ಜಿಲ್ಲೆ

ಕೆಪಿಸಿಸಿ ಸತ್ಯಶೋಧನಾ ಸಮಿತಿ ಸಭೆ

ಸುನಿಲ್ ಪೊನ್ನೇಟಿ

ಮಡಿಕೇರಿ:

ಕೊಡಗಿಗೆ ಅಗತ್ಯವಿರುವ ಪ್ರತ್ಯೇಕ ಲೋಕಸಭಾ ಸ್ಥಾನ ಮತ್ತು ಮೂರು ವಿಧಾನಸಭಾ ಕ್ಷೇತ್ರಗಳಿಗಾಗಿ ಪಕ್ಷದ ನಾಯಕರು ಹೋರಾಟ ಆರಂಭಿಸಲು ಇದು ಸಕಾಲ ಎಂದು ಕೆಪಿಸಿಸಿ ಸತ್ಯಶೋಧನಾ ಸಮಿತಿ ಅಭಿಪ್ರಾಯಪಟ್ಟಿದೆ. ಕೆಪಿಸಿಸಿ ಉಪಾಧ್ಯಕ್ಷ ವಿ.ಆರ್. ಸುದರ್ಶನ್, ಸೂರಜ್ ಹೆಗ್ಡೆ ಹಾಗೂ ವೆಂಕಟರಮಣಯ್ಯ ಒಳಗೊಂಡ ಕೆಪಿಸಿಸಿ ಸತ್ಯಶೋಧನಾ ಸಮಿತಿ ಭಾನುವಾರ ಮಡಿಕೇರಿಯಲ್ಲಿ ನಡೆಸಿದ ಪಕ್ಷದ ಜಿಲ್ಲಾ ಮಟ್ಟದ ಪದಾಧಿಕಾರಿಗಳು ಮತ್ತು ಶಾಸಕರ ಸಭೆಯಲ್ಲಿ ಈ ಅಭಿಪ್ರಾಯ ವ್ಯಕ್ತವಾಯಿತು.

ಕ್ಷೇತ್ರ ಪುನರ್ವಿಂಗಡಣೆಯ ಚಟುವಟಿಕೆಗಳು ಇನ್ನೇನು ಕೆಲವೇ ದಿನಗಳಲ್ಲಿ ಆರಂಭವಾಗಲಿದೆ. ಈ ಹಿನ್ನೆಲೆಯಲ್ಲಿ ಪಕ್ಷದ ಪ್ರಮುಖರು ಪ್ರತ್ಯೇಕ ಲೋಕಸಭಾ ಸ್ಥಾನ ಮತ್ತು ಮೊದಲು ಇದ್ದಂತೆ ಮೂರು ವಿಧಾನಸಭಾ ಸ್ಥಾನಗಳಿಗೆ ಒತ್ತಾಯ ಹೇರುವ ಪ್ರಕ್ರಿಯೆ ಶುರುಮಾಡಬೇಕಿದೆ. ಕೊಡಗು ಮತ್ತು ಚಿಕ್ಕಮಗಳೂರು ಪ್ರತ್ಯೇಕ ಲೋಕಸಭಾ ಕ್ಷೇತ್ರಗಳಾಗುವ ಅರ್ಹತೆ ಹೊಂದಿವೆೆ. ಈ ಎರಡೂ ಜಿಲ್ಲೆಗಳು ಭೌಗೋಳಿಕವಾಗಿ ಸಾಮ್ಯತೆ ಹೊಂದಿದ್ದು ಪ್ರತ್ಯೇಕ ಲೋಕ ಸಭಾ ಕ್ಷೇತ್ರವಾಗುವ ಅನಿವಾರ್ಯತೆ ಇದೆ. ಈ ನಿಟ್ಟಿನಲ್ಲಿ ಕಾನೂನಾತ್ಮಕ ವರದಿಗಳನ್ನು ತಯಾರಿಸಿ ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಮತ್ತು ರಾಜ್ಯ ಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಒಪ್ಪಿಸುವಂತೆ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರೂ ಆದ ವಿರಾಜಪೇಟೆ ಶಾಸಕ ಎ.ಎಸ್.ಪೊನ್ನಣ್ಣ ಅವರಿಗೆ ಸುದರ್ಶನ್ ಸೂಚಿಸಿದರು.

ಈಶಾನ್ಯ ರಾಜ್ಯಗಳಿಗೆ ಇರುವ ರಾಜಕೀಯ ವಿನಾಯಿತಿಗೆ ಅನುಗುಣವಾಗಿ ಕೊಡಗು ಜಿಲ್ಲೆಗೆ ಮೂರು ಅಥವಾ ಅದಕ್ಕಿಂತ ಹೆಚ್ಚಿನ ವಿಧಾನ ಸಭಾ ಕ್ಷೇತ್ರವನ್ನು ಪಡೆಯುವ ಅವಕಾಶವಿದೆ. ಇದಕ್ಕೆ ಪೂರಕವಾದ ಕ್ರಮಕ್ಕೆ ಮುಂದಾಗಲು ಶಾಸಕರಾದ ಎ.ಎಸ್.ಪೊನ್ನಣ್ಣ ಮತ್ತು ಡಾ ಮಂತರ್ ಗೌಡ ಪ್ರಯತ್ನಿಸಬೇಕು ಎಂದು ಸಲಹೆ ನೀಡಿದರು.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ತೀತಿರ ಧರ್ಮಜಾ ಉತ್ತಪ್ಪ, ಮಾಜಿ ಎಂಎಲ್‌ಸಿ ವೀಣಾ ಅಚ್ಚಯ್ಯ, ಪ್ರಮುಖರಾದ ಎಂ.ಲಕ್ಷಣ್, ಕೆ.ಪಿ. ಚಂದ್ರಕಲಾ, ಕೆ.ಕೆ. ಮಂಜುನಾಥ್ ಕುಮಾರ್, ಹೆಚ್.ಎಸ್. ಚಂದ್ರಮೌಳಿ, ವಿ.ಪಿ. ಶಶಿಧರ್ ಸೇರಿದಂತೆ ಕೆಪಿಸಿಸಿ ಮತ್ತು ಡಿ.ಸಿ.ಸಿ. ಪದಾಧಿಕಾರಿಗಳು ಸಭೆಯಲ್ಲಿ ಇದ್ದರು.