ವಿಜಯವಾಣಿ ಸುದ್ದಿಜಾಲ ಉಡುಪಿ
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ರಚನೆಯಾಗಿ 2 ವರ್ಷ ಪೂರ್ಣಗೊಂಡಿದ್ದು, ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ ಅವರ ನೇತೃತ್ವದಲ್ಲಿ ಅಭಿವೃದ್ಧಿ ಪರ್ವವೇ ನಡೆದಿದೆ. ಜನರ ನಿರೀಕ್ಷೆಗೂ ಮೀರಿ ಸರ್ಕಾರ ಉತ್ತಮ ಕೆಲಸ ಮಾಡುತ್ತಿದೆ. ವಿರೋಧ ಪಕ್ಷ ಬಿಜೆಪಿ ನಾಯಕರ ಆರೋಪ, ಪ್ರಶ್ನೆಗಳಿಗೆ ಮೇ 20ರಂದು ಹೊಸಪೇಟೆಯಲ್ಲಿ ನಡೆಯಲಿರುವ ಪ್ರಗತಿಯತ್ತ ಕರ್ನಾಟಕ, ಸಮರ್ಪಣಾ ಸಂಕಲ್ಪ ಸಮಾವೇಶದಲ್ಲಿ ಉತ್ತರಿಸುತ್ತೇವೆ ಎಂದು ಕೆಪಿಸಿಸಿ ಕಾರ್ಯದರ್ಶಿ, ಉಡುಪಿ ಜಿಲ್ಲಾ ಕಾಂಗ್ರೆಸ್ ಉಸ್ತುವಾರಿ ಲಾವಣ್ಯಾ ಬಲ್ಲಾಳ ತಿಳಿಸಿದರು.
ಉಡುಪಿಯ ಪ್ರೆಸ್ಕ್ಲಬ್ನಲ್ಲಿ ಮೇ 19ರಂದು ಬೆಳಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಚುನಾವಣಾ ಪ್ರಣಾಳಿಕೆಯಲ್ಲಿ ತಿಳಿಸಿದಂತೆ ಎಲ್ಲವನ್ನೂ ಅನುಷ್ಠಾನ ಮಾಡಲಾಗಿದೆ. ಸರ್ಕಾರಕ್ಕೆ ಇನ್ನೂ ಮೂರು ವರ್ಷದ ಅವಧಿ ಬಾಕಿ ಇದ್ದು, ಅತ್ಯುತ್ತಮವಾಗಿ ಜನಸೇವೆ ಮಾಡಲಿದ್ದೇವೆ ಎಂದರು.
ರಾಜ್ಯದ ಗ್ಯಾರಂಟಿ ಯೋಜನೆಗಳು ದೇಶಕ್ಕೇ ಮಾದರಿಯಾಗಿದೆ. ಬಿಜೆಪಿ ಆಡಳಿತವಿರುವ ಆಂಧ್ರ ಪ್ರದೇಶ, ಮಧ್ಯ ಪ್ರದೇಶ ಹಾಗೂ ಮಹಾರಾಷ್ಟ್ರದಲ್ಲೂ ಸಹ ನಮ್ಮ ಗ್ಯಾರಂಟಿ ಯೋಜನೆಗಳನ್ನೇ ನಕಲು ಮಾಡಿದ್ದಾರೆ. ಆದರೂ ಸಹ ರಾಜ್ಯ ಬಿಜೆಪಿಯವರು ಗ್ಯಾರಂಟಿ ಯೋಜನೆಯಿಂದ ರಾಜ್ಯ ದಿವಾಳಿ ಆಗುತ್ತದೆ ಎಂದು ಆಗಾಗ ಅಪಸ್ವರ ಎತ್ತುತ್ತಾರೆ. ಗ್ಯಾರಂಟಿಯಿಂದ ಖಜಾನೆ ಖಾಲಿಯಾಗಿಲ್ಲ, ಜನರ ಜೇಬು ಭರ್ತಿಯಾಗುತ್ತಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಮಹಾಬಲ ಕುಂದರ್, ಉಡಪಿ ಜಿಲ್ಲಾ ಕಾಂಗ್ರೆಸ್ ಕಾರ್ಯಾಧ್ಯಕ್ಷ ಕಿಶನ್ ಹೆಗ್ಡೆ ಕೊಳ್ಕೆಬೈಲು, ಜಿಲ್ಲಾ ವಕ್ತಾರ ಬಿಪಿನ್ಚಂದ್ರಪಾಲ ನಕ್ರೆ, ಉಡುಪಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ ಕಾಂಚನ್ ಇದ್ದರು.