ಜಿಲ್ಲೆ

ದ.ಕ. ಜಿಲ್ಲೆಯಲ್ಲಿ 2,488 ಕೋಟಿ ರೂ. ಗ್ಯಾರಂಟಿ ಮೊತ್ತ ವಿತರಣೆ

ಮಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಯೋಜನೆಯನ್ನು ಜಾರಿಗೊಳಿಸಿ ನುಡಿದಂತೆ ನಡೆದಿದೆ. ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ಆಡಳಿತಕ್ಕೆ ಬಂದು 2 ವರ್ಷಗಳು ತುಂಬುತ್ತಿರುವ ಸಂದರ್ಭದಲ್ಲಿ ದ.ಕ. ಜಿಲ್ಲೆಯಲ್ಲಿ ಪಂಚ ಗ್ಯಾರಂಟಿ ಯೋಜನೆಗಳಿಗೆ ಸಂಬಂಧಿಸಿ ಈವರೆಗೆ ಒಟ್ಟು 2,488 ಕೋಟಿ ರೂ.ಗಳನ್ನು ಫಲಾನುಭವಿಗಳಿಗೆ ಒದಗಿಸಲಾಗಿದೆ ಎಂದು ಎಂಎಲ್‌ಸಿ ಹಾಗೂ ಕೆಪಿಸಿಸಿ ಉಪಾಧ್ಯಕ್ಷ ಐವನ್ ಡಿಸೋಜಾ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ರಾಜ್ಯ ಸರ್ಕಾರ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿದ ಗ್ಯಾರಂಟಿಗಳನ್ನು ಜಾರಿಗೆ ತರುವ ಮೂಲಕ ಕಾಂಗ್ರೆಸ್ ಸರ್ಕಾದ ಮಾದರಿ ದೇಶಕ್ಕೆ ಮಾದರಿಯಾಗಿ ರೂಪುಗೊಂಡಿದೆ. ವಿಶ್ವದ ಅರ್ಥಶಾಸ್ತ್ರಜ್ಞರು ಮತ್ತು ವಿವಿಗಳ ಅಧ್ಯಯನಕ್ಕೂ ಕಾಂಗ್ರೆಸ್‌ನ ಗ್ಯಾರಂಟಿ ಯೋಜನೆಗಳು ಕಾರಣವಾಗಿವೆ. ಕಾಂಗ್ರೆಸ್ ಗ್ಯಾರಂಟಿಯನ್ನು ಟೀಕೆ ಮಾಡಿದ್ದ ಬಿಜೆಪಿ ಕೂಡಾ ಮಹಾರಾಷ್ಟ್ರ ಮತ್ತು ದೆಹಲಿಯಲ್ಲಿ ಕಟ್ ಆ್ಯಂಡ್ ಪೇಸ್ಟ್ ಮಾಡಿ ಕೇಂದ್ರ ಸರ್ಕಾರ ಜಾರಿಗೊಳಿಸಿದೆ ಎಂದರು.

ಕೇಂದ್ರ ಸರ್ಕಾರದ ನಿರಂತರ ತೆರಿಗೆ ಹಂಚಿಕೆಹಾಗೂ ಅನುದಾನದ ಅನ್ಯಾಯದ ಹೊರತಾಗಿಯೂ ಕರ್ನಾಟಕವನ್ನು ಅಭಿವೃದ್ಧಿಪಡಿಸುವಲ್ಲಿ ನಮ್ಮ ರಾಜ್ಯ ಸರಕಾರ ಗೆದ್ದಿದೆ. ದೇಶದ ಒಟ್ಟಾರೆ ಜಿಡಿಪಿ ಶೇ. 8.2ಷ್ಟು ಬೆಳವಣಿಗೆಯ ನಡುವೆ ಕರ್ನಾಟಕದ ಜಿಡಿಪಿ ಶೇ. 10.2ರಷ್ಟು ಬೆಳವಣಿಗೆಯಾಗಿ ದೇಶದಲ್ಲಿ ಅಗ್ರಸ್ಥಾನ ಪಡೆಯುವಲ್ಲಿ ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿಯವರ ಶ್ರಮ ಕಾರಣವಾಗಿದೆ. ತೆರಿಗೆ ಸಂಗ್ರಹದಲ್ಲಿ ರಾಜ್ಯ 2ನೆ ಸ್ಥಾನದಲ್ಲಿದೆ. ಹಟ್ಟಿ,ಹಾಡಿ, ತಾಂಡ, ಪಾಳ್ಯ, ಮುಜುರೆ ಗ್ರಾಮಗಳನ್ನು ಕಂದಾಯ ಗ್ರಾಮಗಳಾಗಿ ಪರಿವರ್ತಿಸಿ ಅಲ್ಲಿ ವಾಸಿಸುವ 1 ಲಕ್ಷಕ್ಕೂ ಅಧಿಕ ಫಲಾನುಭವಿಗಳಿಗೆ ಹಕ್ಕುಪತ್ರವನ್ನು ರಾಜ್ಯ ಸರಕಾರ ನೀಡಿದೆ. ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ಅಧ್ಯಕ್ಷ ಫಿಲೆಮನ್ ಯಾಂಗ್ ಅವರು ಕೂಡಾ ಕಾಂಗ್ರೆಸ್ ಸರ್ಕಾರಾದ ಪಂಚ ಗ್ಯಾರಂಟಿಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಎಂದರು.

ಕಾಂಗ್ರೆಸ್‌ನಿಂದ ನಡೆಸಲಾದ ಜನಗಣತಿಯ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು ಜನಗಣತಿಗೆ ಮುಂದಾಗಿದೆ. ಕಾಂಗ್ರೆಸ್‌ನ ಯೋಜನೆಗಳು ಕೇವಲ ಬೂಟಾಟಿಕೆ ಅಲ್ಲ ಫಲಾನುಭವಿಗಳಿಗೆ ಯೋಜನೆಗಳನ್ನು ತಲುಪಿಸುವ ಬದ್ಧತೆ. ಕೇಂದ್ರ ಸರ್ಕಾರವು ತೆರಿಗೆ ಸಂಗ್ರಹದಿಂದ ರಾಜ್ಯಕ್ಕೆ ಒದಗಿಸಬೇಕಾದ ಅನುದಾನದಲ್ಲಿ ಮಲತಾಯಿ ಧೋರಣೆ ನೀಡಿದರೂ, ರಾಜ್ಯ ಸರ್ಕಾರ ಹಲವು ಯೋಜನೆಗಳ ಮೂಲಕ ಅಭಿವೃದ್ಧಿ ಕಾರ್ಯ ನಡೆಸುತ್ತಿದ್ದು, ರಾಜ್ಯದ ಹಣಕಾಸಿನ ವ್ಯವಸ್ಥೆಯನ್ನೂ ಸುವ್ಯವಸ್ಥಿತವಾಗಿ ಇರುವಂತೆ ಮಾಡಿದೆ ಎಂದರು.

ಕಾಂಗ್ರೆಸ್‌ಮುಖಂಡರಾದ ಶಶಿಧಹ ಹೆಗ್ಡೆ, ಗಿರೀಶ್, ವಿಕಾಶ್ ಶೆಟ್ಟಿ, ಪದ್ಮ ಪ್ರಸಾದ್ ಜೈನ್, ಎಲಿಸ್ಟರ್ ಡಿಕುನ್ನಾ, ಸತೀಶ್ ಪೆಂಗಲ್ ಮೊದಲಾದರು ಉಪಸ್ಥಿತರಿದ್ದರು.