ಶಿಕ್ಷಣ ಸಚಿವ ಎಸ್.ಮಧು ಬಂಗಾರಪ್ಪ 
ಜಿಲ್ಲೆ

ಹೋಬಳಿಗೊಂದು ಕೆಪಿಎಸ್ ಪ್ರಾರಂಭ: ಶಿಕ್ಷಣ ಸಚಿವ ಮಧು ಬಂಗಾರಪ್ಪ

ಶಿವಮೊಗ್ಗ: ಮುಂದಿನ ವರ್ಷದೊಳಗೆ ರಾಜ್ಯಾದ್ಯಂತ ಹೋಬಳಿಗೊಂದು ಕೆಪಿಎಸ್(ಕರ್ನಾಟಕ ಪಬ್ಲಿಕ್ ಸ್ಕೂಲ್) ಶಾಲೆಗಳನ್ನು ತೆರೆಯಲಾಗುವುದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಎಸ್.ಮಧು ಬಂಗಾರಪ್ಪ ತಿಳಿಸಿದರು.

ಆನಂತರ 2ರಿಂದ 3 ಗ್ರಾಪಂಗಳಿಗೊಂದು ಆಂಗ್ಲ ಮಾಧ್ಯಮ ಹಾಗೂ ಕನ್ನಡ ಮಾಧ್ಯಮ ಶಾಲೆಗಳನ್ನು ತೆರೆಯಲಾಗುವುದು. ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಎಲ್‌ಕೆಜಿ, ಯುಕೆಜಿಯಿಂದ ಶಾಲೆಗಳನ್ನು ಆರಂಭಿಸಲು ಉದ್ದೇಶಿಸಲಾಗಿದೆ. ಈ ಬಗ್ಗೆ ಒಂದೆರಡು ದಿನಗಳಲ್ಲಿ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ವಿಶೇಷ ಸಭೆ ನಡೆಸಲಿದ್ದಾರೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಶಿಕ್ಷಕರ ದಿನ(ಸೆಪ್ಟಂಬರ್ 5)ದೊಳಗೆ ಡಿಜಿಟಲ್ ಲೈಬ್ರರಿಗೆ ಮರು ಚಾಲನೆ ನೀಡಲಾಗುವುದು ಎಂದು ಸಚಿವ ಮಧು ಬಂಗಾರಪ್ಪ ಹೇಳಿದರು. ಹಳೆಯ ಶಿಕ್ಷಣ ನೀತಿಯನ್ನೇ ಮುಂದುವರಿಸಲಾಗುತ್ತಿದ್ದು, ಪಠ್ಯಪುಸ್ತಕ ಪರಿಷ್ಕರಣೆಗೊಳಿಸುವ ಸಂಬಂಧ ಶಿಕ್ಷಣ ತಜ್ಞರ ಸಮಿತಿ ರಚಿಸಲಾಗಿದೆ. ವಿಶೇಷವಾಗಿ ಇ-ಲೈಬ್ರರಿ ಯೋಜನೆ ಅನುಷ್ಠಾನಗೊಳಿಸಿದ್ದು, ಚಿಕ್ಕ ಮಕ್ಕಳಿಂದ ಐಎಎಸ್‌ವರೆಗೂ ಅಗತ್ಯವಿರುವ ಎಲ್ಲ ಪುಸ್ತಕಗಳು ಸೇರಿ 40 ಲಕ್ಷಕ್ಕೂ ಹೆಚ್ಚಿನ ವಿವಿಧ ಪ್ರಕಾರಗಳ ಪುಸ್ತಕಗಳು ಇ-ಗ್ರಂಥಾಲಯದಲ್ಲಿ ದೊರೆಯಲಿವೆ. ಅದರ ಸದಸ್ಯತ್ವಕ್ಕಾಗಿ ಯಾವುದೇ ಶುಲ್ಕ ಪಾವತಿಸುವ ಅಗತ್ಯವಿರುವುದಿಲ್ಲ. ಈಗಾಗಲೇ 3.35 ಲಕ್ಷ ಮಂದಿ ಅದರ ಸದಸ್ಯರಾಗಿದ್ದಾರೆ ಎಂದರು.

ಯತ್ನಾಳ್ ಗಿಣಿಶಾಸ್ತ್ರ ಹೇಳಲು ಲಾಯಕ್ಕು
ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಖಾಲಿ ಇರುವ ಬಸ್ ನಿಲ್ದಾಣಗಳಲ್ಲಿ ಗಿಣಿ ಶಾಸ್ತ್ರ ಹೇಳುವುದಕ್ಕೆ ಲಾಯಕ್ಕಾಗಿದ್ದಾರೆ ಎಂದು ಸಚಿವ ಮಧು ಬಂಗಾರಪ್ಪ ವಾಗ್ದಾಳಿ ನಡೆಸಿದರು. ರಾಜ್ಯ ಸರ್ಕಾರ ಇನ್ನಾರು ತಿಂಗಳಷ್ಟೇ ಇರಲಿದೆ ಎಂಬ ಯತ್ನಾಳ್ ಹೇಳಿಕೆಗೆ ಕಿಡಿಕಾರಿದ ಅವರು, ಯಾವುದಾದರೂ ಬಸ್ ನಿಲ್ದಾಣಗಳು ಖಾಲಿ ಇದ್ದರೆ ಅಲ್ಲಿಗೆ ಹೋಗಿ ಅವರು ಗಿಣಿಶಾಸ್ತ್ರ ಹೇಳುವುದನ್ನು ಆರಂಭಸಲಿ. ಅದಕ್ಕೆ ಅವರು ಸಮರ್ಥರಾಗಿದ್ದಾರೆ ಎಂದರು.