ಕೊಟ್ಟೂರು: ಕೊಟ್ಟೂರೇಶ್ವರ ಕಾಲೇಜು ಸ್ಥಾಪನೆಗೊಂಡು 55 ವರ್ಷ ಪೂರೈಸಿದ ಪ್ರಯುಕ್ತ ಜ.18 ಮತ್ತು 19 ರಂದು ಸುವರ್ಣ ಮಹೋತ್ಸವ ಹಮ್ಮಿಕೊಳ್ಳಲಾಗಿದೆ ಎಂದು ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ಸಿದ್ಧರಾಮ ಕಲ್ಮಠ ತಿಳಿಸಿದರು.
ಪಟ್ಟಣದ ಕಾಲೇಜಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಜ.18ರ ಕಾರ್ಯಕ್ರಮದಲ್ಲಿ ಉಜ್ಜಿನಿ ಜಗದ್ಗುರುಗಳು ಸಾನ್ನಿಧ್ಯ ವಹಿಸುವರು. ಸಚಿವೆ ಶಶಿಕಲಾ ಜೊಲ್ಲೆ ಉದ್ಘಾಟಿಸುವರು. ಸಂಘದ ಅಧ್ಯಕ್ಷ ಎಚ್.ಎಂ.ಗುರುಸಿದ್ದಸ್ವಾಮಿ ಅಧ್ಯಕ್ಷತೆ ವಹಿಸುವರು. ‘ಜ್ಞ್ಞಾನದೇಗುಲ’ ಸ್ಮರಣ ಸಂಚಿಕೆ, ‘ಚರಿತ್ರೆಯ ಜಾಡಿನಲ್ಲಿ’, ‘ಪ್ರತಿಭೆಯ ಸಿರಿ’ ಕೃತಿಗಳು ಬಿಡುಗಡೆ ಆಗಲಿವೆ. ಪುಸ್ತಕ ಮಳಿಗೆ, ವಿಜ್ಞ್ಞಾನ ವಸ್ತು ಪ್ರದರ್ಶನ ಆಯೋಜಿಸಲಾಗಿದೆ. ಸಂಜೆ ಜಾನಪದ ವೈಭವ, ಜವಪದ ಜೀವನ ಮೌಲ್ಯಗಳ ಕುರಿತು ಉಪನ್ಯಾಸ, ಸಂಗೀತ ರಸ ಸಂಜೆ ಹಾಗೂ ‘ಆಲ್‌ದಿ ಬೆಸ್ಟ್’ ನಾಟಕ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಜ.19ರಂದು ‘ಸ್ತ್ರೀ ಸಂವೇದನೆ ವರ್ತಮಾನ ಸ್ತ್ರೀ ಸಬಲೀಕರಣ’ ಕುರಿತು ಮಹಿಳಾ ಗೋಷ್ಠಿ, ಹಳೆಯ ವಿದ್ಯಾರ್ಥಿಗಳಿಂದ ವಿವಿಧ ಕಾರ್ಯಕ್ರಮ ನಡೆಯಲಿವೆ. ಬಳ್ಳಾರಿ, ಹೊಸಪೇಟೆ, ಹಡಗಲಿ ಕಲಾವಿದರಿಂದ ನೃತ್ಯ ವೈಭವ, ಪ್ರಕಾಶ್ ಹೆಮ್ಮಾಡಿ ಅವರಿಂದ ಜಾದೂ ಪ್ರದರ್ಶನವಿದೆ. ಅಂದು ಸಂಜೆ ಜಗದ್ಗುರು ಶ್ರೀ ಮುಪ್ಪಿನ ಬಸವಲಿಂಗ ಸ್ವಾಮೀಜಿಗಳ ಸಾನ್ನಿಧ್ಯದಲ್ಲಿ ಸಮಾರೋಪ ನಡೆಯಲಿದೆ. ನಿವೃತ್ತ ಪೊಲೀಸ್ ಮಹಾ ನಿರ್ದೇಶಕ ಶಂಕರ ಬಿದರಿ ಪಾಲ್ಗೊಳ್ಳಲಿದ್ದಾರೆ. ನಂತರ ಹಾಸ್ಯ ಕಾರ್ಯಕ್ರಮ, ಗೆಣಕಿಹಾಳ ಕಲಾವಿದರಿಂದ ‘ರಕ್ತರಾತ್ರಿ’ ನಾಟಕ ಪ್ರದರ್ಶನ ಇರಲಿದೆ ಎಂದು ಹೇಳಿದರು.