ಉಡುಪಿ: ಕರಾವಳಿ ಜಿಲ್ಲೆಯಲ್ಲಿ ಕೋಮುಪ್ರಚೋದಕ ವಾತಾವರಣ ಸಂಪೂರ್ಣ ತೊಲಗಬೇಕು. 30 ವರ್ಷದ ಹಿಂದೆ ಇದ್ದಂತಹ ಅಭಿವೃದ್ಧಿಯ ಸಂಸತಿ ಮತ್ತೆ ನಿರ್ಮಾಣವಾಗಬೇಕು. ಮುಂದಿನ ವಾರದಲ್ಲಿ ಅಂತಿಮ ವರದಿಯನ್ನು ಸಲ್ಲಿಸಲಾಗುವುದು ಎಂದು ಕೆಪಿಸಿಸಿ ನಿಯೋಗದ ಮುಖ್ಯಸ್ಥ ಹಾಗೂ ರಾಜ್ಯಸಭಾ ಸದಸ್ಯ ಡಾ. ನಾಸೀರ್ ಹುಸೇನ್ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದ.ಕ. ಜಿಲ್ಲೆ, ಉಡುಪಿ, ಉತ್ತರ ಕನ್ನಡ, ಶಿವಮೊಗ್ಗ ಭಾಗದಲ್ಲಿ ಸಮಾಜದಲ್ಲಿ ಸೌಹಾರ್ದತೆ ಮೂಡಿಸುವ ಉದ್ದೇಶದಿಂದ ಉಡುಪಿ ಜಿಲ್ಲೆಯ ವಿವಿಧ ಸಾಮಾಜಿಕ, ರಾಜಕೀಯ, ಶೈಕ್ಷಣಿಕ, ಧಾರ್ಮಿಕ ನಾಯಕರು, ಪ್ರಗತಿಪರ ಚಿಂತಕರೊಂದಿಗೆ ಸಮಾಲೋಚಿಸಲಾಗುತ್ತಿದೆ ಎಂದರು.
ಬುದ್ಧೀಜಿವಿಗಳು, ಅನೇಕ ಉನ್ನತ ಶಿಕ್ಷಣ ಸಂಸ್ಥೆಗಳು, ಆಸ್ಪತ್ರೆಗಳನ್ನು ಹೊಂದಿರುವ ಈ ಭಾಗದಲ್ಲಿ ಸೌಹಾರ್ದತೆ ಕದಡಿರುವುದರಿಂದ ಹೂಡಿಕೆ, ಪ್ರವಾಸೋದ್ಯಮ ಚಟುವಟಿಕೆಗಳಿಗೆ ಹೊಡೆದ ಬಿದ್ದಿದೆ. ಈ ಬಗ್ಗೆ ಪಕ್ಷಕ್ಕೆ ಮಧ್ಯಂತರ ವರದಿ ನೀಡಿದ್ದೇವೆ. ಸರ್ಕಾರವೂ ಈ ಬಗ್ಗೆ ಗಂಭೀರ ಚಿಂತನೆ ನಡೆಸುತ್ತಿದ್ದು, ದ್ವೇಷ ಭಾಷಣ ತಡೆ ಕಾನೂನು ರೂಪಿಸುತ್ತಿದೆ. ಗಲಭೆಯಲ್ಲಿ ಭಾಗಿಯಾದವರಿಗೆ ಶಿೆ ಸಿಗುವಂತೆ ಮಾಡಲಾಗುವುದು. ಶಾಂತಿಯುತ ವಾತಾವರಣ ನಿರ್ಮಿಸುವುದು ಕಾಂಗ್ರೆಸ್ ಮತ್ತು ಸರ್ಕಾರದ ಗುರಿಯಾಗಿದೆ. ಇದರೊಂದಿಗೆ ಸ್ಯಾಂಡ್, ಮೈನಿಂಗ್, ಡ್ರಗ್ಸ್ ಮಾಫಿಯಾಕ್ಕೂ ಕಡಿವಾಣ ಹಾಕಲಾಗುವುದು. ಬಹುಸಂಖ್ಯಾತ ಮತ್ತು ಅಲ್ಪಸಂಖ್ಯಾತ ಎರಡೂ ಬಗೆಯ ಕೋಮುವಾದವನ್ನು ವಿರೋಧಿಸಲಾಗುವುದು ಎಂದರು.
ವಿಪ ಮಾಜಿ ಸದಸ್ಯ ಆರ್.ವಿ. ಸುದರ್ಶನ್ ಮಾತನಾಡಿ, ಕರಾವಳಿಯಲ್ಲಿ ಸೌಹಾರ್ದತೆ ನೆಲೆಗೊಳಿಸುವ ನಿಟ್ಟಿನಲ್ಲಿ ವಾಸ್ತವ ವರದಿಯನ್ನು ಸಲ್ಲಿಸಲಾಗುವುದು. ಜಿಲ್ಲೆಯಲ್ಲಿ ಕೋಮು ಸೌಹಾರ್ದತೆ ಹದಗೆಟ್ಟಿರುವುದರಿಂದ ಬಂಡವಾಳ ಹೂಡಿಕೆಗೆ ಯಾರೂ ಮುಂದೆ ಬರುತ್ತಿಲ್ಲ. ಕೋಮುಸೌಹಾರ್ದಕ್ಕೆ ಧಕ್ಕೆಯಾಗಿರುವುದರಿಂದ ಅಭಿವೃದ್ಧಿಗೆ ಹಿನ್ನಡೆಯಾಗಿದೆ. ಯಾವುದೇ ಜಾತಿ, ಧರ್ಮದವರು ದ್ವೇಷ ಭಾಷಣ ಮಾಡಿದರೂ ಕಠಿಣ ಕ್ರಮಕೈಗೊಳ್ಳಲಾಗುವುದು. ಕೆಪಿಸಿಸಿ ವತಿಯಿಂದ ಸಲ್ಲಿಸಲಾದ ಮಧ್ಯಂತರ ವರದಿ ಆಧಾರದಲ್ಲಿ ಆ್ಯಂಟಿ ಕಮ್ಯುನಲ್ ೋರ್ಸ್ ರಚಿಸಲಾಗಿದೆ ಎಂದು ಹೇಳಿದರು.
ಮಾಜಿ ಸಚಿವ ಕಿಮ್ಮನೆ ರತ್ನಾಕರ್, ಕರ್ನಾಟಕ ಪ್ರದೇಶ ಕಾಂಗ್ರೆಸ್ ಕಾರ್ಯಾಧ್ಯಕ್ಷ ಮಂಜುನಾಥ್ ಭಂಡಾರಿ, ಪ್ರದೇಶ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ವಿನಯ ಕುಮಾರ್ ಸೊರಕೆ, ಪ್ರದೇಶ ಕಾಂಗ್ರೆಸ್ ಉಪಾಧ್ಯಕ್ಷ ಎಂ.ಎ.ಗಫೂರ್, ಮಾಜಿ ಸಂಸದ ಜಯಪ್ರಕಾಶ್ ಹೆಗ್ಡೆ, ಕಾರ್ಯಧ್ಯಕ್ಷ ಕಿಶನ್ ಹೆಗ್ಡೆ ಕೊಳ್ಕೆಬೈಲ್, ಮುನಿಯಾಲು ಉದಯಕುಮಾರ್ ಶೆಟ್ಟಿ, ಪ್ರಸಾದ್ ರಾಜ್ ಕಾಂಚನ್, ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು ಉಪಸ್ಥಿತರಿದ್ದರು.