ಯಳಂದೂರು ಪಟ್ಟಣದ ಡಾ.ಅಂಬೇಡ್ಕರ್ ಭವನದಲ್ಲಿ ಮಂಗಳವಾರ ನಡೆದ ಕೆಪಿಎಸ್ ಫೆಸ್ಟ್-02 ಕಾರ್ಯಕ್ರಮವನ್ನು ಜಿಪಂ ಮಾಜಿ ಉಪಾಧ್ಯಕ್ಷ ಜೆ.ಯೋಗೇಶ್ ಉದ್ಘಾಟಿಸಿದರು. ಉಪಪ್ರಾಂಶುಪಾಲ ನಂಜುಂಡಯ್ಯ ಇದ್ದರು. 
ಜಿಲ್ಲೆ

ಕೆಪಿಎಸ್ ಶಾಲೆಯಿಂದ ಬಡ ಮಕ್ಕಳಿಗೆ ಉತ್ತಮ ಶಿಕ್ಷಣ

ನಾಗೇಶ ಎಸ್

ಯಳಂದೂರು: ಕೆಪಿಎಸ್ ಶಾಲೆಯಲ್ಲಿ ಬಡ ವರ್ಗದ ಮಕ್ಕಳಿಗೆ ಯಾವ ಖಾಸಗಿ ಶಾಲೆಗೂ ಕಡಿಮೆ ಇಲ್ಲದಂತೆ ಉತ್ತಮ ಶಿಕ್ಷಣ ನೀಡಲಾಗುತ್ತಿದ್ದು, ಇದರಿಂದ ಸಾವಿರಾರು ಮಕ್ಕಳು ಉತ್ತಮ ಶಿಕ್ಷಣ ಪಡೆಯುವಂತಾಗಿದೆ ಎಂದು ಕೆಪಿಎಸ್ ಶಾಲೆ ಉಪ ಪ್ರಾಂಶುಪಾಲ ನಂಜುಂಡಯ್ಯ ತಿಳಿಸಿದರು.

ಪಟ್ಟಣದ ಅಂಬೇಡ್ಕರ್ ಭವನದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಕೆಪಿಎಸ್ ಫೆಸ್ಟ್-2 ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಳೆದ 6 ವರ್ಷಗಳ ಹಿಂದೆ ನಮ್ಮ ಶಾಲೆ ಆರಂಭಗೊಂಡಿದೆ. ಇಲ್ಲಿ ಮಕ್ಕಳಿಗೆ ಬೇಕಾದ ಎಲ್ಲ ಸವಲತ್ತುಗಳನ್ನು ಕಲ್ಪಿಸಲಾಗಿದೆ. ಸರ್ಕಾರದಿಂದ ನೀಡುವ ಪ್ರಯೋಜನಗಳ ಜತೆಗೆ ಇಲ್ಲಿರುವ ಎಸ್‌ಡಿಎಂಸಿ ಸದಸ್ಯ ಮಂಡಳಿಯ ನಿರಂತರ ಸಹಕಾರದೊಂದಿಗೆ ನಮ್ಮ ಶಾಲೆಯ ಮಕ್ಕಳಿಗೆ ದಾನಿಗಳಿಂದ ವಿಶೇಷ ಸಮವಸ್ತ್ರ ಸೇರಿದಂತೆ ಕಂಪ್ಯೂಟರ್ ಕಲಿಕೆಗೆ ಬೇಕಾದ ಪರಿಕರ, ಪಠ್ಯೇತರ ಚಟುವಟಿಕೆಗೆ ಪೂರಕ ವಸ್ತುಗಳನ್ನು ಪಡೆದುಕೊಳ್ಳಲಾಗಿದೆ ಎಂದರು.

ಈ ಬಾರಿಯ ಎಸ್‌ಎಸ್‌ಎಲ್‌ಸಿಯಲ್ಲಿ ಉತ್ತಮ ಫಲಿತಾಂಶ ನೀಡಲು ನಮ್ಮ ಸಿಬ್ಬಂದಿ ಶ್ರಮ ಮೀರಿ ಪ್ರಯತ್ನಿಸುತ್ತಿದೆ. ಇಡೀ ಜಿಲ್ಲೆಯಲ್ಲಿ ಎಸ್‌ಎಸ್‌ಎಲ್‌ಸಿ ಬೋರ್ಡ್ ವತಿಯಿಂದ ನಡೆದ ಚಿತ್ರಕಲಾ ಪರೀಕ್ಷೆಯಲ್ಲಿ ನಮ್ಮ ಶಾಲೆಯ ವಿದ್ಯಾರ್ಥಿಗಳು ಶೇ.100 ರಷ್ಟು ಫಲಿತಾಂಶದ ಸಾಧನೆ ಮಾಡಿದ್ದಾರೆ. ಇದರೊಂದಿಗೆ ಡಿಸ್ಟಿಂಕ್ಷನ್‌ನಲ್ಲಿ ಪಾಸಾದ ಜಿಲ್ಲೆಯ ಏಕೈಕ ವಿದ್ಯಾರ್ಥಿ ನಮ್ಮ ಶಾಲೆಯವನೇ ಆಗಿದ್ದಾನೆ ಎಂಬುದಕ್ಕೆ ನಮಗೆ ಹೆಮ್ಮೆ ಇದೆ. ನಮ್ಮ ಶಾಲೆಯಲ್ಲಿ ಎನ್‌ಎಸ್‌ಕ್ಯೂಎಫ್ ಶಿಕ್ಷಕರು ಇದ್ದಾರೆ. ಈ ಶಿಕ್ಷಣ ಅಳವಡಿಸಿಕೊಂಡ ಜಿಲ್ಲೆಯ ಪ್ರಥಮ ಶಾಲೆ ನಮ್ಮದಾಗಿದೆ. ಇದರಲ್ಲಿ ಮಕ್ಕಳಲ್ಲಿರುವ ವೃತ್ತಿ ಕೌಶಲ ಗುರುತಿಸಿ ಅವರಿಗೆ ತರಬೇತಿ ನೀಡಲಾಗುತ್ತಿದೆ. ನಮ್ಮಲ್ಲಿ ಎಲೆಕ್ಟ್ರಾನಿಕ್ಸ್ ಮತ್ತು ಹಾರ್ಡ್‌ವೇರ್ ತರಬೇತಿಯನ್ನು 9 ಮತ್ತು 10 ನೇ ತರಗತಿಯ 25 ವಿದ್ಯಾರ್ಥಿಗಳಿಗೆ ನೀಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ಜಿಪಂ ಮಾಜಿ ಉಪಾಧ್ಯಕ್ಷ ಜೆ.ಯೋಗೇಶ್ ಮಾತನಾಡಿ, ಗುರುಕುಲದಲ್ಲಿದ್ದ ಶಿಕ್ಷಣವನ್ನು ಎಲ್ಲರಿಗೂ ಸಿಗುವಂತೆ ಮಾಡಿದ್ದ ಡಾ.ಬಿ.ಆರ್.ಅಂಬೇಡ್ಕರ್ ಹಾಗೂ ನಮ್ಮ ಸಂವಿಧಾನ ಎಂಬುದು ನಮ್ಮ ಹೆಮ್ಮೆಯಾಗಿದೆ. ಪಾಲಕರು ಹೆಣ್ಣು ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಬೇಕು. ಯಾವುದೇ ಕಾರಣಕ್ಕೂ ಶಿಕ್ಷಣವನ್ನು ಅರ್ಧಕ್ಕೆ ಮೊಟಕುಗೊಳಿಸಬಾರದು ಎಂದು ಸಲಹೆ ನೀಡಿದರು.

ಶಾಲಾ ಮಕ್ಕಳು ನಡೆಸಿಕೊಟ್ಟ ಸಾಂಸ್ಕೃತಿಕ ಕಾರ್ಯಕ್ರಮ ಗಮನ ಸೆಳೆಯಿತು. ಇದೇ ಸಂದರ್ಭದಲ್ಲಿ ಶಾಲೆಯನ್ನು ಶುಚಿಗೊಳಿಸುವ ಪೌರ ಕಾರ್ಮಿಕರನ್ನು ಸನ್ಮಾನಿಸಲಾಯಿತು. ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ರಾಮಚಂದ್ರರಾಜೇ ಅರಸ್, ಬಿಇಒ ಮಾರಯ್ಯ, ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಮಂಜುನಾಥ ಪ್ರಸನ್ನ, ಪಪಂ ಸದಸ್ಯರಾದ ಸುಶೀಲಾ, ಸವಿತಾ, ಲಿಂಗರಾಜಮೂರ್ತಿ, ಎಸ್‌ಡಿಎಂಸಿ ಅಧ್ಯಕ್ಷ ಜೈಗುರು, ಸದಸ್ಯರಾದ ಚಂದ್ರಶೇಖರ್, ಕೃಷ್ಣವೇಣಿ, ಮಹೇಶ್, ವಜ್ರಮುನಿ, ನಂಜುಂಡಸ್ವಾಮಿ, ಶಿಕ್ಷಕರಾದ ರವಿಕುಮಾರ್, ರೇಚಣ್ಣ, ಮಕ್ಕಳ ಸಹಾಯವಾಣಿ ಜಿಲ್ಲಾ ಸಂಯೋಜಕ ಸಿದ್ದರಾಜು ಹಾಜರಿದ್ದರು.