ಪ್ರಕಾಶ ರಾಠೋಡ ಸುದ್ದಿಗೋಷ್ಠಿ 
ಜಿಲ್ಲೆ

ಸಂವಿಧಾನ ವಿರುದ್ಧವಾಗಿ ಮೀಸಲು ಹಂಚಿಕೆ

ಕೊಪ್ಪಳ: ಸಂವಿಧಾನಾತ್ಮಕವಾಗಿ ಒಳ ಮೀಸಲಾತಿ ನೀಡಲು ಬರುವುದಿಲ್ಲ. ಈ ಸಂಬಂಧ ಸುಪ್ರೀಂಕೋರ್ಟ್ ಸಹ ಹಲವು ಪ್ರಕರಣಗಳಲ್ಲಿ ಸ್ಪಷ್ಟಪಡಿಸಿದೆ. ಆದರೆ, ಚುನಾವಣೆ ಹೊಸ್ತಿಲಲ್ಲಿ ರಾಜ್ಯ ಸರ್ಕಾರ ದುರುದ್ದೇಶದಿಂದ ಮೀಸಲು ಹಂಚಿಕೆ ಮಾಡಿ ಕೇಂದ್ರಕ್ಕೆ ಶಿಫಾರಸು ಮಾಡಿದೆ ಎಂದು ಕೆಪಿಸಿಸಿ ಮುಖ್ಯ ವಕ್ತಾರ ಪ್ರಕಾಶ ರಾಠೋಡ ಆರೋಪಿಸಿದರು.

ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಚುನಾವಣೆ ಸಮಯದಲ್ಲಿ ಗಿಮಿಕ್ ಮಾಡಲು ಕೊನೆಯ ಸಂಪುಟ ಸಭೆಯಲ್ಲಿ ಒಳ ಮೀಸಲು ನೀಡಿದ್ದಾರೆ. ಲಂಬಾಣಿ, ಭೋವಿ, ಕೊರಚ, ಕೊರಮ ಸಮುದಾಯಗಳಿಗೆ ಅನ್ಯಾಯ ಮಾಡಲಾಗಿದೆ. ಕೇವಲ ಒಂದು ವರ್ಗದ ಮನವೊಲಿಸಲು ಬಿಜೆಪಿ ಹುನ್ನಾರ ನಡೆಸಿದೆ. ಸದಾಶಿವ ಆಯೋಗ ವರದಿ ಪ್ರಶ್ನಿಸಿ ನ್ಯಾಯಾಲಯದಲ್ಲಿ ದಾವೆ ಹೂಡಿದ್ದೇವೆ. ಯಥಾಸ್ಥಿತಿ ಕಾಪಾಡುವಂತೆ ನಿರ್ದೇಶನವಿದ್ದರೂ ನ್ಯಾಯಾಂಗ ನಿಂದನೆ ಮಾಡಿ ವರದಿ ಶಿಫಾರಸು ಮಾಡಲಾಗಿದೆ. ಒಳ ಮೀಸಲಾತಿ ಹಂಚಿಕೆಗಾಗಿ ಅನೇಕ ರಾಜ್ಯಗಳು ಕೇಂದ್ರಕ್ಕೆ ಮನವಿ ಮಾಡಿವೆ. ಈವರೆಗೂ ಯಾವುದೇ ರಾಜ್ಯದ ವರದಿ ಅಂಗೀಕರಿಸಿಲ್ಲ. ಸಂವಿಧಾನಕ್ಕೆ ತಿದ್ದುಪಡಿ ಮಾಡದ ಹೊರತು ಹಂಚಿಕೆ ಸಾಧ್ಯವಿಲ್ಲ. ಆದರೂ ಮತಗಳಿಕೆ ಉದ್ದೇಶದಿಂದ ದಲಿತ ಸಮುದಾಯಗಳಲ್ಲಿ ಜಗಳ ಹಚ್ಚುವ ಕೆಲಸ ಮಾಡಿದ್ದಾರೆಂದು ಆಕ್ರೋಶ ವ್ಯಕ್ತಪಡಿಸಿದರು.

ನಮ್ಮ ಸಮುದಾಯದ ಶಾಸಕ, ಸಂಸದ, ಸಚಿವರು ಸರ್ಕಾರದ ನಡೆ ಸಮರ್ಥಿಸುವ ಮೂಲಕ ಸಮುದಾಯಕ್ಕೆ ಅನ್ಯಾಯ ಮಾಡುತ್ತಿದ್ದಾರೆ. ಸ್ವಾಮೀಜಿಗಳು ಬೆಂಬಲಿಸಿದರೂ ನಾವು ಅವರನ್ನು ವಿರೋಧಿಸುತ್ತೇವೆ. ಜನರು ಚುನಾವಣೆಯಲ್ಲಿ ಇವರಿಗೆ ತಕ್ಕ ಪಾಠ ಕಲಿಸುತ್ತಾರೆ. ಪಜಾ, ಪಪಂಗಳಿಗೆ ಹೆಚ್ಚಿಸಿದ ಮೀಸಲು ಇನ್ನು ಜಾರಿಯಾಗಿಲ್ಲ. ಹಾಗಿದ್ದರೂ, ಇಲ್ಲದ ಮೀಸಲು ಹಂಚಿಕೆ ಮಾಡಿದ್ದಾರೆ. ನ್ಯಾ. ಸದಾಶಿವ ಹಾಗೂ ನ್ಯಾ.ನಾಗಮೋಹನದಾಸ್ ಆಯೋಗಗಳು ಪಕ್ಷಪಾತಿಗಳಾಗಿ ವರದಿ ನೀಡಿದ್ದಾರೆ. ಲಂಬಾಣಿ, ಭೋವಿ, ಕೊರಮ, ಕೊರಚ ಸಮುದಾಯಗಳನ್ನು ಮೀಸಲಾತಿಯಿಂದ ಹೊರಗಿಡಲು ಹುನ್ನಾರ ನಡೆಸಲಾಗಿದೆ. ಈ ಬಗ್ಗೆ ನ್ಯಾಯಾಂಗ ಹೋರಾಟ ಮಾಡುವುದಾಗಿ ತಿಳಿಸಿದರು. ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಬಾಲರಾಜ ನಾಯ್ಕ, ಚಿತ್ರದುರ್ಗಾ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ವೆಂಕಟೇಶ ನಾಯ್ಕ ಇದ್ದರು.