕೆ ಅನುಕೂಲ ಕಲ್ಪಿಸಿದರೆ ಆರೋಗ್ಯವಂತ ಸಮಾಜ ನಿರ್ಮಾಣ ಮಾಡಲು ಸಾಧ್ಯ. ಆರೋಗ್ಯ ದೊಡ್ಡ ಸಂಪತ್ತು ಇದ್ದಂತೆ. ಬಿಪಿ, ಶುಗರ್ ಕಾಯಿಲೆಗಳಿಗೆ ನಾಟಿ ಔಷಧ ಪಡೆಯಬೇಡಿ, ಕಾಯಿಲೆ ಒಂದು ಭಾರಿ ಬಂದ ಮೇಲೆ ಹೋಗುವುದಿಲ್ಲ. ಪ್ರತಿ ನಿತ್ಯ ಮಾತ್ರೆಗಳನ್ನು ಪಡೆಯಿರಿ ಎಂದರು.
ವೃದ್ಧರಿಗೆ ಕಣ್ಣಿನ ಸಮಸ್ಯೆಗಳಿದ್ದು, ನಿರಂತರವಾಗಿ ತಪಾಸಣೆ ಮಾಡಿಸಿಕೊಳ್ಳಿ, ಮಂಡಿ ನೋವು ಇದ್ದವರು ಉಚಿತವಾಗಿ ಮಂಡಿ ಚುಪ್ಪುಗಳನ್ನು ಅಳವಡಿಸಿಕೊಳ್ಳಲು ಸರ್ಕಾರದಿಂದ ನೆರವು ಕಲ್ಪಿಸಲಾಗಿದೆ. ಸ್ತನ ಕ್ಯಾನ್ಸರ್, ಗರ್ಭಕೋಶ ಕ್ಯಾನ್ಸರ್ ಬಗ್ಗೆ ಮಹಿಳೆಯರಿಗೆ ಭಯ, ಸಂಕುಚಿತ ಮನೋಭಾವನೆ ಬೇಡ. ಇದಕ್ಕೆ ಸಾಕಷ್ಟು ಚಿಕಿತ್ಸೆ ಇದೆ. ಈ ಬಗ್ಗೆ ಆಶಾ ಕಾರ್ಯಕರ್ತರು ಜಾಗೃತಿ ಮೂಡಿಸುತ್ತಿದ್ದಾರೆ. ಕಾಯಿಲೆ ಇದ್ದವರ ಚಿಕಿತ್ಸೆ ಪಡೆಯಲು ಸಹಕಾರ ನೀಡಲು ಬದ್ಧನಾಗಿದ್ದೇನೆ ಎಂದರು.
ತಾಲೂಕಿನ ಪ್ರತಿ ಗ್ರಾಮದಲ್ಲಿ ಬಿ.ಪಿ, ಶುಗರ್ ತಪಾಸಣೆ ನಡೆಸಿ ಸ್ಥಳದಲ್ಲೇ ಚಿಕಿತ್ಸೆ ಕೊಡಲು ಆರೋಗ್ಯ ಇಲಾಖೆಯೊಂದಿಗೆ ಚರ್ಚಿಸಲಾಗಿದೆ. ಗ್ರಾಮಗಳಲ್ಲಿ ಯಾರೇ ಉಚಿತ ತಪಾಸಣಾ ಶಿಬಿರ ಮಾಡಿಸಲಿ, ಯಾರೂ ಅಸೂಯೆ ಪಡುವುದು ಬೇಡ. ಸಾರ್ವಜನಿಕವಾಗಿ ಅವರೊಂದಿಗೆ ಇರೋಣ ಎಂದರು.
ಬಿಎಂಆರ್‌ಡಿಎ ಮಾಜಿ ಅಧ್ಯಕ್ಷ ಕೆ.ಕೃಷ್ಣಮೂರ್ತಿ ಮಾತನಾಡಿ, ಮುಂದಿನ ವಾರ ನೇತೇನಹಳ್ಳಿಯಲ್ಲಿ ಶಿಬಿರ ಹಮ್ಮಿಕೊಳ್ಳಲಾಗಿದೆ ಎಂದರು.
ಆಯೋಜಕ ರಾಜು ಮಾತನಾಡಿ,ಶಿಬಿರದಲ್ಲಿ 500ಕ್ಕೂ ಹೆಚ್ಚು ಮಂದಿ ನುರಿತ ತಜ್ಞರಿಂದ ಚಿಕಿತ್ಸೆ ಪಡೆದಿದ್ದಾರೆ ಎಂದರು.
ಬಿಎಂಆರ್‌ಡಿಎ ಅಧ್ಯಕ್ಷ ಕೆಂಚೇಗೌಡ, ಜೆಪಿ. ಪೌಂಡೇಷನ್ ಅಧ್ಯಕ್ಷ ಜೆ.ಪಿ.ಚಂದ್ರೇಗೌಡ, ಟಿಎಚ್‌ಒ ಡಾ.ಎಂ.ಸಿ.ಚಂದ್ರಶೇಖರ್, ಮತ್ತಿಕೆರೆ ಗ್ರಾಪಂ ಅಧ್ಯಕ್ಷ ಕೃಷ್ಣಮೂರ್ತಿ, ವಿದ್ಯಾರ್ಥಿ ಮಿತ್ರ ಕಿರಣ್, ಮೂರ್ತಿ, ಕಾರ್ಮಿಕ ಸಂಘಟನೆಯ ಜಿಲ್ಲಾಧ್ಯಕ್ಷ ಆನಂದ್, ಚಕ್ರಭಾವಿ ಬೈರೇಶ್, ಬೆಂಕಿ ಮಹದೇವ್, ಕೆಂಪೇಗೌಡ, ಪ್ರಮೋದ್, ಕುಮಾರ್, ಎಂ.ಆರ್. ವೆಂಕಟೇಶ್, ಗಂಗಯ್ಯ, ಚಂದ್ರಕುಮಾರ್, ರಾಮಣ್ಣ, ರಾಮಚಂದ್ರು ಇತರರು ಇದ್ದರು.