ಬೆಂಗಳೂರು: ಆಡಳಿತ ಸೇವಾ ಅಧಿಕಾರಿಗಳ ಆಯ್ಕೆಗಾಗಿ ಕೆಪಿಎಸ್‌ಸಿಯಿಂದ ನಡೆದ ಪರೀಕ್ಷೆಯಲ್ಲಿ ಬೇಜವಾಬ್ದಾರಿತನದಿಂದ ಆಗಿರುವ ಭಾಷಾಂತರದ ತಪ್ಪುಗಳ ಕಾರಣ ಕನ್ನಡದ ಅಭ್ಯರ್ಥಿಗಳಿಗೆ ಅನ್ಯಾಯವಾಗಿದೆ. ಇದನ್ನು ತನಿಖೆಗೆ ಒಳಪಡಿಸುವುದರ ಜತೆಗೆ ಮರು ಪರೀಕ್ಷೆ ನಡೆಸಬೇಕು ಎಂದು ಸಾಹಿತಿ ಪ್ರೊ. ಬರಗೂರು ರಾಮಚಂದ್ರಪ್ಪ ಆಗ್ರಹಿಸಿದ್ದಾರೆ.
ನಾಡಿನ ಈ ಪ್ರತಿಷ್ಠಿತ ಸಂಸ್ಥೆಯು ಸೂಕ್ತ ಭಾಷಾಂತರಕಾರರ ನೆರವು ಪಡೆಯದೆ ಬೇಕಾಬಿಟ್ಟಿ ನಡೆದುಕೊಂಡಿರುವುದು ಸರಕಾರಕ್ಕೂ ಕೆಟ್ಟ ಹೆಸರು ತರುತ್ತದೆ. ಆದ್ದರಿಂದ ಸರಕಾರ ಕೂಡಲೇ ಸೂಕ್ತ ತನಿಖೆಗೆ ಆದೇಶಿಸಿ ಇಂತಹ ಅನಾಹುತಕ್ಕೆ ಕಾರಣವಾದವರ ಮೇಲೆ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ಮರು ಪರೀಕ್ಷೆ ಮಾಡುವುದು ಮೊದಲ ಆದ್ಯತೆಯಾಗಬೇಕು. ಕಡೇಪಕ್ಷ ಸೂಕ್ತ ಭಾಷಾತಜ್ಞರಿಂದ ಭಾಷಾಂತರದಲ್ಲಿ ಅಪಾರ್ಥ ಕೊಡುವ ಪ್ರಶ್ನೆಗಳನ್ನು ಪತ್ತೆ ಹಚ್ಚಿ ಆ ಪ್ರಶ್ನೆಗಳಿಗೆ ಉತ್ತರಿಸಿದ ಎಲ್ಲಾ ಅಭ್ಯರ್ಥಿಗಳಿಗೂ ಸರಿ-ತಪ್ಪುಗಳನ್ನು ಎಣಿಸದೆ ಪೂರ್ಣಾಂಕ ನೀಡಬೇಕು. ಒಟ್ಟಾರೆ ಇಡೀ ಪ್ರಕರಣದ ತನಿಖೆಗೆ ಸೂಕ್ತ ಸಮಿತಿಯನ್ನು ರಚಿಸಿ ಕೂಡಲೇ ಪರ್ಯಾಯ ಕ್ರಮಕ್ಕೆ ಸರಕಾರ ಮುಂದಾಗಿ ಕನ್ನಡ ಅಭ್ಯರ್ಥಿಗಳಿಗೆ ಆಗಿರುವ ಅನ್ಯಾಯವನ್ನು ಸರಿಪಡಿಸಬೇಕು ಎಂದು ಬರಗೂರು ರಾಮಚಂದ್ರಪ್ಪ ಆಗ್ರಹಿಸಿದ್ದಾರೆ.