ಕೊಟ್ಟೂರಿನಲ್ಲಿ ಪೊಲೀಸ್ ಠಾಣೆ, ಸಿಪಿಐ ಕಚೇರಿ ಕಟ್ಟಡ ನಿರ್ಮಾಣಕ್ಕೆ ಸೋಮವಾರ ಭೂಮಿ ಪೂಜೆ ನೆರವೇರಿಸಿದರು. 
ಜಿಲ್ಲೆ

ಕೊಟ್ಟೂರಲ್ಲಿ ಪೊಲೀಸ್ ಠಾಣೆ, ಸಿಪಿಐ ಕಚೇರಿ ಕಟ್ಟಡ ನಿರ್ಮಾಣ ಕಾಮಗಾರಿಗೆ ಚಾಲನೆ

ಕೊಟ್ಟೂರು: ಸಮಾಜದಲ್ಲಿ ಶಾಂತಿ ನೆಲೆಸಲು, ಅಪರಾಧ ಪ್ರಕರಣಕ್ಕೆ ಕಡಿವಾಣ ಹಾಕಲು ಸಾರ್ವಜನಿಕರ ಸಹಕಾರ ಮುಖ್ಯವಾಗಿದೆ ಎಂದು ಎಸ್ಪಿ ಸೈದುಲು ಅದಾವತ್ ಹೇಳಿದರು.

ಪಟ್ಟಣದ ಪ್ರವಾಸಿ ಮಂದಿರದ ಪಕ್ಕದ ಎರಡೂವರೆ ಎಕರೆಯಲ್ಲಿ ಪೊಲೀಸ್ ಠಾಣೆ, ಸಿಪಿಐ ಕಚೇರಿ ಕಟ್ಟಡ ನಿರ್ಮಾಣಕ್ಕೆ ಸೋಮವಾರ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು. ಪೊಲೀಸ್ ಠಾಣೆ, ಸಿಪಿಐ ಕಚೇರಿ ಕಟ್ಟಡ ನಿರ್ಮಾಣಕ್ಕೆ ಪತ್ರಕರ್ತರು ವರದಿ ಹಾಗೂ ವಿವಿಧ ಸಂಘಟನೆಗಳು ಜಂಟಿಯಾಗಿ ಧರಣಿಗೆ ಮುಂದಾಗಿದ್ದು, ಇಡೀ ರಾಜ್ಯದಲ್ಲಿ ಮೊದಲು. ನಿಮ್ಮ ಸಹಕಾರಕ್ಕೆ ಪೊಲೀಸ್ ಇಲಾಖೆ ಆಭಾರಿಯಾಗಿದೆ ಎಂದರು.

ಸಮಾಜದಲ್ಲಿ ಶಾಂತಿ, ಸುವ್ಯವಸ್ಥೆ ಕಾಪಾಡಲು ಪೊಲೀಸರ ಕರ್ತವ್ಯಕ್ಕೆ ಸಾರ್ವಜನಿಕರು ಸಹಕರಿಸಿದರೆ ಎರಡ್ಮೂರು ವರ್ಷಗಳಲ್ಲಿ ಕೊಟ್ಟೂರು ಪೊಲೀಸ್ ಠಾಣೆ ರಾಜ್ಯದಲ್ಲಿ ಮಾದರಿ ಯಾಗಲಿದೆ. 6 ತಿಂಗಳೊಳಗೆ 1.73 ಕೋಟಿ ರೂ. ವೆಚ್ಚದಲ್ಲಿ ಪೊಲೀಸ್ ಠಾಣೆ, ಸಿಪಿಐ ಕಚೇರಿ ನಿರ್ಮಾಣವಾಗಲಿದೆ ಎಂದರು.

ಕೂಡ್ಲಿಗಿ ಡಿವೈಎಸ್ಪಿ ಹರೀಶ ರೆಡ್ಡಿ, ಹರಪನಹಳ್ಳಿ ಡಿವೈಎಸ್ಪಿ ಮಲ್ಲೇಶ ದೊಡ್ಡಮನಿ ನಾಯ್ಕ, ರಾಜ್ಯ ಬೀಜ ನಿಗಮದ ನಿರ್ದೇಶಕ ರಾಜೇಂದ್ರ ಪ್ರಸಾದ್, ತಾಪಂ ಅಧ್ಯಕ್ಷ ಎಸ್.ಗುರುಮೂರ್ತಿ, ಜಿಪಂ ಮಾಜಿ ಉಪಾಧ್ಯಕ್ಷ ದೊಡ್ಡ ರಾಮಣ್ಣ, ಬಿಜೆಪಿ ಮುಖಂಡ ಏರ್‌ಟೆಲ್ ಚಂದ್ರು, ರೈತ ಸಂಘದ ಮುಖಂಡ ಭರ‌್ಮಪ್ಪ ಮಾತನಾಡಿದರು. ತ್ವರಿತವಾಗಿ ಕಾಮಗಾರಿಗೆ ಚಾಲನೆ ನೀಡಿದ ಹಿನ್ನೆಲೆಯಲ್ಲಿ ವಿವಿಧ ಸಂಘಟನೆಗಳ ಮುಖಂಡರು ಎಸ್ಪಿ, ಡಿವೈಎಸ್ಪಿ, ಪಿಎಸ್‌ಐರನ್ನು ಸನ್ಮಾನಿಸಿದರು. ಪಪಂ ಸದಸ್ಯರಾದ ಶಫಿ, ವೀಣಾ ವಿವೇಕಾನಂದ, ಜೆಸಿಐ ಕೊಟ್ಟೂರು ಕಾಟನ್ ಅಧ್ಯಕ್ಷ ವಿಕ್ರಂ, ಬಿಜೆಪಿ ಮುಖಂಡ ಪಿ.ಎಚ್.ಕೊಟ್ರೇಶ, ಪಪಂ ಮಾಜಿ ಸದಸ್ಯ ದುರುಗೇಶ, ದಸಂಸ ಮುಖಂಡ ಮರಿಸ್ವಾಮಿ, ದೇವದಾಸಿ ವಿಮೋಚನಾ ಸಂಘದ ಅಧ್ಯಕ್ಷೆ ಮೂಗಮ್ಮ, ಆಟೋ ಸಂಘದ ಅಧ್ಯಕ್ಷ ಶಿವಯ್ಯ, ರೈತ ಸಂಘದ ಮುಖಂಡ ಕೊಟ್ರಪ್ಪ , ಸಿಪಿಐ ಎಚ್.ದೊಡ್ಡಣ್ಣ ಇದ್ದರು.