ಅಜ್ಜಂಪುರ: ಜನರ ಆಶೀರ್ವಾದ ಇಲ್ಲದಿದ್ದರೂ ಅನ್ಯ ಪಕ್ಷದ ಬಾಡಿಗೆ ಶಾಸಕರಿಂದ ಬಿಜೆಪಿ ಅಧಿಕಾರ ಹಿಡಿದಿರುವುದು ಪ್ರಜಾತಂತ್ರ ವ್ಯವಸ್ಥೆಗೆ ಕಪ್ಪುಚುಕ್ಕೆ ಎಂದು ಕೆಪಿಸಿಸಿ ವಕ್ತಾರ ಬಿ.ಎಲ್.ಶಂಕರ್ ಟೀಕಿಸಿದರು.
ಪಟ್ಟಣದ ಸಿದ್ದರಾಮೇಶ್ವರ ಸಮುದಾಯ ಭವನದಲ್ಲಿ ಭಾನುವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಬೆಂಬಲಿತ ಗ್ರಾಪಂ ಸದಸ್ಯರು ಮತ್ತು ಪರಾಜಿತರನ್ನು ಸನ್ಮಾನಿಸಿ ಮಾತನಾಡಿದರು.
ಜಿಲ್ಲೆಯಲ್ಲಿ ಶೇ.50-60ರಷ್ಟು ಕಾಂಗ್ರೆಸ್ ಸದಸ್ಯರು ಗ್ರಾಪಂ ಚುನಾವಣೆಯಲ್ಲಿ ಜಯಗಳಿಸಿದ್ದಾರೆ. ಇದರಿಂದ ಮುಂದಿನ ಎಲ್ಲ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಸ್ವತಂತ್ರವಾಗಿ ಸ್ಪರ್ಧಿಸಿ ಗೆಲುವು ಸಾಧಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕಾಂಗ್ರೆಸ್ ಜಿಲ್ಲಾಧ್ಯಕ್ಷ ಡಾ. ಕೆ.ಪಿ.ಅಂಶುಮಂತ್ ಮಾತನಾಡಿ, ಪ್ರಜಾಪ್ರಭುತ್ವ ವ್ಯವಸ್ಥೆಗೆ ವಿರುದ್ಧವಾಗಿ ಆಪರೇಷನ್ ಕಮಲದ ಮೂಲಕ ರಾಜ್ಯದಲ್ಲಿ ಬಿಜೆಪಿ ಅಧಿಕಾರ ಹಿಡಿದಿದೆ. ಈಗ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಗೆಲುವು ಸಾಧಿಸಿದವರನ್ನು ಹಣ, ಅಧಿಕಾರದ ಆಮಿಷ, ಬೆದರಿಕೆ ತಂತ್ರದ ಮೂಲಕ ಸೆಳೆಯುವ ಪ್ರಯತ್ನ ಮಾಡುತ್ತಿದೆ ಎಂದು ಆರೋಪಿಸಿದರು.
ಇದು ಕಾಂಗ್ರೆಸ್ನ ಸಂಘಟನೆ ಮತ್ತು ಸಂಘರ್ಷದ ವರ್ಷ. ನಮ್ಮ ಸಂಘಟನೆ ತಳಮಟ್ಟದಿಂದ ಬಲಗೊಳ್ಳಬೇಕಿದೆ. ಇದಕ್ಕಾಗಿ ಪ್ರತಿ ಗ್ರಾಪಂನಲ್ಲಿ 25 ಜನರ ಘಟಕ ಸ್ಥಾಪಿಸಲಾಗುವುದು. ಈ ಮೂಲಕ ಸ್ಥಳೀಯ ಸಮಸ್ಯೆ ವಿರುದ್ಧ ಹೋರಾಡುವ, ಜನಪರ ವಿಷಯಗಳಿಗೆ ಸ್ಪಂದಿಸುವ ಯೋಜನೆ ರೂಪಿಸಲಾಗುವುದು ಎಂದು ಹೇಳಿದರು.
ಮಾಜಿ ಶಾಸಕ ಜಿ.ಎಚ್.ಶ್ರೀನಿವಾಸ್ ಮಾತನಾಡಿ, ಕ್ಷೇತ್ರದಲ್ಲಿ ಶಾಸಕರ ಸಾಧನೆ ಶೂನ್ಯ. ಈವರೆಗೆ ಒಂದೂ ಮನೆ ನೀಡಿಲ್ಲ. ಬಗರ್ಹುಕುಂ ಭೂಮಿ ಮಂಜೂರು ಮಾಡಿಕೊಟ್ಟಿಲ್ಲ. ಕೇವಲ ಹಿಂಬಾಲಕರು ಮತ್ತು ಆಪ್ತರ ಕೆಲಸಗಳನ್ನು ಮಾಡಿಕೊಡುತ್ತಿದ್ದಾರೆ. ಈಗ ನಮ್ಮ ಪಕ್ಷದ ಬೆಂಬಲಿತ ಸದಸ್ಯರನ್ನು ಸೆಳೆದು ಶಕ್ತಿ ಪ್ರದರ್ಶನಕ್ಕೆ ಮುಂದಾಗಿದ್ದಾರೆ ಎಂದರು.
ಮಾಜಿ ಜಿಲ್ಲಾಧ್ಯಕ್ಷ ವಿಜಯ್ಕುಮಾರ್ ಮಾತನಾಡಿ, ರೈತ ವಿರೋಧಿ ಕಾನೂನು, ಕೇಂದ್ರ ಸರ್ಕಾರದ ಸರ್ವಾಧಿಕಾರಿ ಧೋರಣೆ, ಪೆಟ್ರೋಲ್, ಡೀಸೆಲ್, ಅಗತ್ಯ ವಸ್ತುಗಳ ಬೆಲೆ ಏರಿಕೆ ಮುಂದುವರಿದಿದೆ. ಇದಕ್ಕೆ ಮುಂಬರುವ ತಾಪಂ, ಜಿಪಂ ಚುನಾವಣೆಯಲ್ಲಿ ಮತದಾರರು ತಕ್ಕ ಉತ್ತರ ನೀಡಲಿದ್ದಾರೆ ಎಂದರು.
ಮಾಜಿ ಶಾಸಕ ಟಿ.ಎಚ್.ಶಿವಶಂಕರಪ್ಪ, ಎಐಸಿಸಿ ಸದಸ್ಯ ಸಂದೀಪ್, ಜಿಪಂ ಸದಸ್ಯೆ ರಾಧಾ ಶಿವಕುಮಾರ್, ಮುಖಂಡರಾದ ಚೇತನ್, ಸಂತೋಷ್, ರಸೂಲ್ ಖಾನ್, ಧ್ರುವಕುಮಾರ್, ಪದ್ಮರಾಜ್, ದೋರನಾಳು ಪರಮೇಶ್, ಭರತ್ಕುಮಾರ್, ರಮೇಶ್, ಎಂ.ಕೃಷ್ಣಮೂರ್ತಿ, ಗುರುಮೂರ್ತಿ, ಲೋಹಿತ್, ರುದ್ರೇಶ್, ಎ.ಸಿ.ಚಂದ್ರಪ್ಪ ಇತರರಿದ್ದರು.