ಚಿಕ್ಕಮಗಳೂರು: ಕರೊನಾ ನಿಯಂತ್ರಣದ ಸಲುವಾಗಿ ಶನಿವಾರ ಕೊವ್ಯಾಕ್ಸಿನ್ ಹಾಗೂ ಕೋವಿಶೀಲ್ಡ್ ಲಸಿಕೆ ನೀಡಲಾಯಿತು. ಎರಡೆರಡು ಬಾರಿ ಪೂರ್ವಾಭ್ಯಾಸ ನಡೆದಿದ್ದರೂ ಹೇಗೋ ಏನೋ ಎಂದು ಅಂಜಿಕೆಯಿಂದಲೇ ಜಿಲ್ಲಾ ಆಸ್ಪತ್ರೆ ಲಸಿಕಾ ಕೇಂದ್ರಕ್ಕೆ ಆಗಮಿಸಿದ ಆರೋಗ್ಯ ಕಾರ್ಯಕರ್ತರು ಆಧಾರ್ ಕಾರ್ಡ್ ಪ್ರದರ್ಶಿಸಿ ಲಸಿಕೆ ಹಾಕಿಸಿಕೊಂಡರು. ಅರ್ಧ ಗಂಟೆ ಕಾಲದ ನಿಗಾ ವ್ಯವಸ್ಥೆಯಲ್ಲಿ ಯಾವುದೇ ಅಡ್ಡ ಪರಿಣಾಮವಾಗದ್ದರಿಂದ ಸಮಾಧಾನಗೊಂಡರು.
ಜಿಲ್ಲಾ ಸಾರ್ವಜನಿಕ ಆಸ್ಪತ್ರೆಯ ಡಿ.ದರ್ಜೆ ನೌಕರರಾದ ಗುರಮ್ಮ ಮೊದಲು ಲಸಿಕೆ ಹಾಕಿಸಿಕೊಳ್ಳುವುದೆಂದಾಗ ಕೊಂಚ ವಿಚಲಿತರಾದಂತಿದ್ದರು. ಹಿರಿಯ ಆರೋಗ್ಯ ಸಹಾಯಕಿ ಎನ್.ಪದ್ಮಪ್ರಿಯಾ ಅವರು ಗುರಮ್ಮ ಅವರಿಗೆ ಮೊದಲ ಲಸಿಕೆ ನೀಡಿದರು. ನಂತರ ಒಬ್ಬೊಬ್ಬರಾಗಿ ಲಸಿಕೆ ಹಾಕಿಸಿಕೊಂಡು ಯಾವುದೇ ಸಮಸ್ಯೆಯಾಗುವುದಿಲ್ಲವೆಂದು ಗೊತ್ತಾದ ಬಳಿಕ ಎಲ್ಲರಲ್ಲಿದ್ದ ಆತಂಕ ಮರೆಯಾಯಿತು. ಅದರಲ್ಲೂ ಆರೋಗ್ಯ ಇಲಾಖೆ ಅಧಿಕಾರಿಗಳಲ್ಲಿ ಸಂತೃಪ್ತಭಾವ ಕಂಡು ಬಂದಿತು.
ಮೊದಲ ಲಸಿಕೆ ಪ್ರಯೋಗ ಏನಾದರೂ ಸಮಸ್ಯೆಯಾಗಬಹುದೇನೋ ಎನ್ನುವ ಆತಂಕ, ಕುತೂಹಲ ಹೆಚ್ಚಿದ್ದ ಕಾರಣ ಚುನಾಯಿತ ಪ್ರತಿನಿಧಿಗಳಲ್ಲದೆ, ವೈದ್ಯಾಧಿಕಾರಿಗಳು, ಆರೋಗ್ಯ ಇಲಾಖೆ ಸಿಬ್ಬಂದಿ ಮತ್ತಿತರರು ಲಸಿಕಾ ಕೊಠಡಿಯಲ್ಲಿ ಹಾಜರಿದ್ದು ಗಮನಿಸಿದರು. ನಂತರ ದೃಷ್ಟಿ ಹರಿದದ್ದು ಲಸಿಕೆ ಪಡೆದವರಿದ್ದ ನಿಗಾ ಕೊಠಡಿಯತ್ತ. ಸುಮಾರು ಅರ್ಧ ಗಂಟೆ ಕಾಲ ಕಾದು ಕುಳಿತಿದ್ದು, ಲಸಿಕೆ ಪಡೆದವರು ಆರೋಗ್ಯವಾಗಿ ಸಹಜ ಸ್ಥಿತಿಯಲ್ಲಿರುವುದು ಖಚಿತವಾಗುತ್ತಿದ್ದಂತೆ ಎಲ್ಲರ ಮುಖದಲ್ಲಿ ಮಂದಹಾಸ ಮೂಡಿತು.