ಕೊಡೇಕಲ್‌ನ ಶ್ರೀ ನಿಜಲಿಂಗೇಶ್ವರ ದೇವಸ್ಥಾನಕ್ಕೆ ಹೋಗುವ ರಸ್ತೆಯುದ್ದಕ್ಕೂ ಹರಡಿಕೊಂಡಿರುವ ತ್ಯಾಜ್ಯ. 
ಜಿಲ್ಲೆ

ತ್ಯಾಜ್ಯದಿಂದ ಕೂಡಿದ ದೇವಸ್ಥಾನ ರಸ್ತೆ

ರಾಜು ಯಮಕನಮರಡಿ

ಕೊಡೇಕಲ್: ದೇವರ ದರ್ಶನಕ್ಕೆ ಹೋಗುವ ರಸ್ತೆ ಬದಿಯ ಖಾಲಿ ಸ್ಥಳದಲ್ಲಿ ಶೇಖರಣೆಯಾಗುತ್ತಿರುವ ತ್ಯಾಜ್ಯ ಎಲ್ಲೆಡೆ ಹರಡಿ ದುರ್ವಾಸನೆ ಬೀರುತ್ತಿದ್ದು, ಭಕ್ತರು ದೇವಸ್ಥಾನಕ್ಕೆ ಹೋಗಲು ಪರದಾಡುವಂತ ಸ್ಥಿತಿ ನಿರ್ಮಾಣವಾಗಿದೆ.

ಗ್ರಾಮದ ಶ್ರೀ ನಿಜಲಿಂಗೇಶ್ವರ ದೇವಸ್ಥಾನಕ್ಕೆ ಹೋಗುವ ದಾರಿ ಸಂಪೂರ್ಣ ಮಲೀನಗೊಳ್ಳುತ್ತಿದ್ದು, ನಿತ್ಯ ಭಕ್ತರು ಮೂಗು ಮುಚ್ಚಿಕೊಂಡು ಹೋಗಬೇಕಾಗಿದೆ. ಖಾಲಿ ಸ್ಥಳದಲ್ಲಿ ಹಲವು ರೀತಿಯ ತ್ಯಾಜ್ಯ ಹಾಕುತ್ತಾ ಮತ್ತು ಅದೇ ಸ್ಥಳದಲ್ಲಿ ಮಲ-ಮೂತ್ರ ವಿಸರ್ಜನೆ ಮಾಡುವುದರಿಂದ ಇಡೀ ಸ್ಥಳ ದುರ್ವಾಸನೆಯಿಂದ ಕೂಡಿದೆ. ಅಲ್ಲದೆ ತ್ಯಾಜ್ಯ ವಸ್ತುಗಳಲ್ಲಿ ಹಂದಿ, ನಾಯಿ ಬಂದು ತ್ಯಾಜ್ಯವನ್ನು ಮತ್ತಷ್ಟು ಹರಡುತ್ತಿವೆ.

ಮಹಾಲಯ ಅಮವಾಸ್ಯೆ ದಿನ ನಡೆಯುವ ಶ್ರೀ ನಿಜಲಿಂಗೇಶ್ವರ ಉತ್ಸವ ನಿಮಿತ್ತ ನಿತ್ಯ ದೇವಸ್ಥಾನದಲ್ಲಿ ಭಜನೆ ಹಮ್ಮಿಕೊಳ್ಳಲಾಗಿದ್ದು, ಭಜನಾ ಕಲಾವಿದರು ಈ ಕೊಳಚೆ ರಸ್ತೆಯಲ್ಲಿಯೇ ಸಂಚಾರ ಮಾಡುತ್ತಿರುವುದು ಬೇಸರದ ಸಂಗತಿಯಾಗಿದೆ.

ಗ್ರಾಪಂನಿಂದ ಸಫಾಯಿ ಕರ್ಮಚಾರಿಗಳು ಎರಡು ದಿನಗಳಿಗೊಮ್ಮೆ ರಸ್ತೆ ಹಾಗೂ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮಾತ್ರ ಬೀಳುವ ತ್ಯಾಜ್ಯ ಸಂಗ್ರಹಿಸಿಕೊಂಡು ಹೋಗುತ್ತಾರೆ. ಆದರೆ ಅವರಿಗೆ ಈ ದೇವಸ್ಥಾನದ ರಸ್ತೆಯಲ್ಲಿ ಹರಡಿಕೊಂಡಿರುವ ತ್ಯಾಜ್ಯ ಮಾತ್ರ ಕಣ್ಣಿಗೆ ಕಾಣಿಸದಿರುವುದು ವಿರ‍್ಯಾಸವಾಗಿದೆ.

ಕೂಡಲೇ ಗ್ರಾಪಂನವರು ರಸ್ತೆಗೆ ಹರಡಿಕೊಂಡಿರುವ ತ್ಯಾಜ್ಯವನ್ನು ವಿಲೇವಾರಿ ಮಾಡುವುದರ ಜತೆಗೆ ರಸ್ತೆಯಲ್ಲಿ ತ್ಯಾಜ್ಯ ಹಾಕದಂತೆ ಜನರಿಗೆ ತಿಳಿಹೇಳುವ ಕೆಲಸ ಆಗಬೇಕಾಗಿದೆ.

ಶ್ರೀ ನಿಜಲಿಂಗೇಶ್ವರ ದೇವಸ್ಥಾನಕ್ಕೆ ಹೋಗಬೇಕಾದರೆ ರಸ್ತೆಯಲ್ಲಿ ಹರಡಿಕೊಂಡಿರುವ ತ್ಯಾಜ್ಯದಲ್ಲಿಯೇ ಹೋಗುವುದು ಅನಿವಾರ್ಯ. ಗ್ರಾಮ ಪಂಚಾಯಿತಿ ಕೂಡಲೇ ಸ್ವಚ್ಛಗೊಳಿಸಿ ಇಡೀ ವಾತಾವರಣ ಶುಚಿಗೊಳಿಸಬೇಕು.
| ಬಸನಗೌಡ ಮಾಲಿಗೌಡ್ರ ಕೊಡೇಕಲ್