ಬಾಳೆಹೊನ್ನೂರು: ರಂಭಾಪುರಿ ಶ್ರೀ ವೀರಗಂಗಾಧರ ಜಗದ್ಗುರುಗಳು ನನ್ನ ಹೈಕಮಾಂಡ್. ಶ್ರೀಗಳು ಆಶೀರ್ವದಿಸಿ ಫಲಪುಷ್ಪದೊಂದಿಗೆ ನೀಡಿರುವ ಹಿರಿಯ ಜಗದ್ಗುರುಗಳ ಭಾವಚಿತ್ರವನ್ನು ಕೆಪಿಸಿಸಿ ಅಧ್ಯಕ್ಷರ ಕೊಠಡಿಯಲ್ಲಿ ಇಟ್ಟುಕೊಳ್ಳುತ್ತೇನೆ ಎಂದು ನಿಯೋಜಿತ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ಗುರುವಾರ ರಂಭಾಪುರಿ ಜಗದ್ಗುರುಗಳನ್ನು ಭೇಟಿ ಮಾಡಿ ಆಶೀರ್ವಾದ ಪಡೆದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾನವ ಧರ್ಮಕ್ಕೆ ಜಯವಾಗಲಿ, ಧರ್ಮದಿಂದಲೇ ವಿಶ್ವಕ್ಕೆ ಶಾಂತಿ ಎನ್ನುವ ಸಂದೇಶದಲ್ಲಿ ನಾನು ಸಂಪೂರ್ಣ ನಂಬಿಕೆ ಇಟ್ಟುಕೊಂಡಿದ್ದೇನೆ. ವೈಯಕ್ತಿಕ ಬದುಕಿರಲಿ, ಸಾರ್ವಜನಿಕ ಬದುಕಿರಲಿ ಈ ಸಂದೇಶ ಪ್ರತಿಪಾದನೆ ಮಾಡುತ್ತಿದ್ದೇನೆ. ಈ ಪೀಠದಿಂದ ಬಂದ ಆ ಧ್ವನಿ ವಿಶ್ವದ ದ್ವನಿಯಾಗಬೇಕು ಎಂದು ಶ್ರೀಗಳ ಆಶೀರ್ವಾದ ಪಡೆಯಲು ಆಗಮಿಸಿದ್ದೇನೆ ಎಂದು ಹೇಳಿದರು.
ಎಲ್ಲ ಮಠಾಧೀಶರು ನಿಸ್ವಾರ್ಥ ಸೇವೆ ಮಾಡಿಕೊಂಡು ಬರುತ್ತಿದ್ದಾರೆ. ಸಮಾಜ ಶಾಂತಿಯಿಂದ ಇರಬೇಕು ಎಂದು ಎಲ್ಲರೂ ಪ್ರಯತ್ನಿಸುತ್ತಿದ್ದಾರೆ. ಗುರುಗಳಿಗೆ ನಮ್ಮ ಜನ ತಲೆಬಾಗಿ ನಡೆಯುತ್ತಿರುವುದನ್ನು ಗಮನಿಸಿದ್ದೇವೆ. ಇಂದು ಪವಿತ್ರ ಕ್ಷೇತ್ರಕ್ಕೆ ಆಗಮಿಸಿ ಶ್ರೀಗಳ ದರ್ಶನ ಪಡೆದಿದ್ದೇನೆ ಎಂದರು.
ರಂಭಾಪುರೀ ಪೀಠದ ಕ್ಷೇತ್ರನಾಥ ವೀರಭದ್ರಸ್ವಾಮಿ ದೇವಾಲಯಕ್ಕೆ ಅಗಮಿಸಿದ ಡಿ.ಕೆ. ಶಿವಕುಮಾರ್ ಅವರಿಗೆ ಪೀಠದಿಂದ ಪೂರ್ಣಕುಂಭ ಸ್ವಾಗತ ನೀಡಲಾಯಿತು. ಕ್ಷೇತ್ರನಾಥ ವೀರಭದ್ರ ಸ್ವಾಮಿ ದರ್ಶನ ಪಡೆದು ವಿಶೇಷ ಪೂಜೆ ನೆರವೇರಿಸಿದರು. ನಂತರ ರಂಭಾಪುರೀ ಪೀಠದಲ್ಲಿರುವ ಎಲ್ಲ ದೇವಾಲಯಗಳಿಗೂ ತೆರಳಿ ಪೂಜೆ ಸಲ್ಲಿಸಿದರು.
ಸಾಲ ಪಾವತಿ ಮುಂದೂಡಲಿ: ಸಾರ್ವಜನಿಕರು ಹಾಗೂ ವಿವಿಧ ಸಂಘ-ಸಂಸ್ಥೆಗಳಲ್ಲಿ ಜನರು ಪಡೆದ ಸಾಲದ ಬಡ್ಡಿ ಹಾಗೂ ಕಂತು ಪಾವತಿಸುವುದನ್ನು ತಿಂಗಳ ಕಾಲ ಮುಂದಕ್ಕೆ ಹಾಕಬೇಕು ಎಂದು ಕೆಪಿಸಿಸಿ ನಿಯೋಜಿತ ಅಧ್ಯಕ್ಷ ಡಿ.ಕೆ.ಶಿವಕುಮಾರ್ ರಾಜ್ಯ ಹಾಗೂ ಕೇಂದ್ರ ಸರ್ಕಾರವನ್ನು ಆಗ್ರಹಿಸಿದರು.
ಕರೊನಾ ಭೀತಿ ಹಿನ್ನೆಲೆಯಲ್ಲಿ ಎಲ್ಲ ಕ್ಷೇತ್ರಗಳು ಆರ್ಥಿಕ ನಷ್ಟ ಅನುಭವಿಸುತ್ತಿದ್ದು ಈ ಕ್ರಮ ಅನುಸರಿಸುವುದು ಅನಿವಾರ್ಯ. ಈ ಬಗ್ಗೆ ಮುಖ್ಯಮಂತ್ರಿ ವಿಧಾನಸಭೆಯಲ್ಲಿ ಈ ವಿಚಾರ ಮಂಡಿಸಿ ನಿರ್ಣಯ ಕೈಗೊಂಡು ಕೇಂದ್ರಕ್ಕೆ ಶಿಫಾರಸು ಮಾಡಬೇಕು ಎಂದು ಜನತೆ ಪರವಾಗಿ ಕೋರುವುದಾಗಿ ಹೇಳಿದರು.
ಬ್ಯಾಂಕ್ನ ಕಾನೂನು ಸ್ಪಷ್ಟವಾಗಿರುವ ಸಂದರ್ಭದಲ್ಲಿ ಸಾಲ ಪಡೆದವರು ಕಂತು ಕಟ್ಟಲಾಗದೆ ಎನ್ಪಿಎ ಆಗುವ ಹಿನ್ನೆಲೆಯಲ್ಲಿ ರಾಜ್ಯ ಹಾಗೂ ಕೇಂದ್ರ ಸರ್ಕಾರ ನಾಗರಿಕರು ಹಾಗೂ ಸಂಸ್ಥೆಗಳನ್ನು ಉಳಿಸುವ ಕೆಲಸ ಮಾಡಬೇಕು ಎಂದು ಕೋರುವುದಾಗಿ ಹೇಳಿದರಲ್ಲದೆ, ಕಂತುಗಳನ್ನು ಕಟ್ಟಲು ಮಾ.31 ಅಂತಿಮ ದಿನ ಎಂದು ತಿಳಿಸಿದರು.
ರಾಜ್ಯದಲ್ಲಿ15 ದಿನಗಳಿಂದ ಎಲ್ಲ ರೀತಿಯ ವಹಿವಾಟು ಬಂದ್ ಮಾಡಲಾಗಿದ್ದು, ವರ್ತಕರು ಭಾರಿ ನಷ್ಟ ಅನುಭವಿಸುತ್ತಿದ್ದಾರೆ. ಬಹುತೇಕ ಜನರಿಗೆ ಬಾಡಿಗೆ ಪಾವತಿಸಲು ಸಾಧ್ಯವಾಗುತ್ತಿಲ್ಲ. ವೇತನ ಪಾವತಿ ನಿಲ್ಲಿಸಲು ಸಾಧ್ಯವಿಲ್ಲ ಎಂದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ. ಅಂಶುಮತ್, ಮಾಜಿ ಅಧ್ಯಕ್ಷ ಡಾ.ಡಿ.ಎಲ್. ವಿಜಯಕುಮಾರ್, ಎಐಸಿಸಿ ಪ್ರಧಾನ ಕಾರ್ಯದರ್ಶಿ ಬಿ.ಎಂ.ಸಂದೀಪ್, ಜಿಲ್ಲಾ ವಕ್ತಾರ ಶಿವಾನಂದಸ್ವಾಮಿ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.